ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ: ಕೋಮು ಸೌಹಾರ್ದತೆಯ ರೊಟ್ಟಿ ಜಾತ್ರೆ

Last Updated 28 ಅಕ್ಟೋಬರ್ 2021, 1:44 IST
ಅಕ್ಷರ ಗಾತ್ರ

ಜೇವರ್ಗಿ: ಗ್ರಾಮೀಣ ಭಾಗದಲ್ಲಿ ಕೋಮು ಸೌಹಾರ್ದ ಹಾಗೂ ಧಾರ್ಮಿಕ ಭಾವನೆಗಳನ್ನು ಗಟ್ಟಿಗೊಳಿಸುವ ತಾಲ್ಲೂಕಿನಶಕಾಪುರದ ತಪೋವನ ಮಠದಲ್ಲಿ ನಡೆಯುವ ರೊಟ್ಟಿ ಜಾತ್ರೆ ವರ್ಷದಿಂದ ವರ್ಷಕ್ಕೆ ಖ್ಯಾತಿ ಪಡೆಯುತ್ತಿದೆ.

ಶಕಾಪುರದ ಸಿದ್ಧರಾಮ ಶಿವಯೋಗಿಗಳ 71ನೇ ಪುಣ್ಯಾರಾಧನೆ ಹಾಗೂ ಧಾರ್ಮಿಕ ಸಭೆಯ ಅಂಗವಾಗಿ ಪ್ರತಿವರ್ಷ ರೊಟ್ಟಿ ಜಾತ್ರೆ ನಡೆಯುತ್ತದೆ. ಈ ವೇಳೆ ಮಠದಿಂದ ಜೋಳ ಮತ್ತು ಸಜ್ಜೆ ಹಿಟ್ಟನ್ನುಹರನೂರು, ಶಾಕಾಪುರ, ಅವರದ್, ಹಲಗಡ್ಲ, ರೇವಣೂರು ಸೇರಿದಂತೆ ಇತರ ಗ್ರಾಮಗಳ ಸರ್ವ ಧರ್ಮೀಯರಿಗೆ ನೀಡಲಾಗುತ್ತದೆ.

ಹಿಟ್ಟು ಪಡೆದ ಭಕ್ತರು ಭೇದ ಭಾವ ಮರೆತು ಮನೆಯಲ್ಲಿ ಖಡಕ್ ರೊಟ್ಟಿ, ಬಿಸಿ ರೊಟ್ಟಿಗಳನ್ನು ಮಾಡಿ ಮಠಕ್ಕೆ ಒಪ್ಪಿಸುತ್ತಾರೆ. ಜಾತ್ರೆಯಲ್ಲಿ ಸೇರುವ ಸಹಸ್ರಾರು ಭಕ್ತರಿಗೆ ರೊಟ್ಟಿಯನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಸರ್ವ ಧರ್ಮೀಯರ ಸಮಾಗಮದ ಜತೆಗೆ ಭಕ್ತರು ಸಾಮೂಹಿಕವಾಗಿ ರೊಟ್ಟಿ ಊಟ ಸವಿಯುತ್ತಾರೆ.

‘ಅ.26ರಂದು ಮಠದ ಆವರಣದಲ್ಲಿ ಶಿವಯೋಗಿಗಳ ಪುಣ್ಯಾರಾಧನೆ, ಧಾರ್ಮಿಕ ಸಭೆ ನಡೆಯಲಿದೆ. 5–6 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಪ್ರಸಾದಕ್ಕಾಗಿ 20 ಕ್ವಿಂಟಲ್ ಜೋಳ ಮತ್ತು ಸಜ್ಜೆ ರೊಟ್ಟಿ ತಯಾರಿಸಲಾಗಿದೆ. 5 ಕ್ವಿಂಟಲ್ ವಿವಿಧ ಧಾನ್ಯ ಹಾಗೂ ತರಹೇವಾರಿ ತರಕಾರಿಗಳಿಂದ ಭಜ್ಜಿ ಪಲ್ಯ ಸಿದ್ಧಪಡಿಸಲಾಗುವುದು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ’ ಎಂದು ಮಠದ ಪೀಠಾಧಿಪತಿ ಸಿದ್ಧರಾಮ ಶಿವಾಚಾರ್ಯ ಹೇಳಿದರು.

ಅ.26ರ ಬೆಳಿಗ್ಗೆ 6ಕ್ಕೆ ಕತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ ಜರುಗಲಿದೆ. ಸಂಜೆ 5 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 8ಕ್ಕೆ ಮಠದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸಿದ್ಧರಾಮ ಶಿವಾಚಾರ್ಯರ ಸಾನ್ನಿಧ್ಯ ವಹಿಸುವರು.

ಸಿದ್ಧರಾಮ ಶಿವಯೋಗಿಗಳ ಜೀವನ ಸಾಧನೆ ಕುರಿತು ಬಾಗಲಕೋಟದ ಪರಮರಾಮಾರೂಢ ಸ್ವಾಮೀಜಿ ಉಪನ್ಯಾಸ ನೀಡುವರು.‌ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ, ಪಾಳಾದ ಗುರುಮೂರ್ತಿ ಶಿವಾಚಾರ್ಯ, ವೆಂಕಟಬೇನೂರಿನ ಸಿದ್ಧರೇಣುಕ ಶಿವಾಚಾರ್ಯರು ನೇತೃತ್ವ ವಹಿಸುವರು. ಧಾರ್ಮಿಕ ಸಭೆಯಲ್ಲಿ ಕಲಾವಿದರು ಸಂಗೀತ ಹಾಗೂ ಭಜನೆ ಕಾರ್ಯಕ್ರಮ ನಡೆಸಿಕೊಡುವರು ಎಂದು ಅವರು ತಿಳಿಸಿದರು.

*ರೊಟ್ಟಿ ಜಾತ್ರೆಯಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ಭಾಗಗಳ ಭಕ್ತರು ಪಾಲ್ಗೊಂಡು ಸಾಮೂಹಿಕವಾಗಿ ರೊಟ್ಟಿ ಊಟ ಸವಿಯುತ್ತಾರೆ

ಸಿದ್ಧರಾಮ ಶಿವಾಚಾರ್ಯ, ತಪೋವನ ಮಠದ ಪೀಠಾಧಿಪತಿ

ಅ.26 ರಿಂದಕಲ್ಕತ್ತದೇವಿ ಜಾತ್ರೆ
ಅ.26 ರಿಂದ 31ರವರೆಗೆ ಪಟ್ಟಣದ ಆರಾಧ್ಯ ದೇವತೆ ಕಲ್ಕತ್ತದೇವಿ (ಮಹಾಲಕ್ಷ್ಮಿ) ಜಾತ್ರೆ ನಡೆಯಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅ.26ರ ರಾತ್ರಿ 10ಕ್ಕೆ ಬಡಿಗೇರ ಮನೆಯಲ್ಲಿ ದೇವಿ ಮೂರ್ತಿ ಸ್ಥಾಪನೆ ಹಾಗೂ 28ರಂದು ಭಜನೆ ಕಾರ್ಯಕ್ರಮ ಜರುಗಲಿದೆ ಎಂದುಜಾತ್ರಾ ಸಮಿತಿ ಹಾಗೂ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಅ.28ರಂದು ಚಿಕ್ಕ ಜೇವರ್ಗಿಯಿಂದ ಮಂಟಪ ಬರಲಿದ್ದು, ರಾತ್ರಿ 9ರಿಂದ ಬೆಳಿಗ್ಗೆ 4ರವರೆಗೆ ಬಡಿಗೇರ ಮನೆಯಿಂದ ನಡುಗಟ್ಟೆಗೆ ದೇವಿ ಮೂರ್ತಿಯನ್ನು ತರಲಾಗುತ್ತದೆ.

ಅ.29ರಂದು ನೈವೇದ್ಯ ಹಾಗೂ ದೇವಸ್ಥಾನದಿಂದ ಅನ್ನ ಸಂತರ್ಪಣೆ ನಡೆಯಲಿದೆ.

ಅ.30ರ ಶನಿವಾರ ಬೆಳಿಗ್ಗೆ 10ರಿಂದ 4ರವರೆಗೆ ರಥೋತ್ಸವ ಜರುಗಲಿದೆ. ಪಟ್ಟಣದಲ್ಲಿ ಸಂಜೆ ಜಂಗೀ ಕುಸ್ತಿ, ರಾತ್ರಿ 8 ಗಂಟೆಗೆ ಲಾವಣಿ ಪದ, ಬಯಲಾಟ ಮತ್ತು ನಾಟಕಗಳು ಜರುಗಲಿವೆ ಎಂದು ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT