ಸೋಮವಾರ, ನವೆಂಬರ್ 30, 2020
24 °C
‘ಸಾಧಕರ ಮನದಾಳದ ಮಾತು’ ಕೃತಿ ಬಿಡುಗಡೆ

‘ಸಾಧಕರ ಜೀವನ ಯುವಜನರಿಗೆ ಪ್ರೇರಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಅಪಾರ ಶ್ರಮ, ಶ್ರದ್ಧೆ ಮತ್ತು ತ್ಯಾಗದಿಂದ ಯಶಸ್ಸು ಸಾಧಿಸಿದವರ ಜೀವನ ಯುವಜನರಿಗೆ ಪ್ರೇರಣೆಯಾಗಬೇಕು’ ಎಂದು ಕಾಂಗ್ರೆಸ್ ಮುಖಂಡ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ನಡೆದ, ‘ಸಾಧಕರ ಮನದಾಳದ ಮಾತು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವಕರು ಪರಿಶ್ರಮದ ಹಾದಿಯನ್ನು ತುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಸಾಧಕರು ಅನುಭವಿಸಿದ ಕಷ್ಟ, ಸಮಾಜ ಅವರಿಗೆ ನೀಡಿದ ಪ್ರೋತ್ಸಾಹದ ಕೆಲಸಗಳನ್ನು ತಿಳಿಸಿದರೆ ಅವರೂ ಕೂಡಾ ಸಾಧನೆಯ ಹಾದಿಯನ್ನು ಹಿಡಿಯುತ್ತಾರೆ. ಸಮಾಜದ ಏಳ್ಗೆಗಾಗಿ ಜೀವನವನ್ನು ಮುಡುಪಾಗಿಟ್ಟವರನ್ನು ಗುರುತಿಸುವ ಕೆಲಸವಾಗಬೇಕು’ ಎಂದರು.

‘ಪ್ರತಿಯೊಬ್ಬರ ಕೊಡುಗೆ ಇದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲಾ ಕ್ಷೇತ್ರಗಳಲ್ಲೂ ಸಾಧಕರು ಮೂಡಿಬರಬೇಕು. ಅವರ ಸಾಧನೆಯ ಕತೆಗಳನ್ನು ದಾಖಲೀಕರಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ಭಾಗದ ಸಾಧಕರ ಮನದಾಳದ ಮಾತುಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ  ವೀರಭದ್ರ ಸಿಂಪಿ ಮಾತನಾಡಿ, ‘ಕಲ್ಯಾಣ ಕರ್ನಾಟಕದಲ್ಲಿ ಸಾಧನೆ ಮಾಡಿದವರು ಸಾಕಷ್ಟು ಜನರು ಇದ್ದಾರೆ. ಆದರೆ ಅವರ ಸಾಧನೆಯನ್ನು ದಾಖಲೀಕರಣ ಮಾಡುವ ಪ್ರಯತ್ನಗಳು ನಡೆಯುತ್ತಿಲ್ಲ’ ಎಂದರು.

‘ಜಿಲ್ಲೆಯ ವಿವಿಧ ಕ್ಷೇತ್ರಗಳ 25 ಸಾಧಕರ ಯಶೋಗಾಥೆಯನ್ನು ತಿಳಿಸುವ ಪ್ರಯತ್ನ ಕೃತಿಯಲ್ಲಿದೆ. ಬಾಲ್ಯ ಜೀವನ, ಸಂಕಷ್ಟದ ದಿನಗಳ ಮೆಲುಕು, ಶಿಕ್ಷಣ, ಉದ್ಯೋಗ ಕುರಿತು ಸಾಧಕರ ಮಾತುಗಳನ್ನು ಬರಹ ರೂಪದಲ್ಲಿ ಇಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಭಾಗದ ಮತ್ತಷ್ಟು ಸಾಧಕರನ್ನು ಪರಿಚಯಿಸುವ ಕೆಲಸ ಮಾಡಲಾಗುವುದು’ ಎಂದು ತಿಳಿಸಿದರು. 

ಹಾರಕೂಡ ಚನ್ನಬಸೇಶ್ವರ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ಕೃತಿ ಬಿಡುಗಡೆ ಮಾಡಿದರು. ಸಾಹಿತಿ ಪ್ರೊ.ಕಲ್ಯಾಣರಾವ ಪಾಟೀಲ ಅವರು ಕೃತಿ ಪರಿಚಯಿಸಿದರು.

ನಂತರ ಸಾಧಕರು ಮತ್ತು ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ವಿಜಯಕುಮಾರ ಪರುತೆ, ಮಡಿವಾಳಪ್ಪ ನಾಗರಹಳ್ಳಿ, ಗೌರವ ಕೋಶಾಧ್ಯಕ್ಷ ದೌಲತರಾಯ ಪಾಟೀಲ, ಬಿ.ಕೆ.ಹಿರೇಮಠ, ವೀರಸಂಗಪ್ಪ ಸುಲೇಪೇಟ, ಚಂದ್ರಶೇಖರ ಕರಜಗಿ, ಮಲ್ಲಿನಾಥ ಸಂಗಶೆಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.