ಗುರುವಾರ , ಏಪ್ರಿಲ್ 15, 2021
22 °C
ಭರವಸೆ ಈಡೇರಿಸದ ಪ್ರಧಾನಿ ಮೋದಿ; ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ

ಬಿಜೆಪಿ ಸರ್ಕಾರದಿಂದ ತುಘಲಕ್ ದರ್ಬಾರ್: ಸಲೀಂ ಅಹ್ಮದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ತುಘಲಜಕ್ ದರ್ಬಾರ್ ನಡೆಸುತ್ತಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಅವರು ಏಳು ವರ್ಷಗಳ ಹಿಂದೆ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇನೆ ಎಂದಿದ್ದರು. ಅವರ ಭರವಸೆಯ ಪ್ರಕಾರ ಇದೀಗ 14 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ಆದರೆ, ಎಲ್ಲಿವೆ ಆ ಉದ್ಯೋಗ. 14 ಕೋಟಿ ಅಲ್ಲ, 14 ಲಕ್ಷ ಉದ್ಯೋಗವೂ ಸೃಷ್ಟಿಯಾಗಿಲ್ಲ. ಬದಲಾಗಿ ಅವೈಜ್ಞಾನಿಕವಾಗಿ ಲಾಕ್‌ಡೌನ್‌ ಹೇರಿದ್ದರಿಂದ ಇದ್ದ ಉದ್ಯೋಗಗಳೂ ಕಡಿತಗೊಂಡಿವೆ’ ಎಂದು ಹರಿಹಾಯ್ದರು.

‘ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಮೋದಿ ಸರ್ಕಾರ ರೈತರ ವಿರೋಧವನ್ನು ಕಟ್ಟಿಕೊಂಡಿವೆ. ನೂರಕ್ಕೂ ಅಧಿಕ ದಿನಗಳಿಂದ ದೆಹಲಿಯ ಗಡಿಗಳಲ್ಲಿ ಕಾಯ್ದೆ ವಾಪಸಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಮೋದಿ ಅವರು ಅವರ ಸಮಸ್ಯೆ ಕೇಳಲು ಮುಂದಾಗುತ್ತಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ನರೇಂದ್ರ ಮೋದಿ ಅವರು ದೊಡ್ಡ ವೈಫಲ್ಯವನ್ನು ಅನುಭವಿಸಿದ್ದಾರೆ’ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಸರ್ಕಾರವನ್ನು ವಾಮಮಾರ್ಗದಿಂದ ಕೆಡವಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಕೆಎಸ್‌ಆರ್‌ಟಿಸಿ ನೌಕರರು ಅನಿರ್ದಿಷ್ಟ ಅವಧಿಯವರೆಗೆ ಮುಷ್ಕರ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ. ಸರ್ಕಾರ ಈ ಹಟಮಾರಿ ಧೋರಣೆ ಕೈಬಿಟ್ಟು ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಬೇಕು’ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ, ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, 
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಯುವ ಕಾಂಗ್ರೆಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಲತಾ ರವಿ ರಾಠೋಡ, ಪುಷ್ಪಾ ಜಾಧವ್ ಇದ್ದರು.

 

ರಣದೀಪ್ ಸುರ್ಜೇವಾಲಾ ನಾಳೆ ರಾಜ್ಯಕ್ಕೆ

ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಬೆಳಗಾವಿ ಲೋಕಸಭಾ ಉಪಚುನಾವಣೆ, ಮಸ್ಕಿ, ಬಸವ ಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲು ಇದೇ 10ರಿಂದ 12ರವರೆಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದರು.

ಏ 10ರಂದು ಬೆಳಗಾವಿ, 11ರಂದು ಬಸವ ಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.