ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಇದು ‘ಸಸಿ’ ಖರೀದಿಸುವ ಸಮಯ!

ಮುಂಗಾರು ಆರಂಭದ ಬೆನ್ನಲ್ಲೆ ತೋಟಗಾರಿಕೆ ಇಲಾಖೆಯಿಂದ ‘ಸಂತೆ’; ₹3.50 ಲಕ್ಷ ಮೌಲ್ಯದ ಸಸಿ ಮಾರಾಟ ಗುರಿ
Last Updated 18 ಜೂನ್ 2020, 2:02 IST
ಅಕ್ಷರ ಗಾತ್ರ

ಕಲಬುರ್ಗಿ: ಮುಂಗಾರು ಮಳೆಯು ಕಲಬುರ್ಗಿ ನೆಲವನ್ನು ನಿಧಾನವಾಗಿ ಹದಗೊಳಿಸುತ್ತಿದೆ. ರೈತರು ಒಂದೆಡೆ ಹೊಲ ಹಸನು ಮಾಡುವಲ್ಲಿ ನಿರತರಾಗಿದ್ದಾರೆ. ಇತ್ತ ತೋಟಗಾರಿಕೆ ಇಲಾಖೆ ಪರಿಸರ ಸಮತೋಲನಕ್ಕೆ ಮುಂದಡಿ ಇಟ್ಟಿದೆ.

ನಗರದ ಐವಾನ್‌ -ಇ- ಶಾಹಿ ಕಚೇರಿ ಆವರಣದಲ್ಲಿ ತೋಟಗಾರಿಕೆ ಇಲಾಖೆ ಜೂನ್ 30ರವರೆಗೂ ಸಸ್ಯಸಂತೆ ಹಾಗೂ ತೋಟಗಾರಿಕೆ ಅಭಿಯಾನ ಆಯೋಜಿಸಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ರಾಜಾ ಬುಧವಾರ ಇದಕ್ಕೆ ಚಾಲನೆ ನೀಡಿದರು.

ಸಸ್ಯಸಂತೆಯಲ್ಲಿ ಒಟ್ಟು 2,54,180 ಸಸಿಗಳನ್ನು ಮಾರಾಟಕ್ಕೆ ಇಡಲಾಗಿದೆ. 89,334 ಹಣ್ಣು, 54,285 ಆಲಂಕಾರಿಕ, 14,935 ತೆಂಗು ಹಾಗೂ 200 ಔಷಧಿ ಸಸಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಕಳೆದ ಬಾರಿ ಸಸ್ಯಸಂತೆಯಲ್ಲಿ ₹2.20 ಲಕ್ಷ ಮೌಲ್ಯದ ಸಸಿಗಳು ಮಾರಾಟ ಆಗಿದ್ದವು. ಈ ಬಾರಿ ₹3.50 ಲಕ್ಷ ಮೊತ್ತದ ಸಸಿಗಳು ಮಾರಾಟವಾಗುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಉಪನಿರ್ದೇಶಕ ಸಂತೋಷ ಸಪ್ಪಂಡಿ ತಿಳಿಸಿದರು.

ಜಿಲ್ಲೆಯ 14 ಕಡೆಗಳಲ್ಲಿ ಇಲಾಖೆಯ ನರ್ಸರಿಗಳಿವೆ. ಇಲ್ಲಿ ವಿವಿಧ ಬಗೆಯ ಸಸಿಗಳನ್ನು ಬೆಳೆಸಿ, ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಲಭ್ಯವಿರುವ ಸಸಿಗಳು: ಮಲ್ಲಿಗೆ, ಮಾವು, ತೆಂಗು, ಕರಿಬೇವು, ನಿಂಬೆ, ಪಾರಿಜಾತ, ದುಂಡು ಮಲ್ಲಿಗೆ ಸೇರಿ ಹಲವು ಸಸಿಗಳು ಲಭ್ಯ ಇವೆ. ಅಲ್ಲದೆ, ವಿವಿಧ ಬಗೆಯ ಆಲಂಕಾರಿ ಸಸಿಗಳು, ಮಣ್ಣಿನ ಕುಂಡಗಳು ಸಹ
ಸಿಗುತ್ತವೆ.

ಮೊದಲ ದಿನ ಉತ್ತಮ ಸ್ಪಂದನೆ: ಸಸ್ಯಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಮೊದಲ ದಿನ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಮಳೆ ಬಿದ್ದಿದ್ದರಿಂದ ಬುಧವಾರ ಹೆಚ್ಚಿನ ಸಂಖ್ಯೆಯ ಜನ ಸಸಿ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು. ಮಕ್ಕಳನ್ನು ಕರೆದುಕೊಂಡು ಬಂದಿದ್ದ ಪಾಲಕರು ವಾಹನಗಳಲ್ಲಿ ಸಸಿಗಳನ್ನು ತೆಗೆದುಕೊಂಡು ಹೋದರು. ಗ್ರಾಮೀಣ ಭಾಗದಿಂದ ರೈತರು
ಸಹಬಂದಿದ್ದರು.

ಸ್ಯಾನಿಟೈಸರ್‌ ವ್ಯವಸ್ಥೆ: ತೋಟಗಾರಿಕೆ ಸಿಬ್ಬಂದಿ ಸಸ್ಯಸಂತೆಗೆ ಬರುವವರನ್ನು ಕಚೇರಿಯ ದ್ವಾರದಲ್ಲಿಯೇ ತಡೆದು ದೇಹದ ತಾಪಮಾನ ಪರೀಕ್ಷಿಸಿ, ಕೈಗೆ ಸ್ಯಾನಿಟೈಸರ್‌ ಹಾಕಿ ಒಳ ಬಿಡುತ್ತಿದ್ದರು.

ಸಸಿಗಳಿಗೆ ಹಾಗೂ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ (ದೂರವಾಣಿ: 08472 278628) ಹಾಗೂ ಆಯಾ ತಾಲ್ಲೂಕು ಕಚೇರಿ ಸಂಪರ್ಕಿಸಬಹುದು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಪಾಟೀಲ ದಂಗಾಪುರ ಹಾಗೂ ಸಂದೀಪ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT