ಶನಿವಾರ, ಡಿಸೆಂಬರ್ 7, 2019
25 °C

ಹಿಂದುತ್ವ ವಸಾಹತುಶಾಹಿಗಳ ರಚನೆ: ಡಾ. ಎನ್.ಅಂಜಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಲಬುರ್ಗಿ: ‘ಹಿಂದುತ್ವ ವಸಾಹತುಶಾಹಿಗಳ ರಚನೆ. ಯುರೋಪಿನ ವ್ಯಾಪಾರಿಗಳಿಗೆ ಭಾರತದಲ್ಲಿ ಮಾರುಕಟ್ಟೆ ಸೃಜಿಸಲು ಮತ್ತು ವಿಸ್ತರಿಸಲು ಹಿಂದುತ್ವ ಎಂಬ ಧಾರ್ಮಿಕ ನಂಬಿಕೆಯನ್ನು ಹುಟ್ಟು ಹಾಕಲಾಗಿದೆ ಎಂಬುದು ವಿದ್ವಾಂಸರ ಪ್ರತಿಪಾದನೆಯಾಗಿದೆ’ ಎಂದು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ವೈಜ್ಞಾನಿಕ ಸಮಾಜವಾದ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎನ್.ಅಂಜಯ್ಯ ಹೇಳಿದರು.

ನಗರದ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಸಭಾಂಗಣದಲ್ಲಿ ದೇವಿಪ್ರಸಾದ ಚಟ್ಟೋಪಾಧ್ಯಾಯ ಜನ್ಮ ಶತಮಾನೋತ್ಸವ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಧರ್ಮದ ವಿಷಯದಲ್ಲಿ ಎಲ್ಲರೂ ಹಿಂದುಗಳು ಎಂದು ಈ ಹಿಂದನಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. 18ನೇ ಶತಮಾನದವರೆಗೆ ಹಿಂದುತ್ವ ಎಂಬುದು ಧಾರ್ಮಿಕ ಅರ್ಥದಲ್ಲಿ ಇರಲಿಲ್ಲ. 1712ರಲ್ಲೇ ಮಹಮ್ಮದ್ ಕಾಸಿಂ ಎಂಬಾತ ಹಿಂದು ಪದವನ್ನು ಬಳಕೆ ಮಾಡಿದ್ದ. ರಾಜತರಂಗಿಣಿ ಸೇರಿದಂತೆ ಅನೇಕ ಐತಿಹಾಸಿಕ ಗ್ರಂಥಗಳಲ್ಲಿ ಹಿಂದು ಪದದ ಬಳಕೆಯನ್ನು ಕಾಣಬಹುದು. ಆದರೆ ಈಗ ಅದನ್ನು ಧರ್ಮ ಎಂದು ಕರೆಯಲಾಗುತ್ತಿದೆ’ ಎಂದು ಹೇಳಿದರು.

‘ಮುಸ್ಲಿಂ, ಕ್ರೈಸ್ತ, ಪಾರ್ಸಿ ಸೇರಿದಂತೆ ವಿವಿಧ ಧರ್ಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಧರ್ಮಗಳನ್ನು ಅನುಸರಿಸದವರನ್ನು ಬ್ರಿಟಿಷರು ಹಿಂದುಗಳು ಎಂದು ದಾಖಲಿಸಿದರು. ಅಷ್ಟೇ ಅಲ್ಲ 1872ರಲ್ಲಿ ದೇಶದಲ್ಲಿ ನಡೆದ ಮೊದಲ ಜನಗಣತಿಯ ಅಧಿಕೃತ ದಾಖಲೆಗಳಲ್ಲೂ ಇದನ್ನು ಸೇರಿಸಿದರು. ಭಾರತದ ಬಹುಸಂಖ್ಯೆಯ ಜನರು ಹಿಂದುಗಳು, ಈ ಭೂಮಿ ಹಿಂದೂಸ್ಥಾನ, ಇಲ್ಲಿಯ ಜನರು ಹಿಂದಿ ಭಾಷಿಕರು ಎಂದು ಬಿಂಬಿಸುವ ಮೂಲಕ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಇಂದು ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ವಸಾಹತುಶಾಹಿ ರಚನೆಯನ್ನು ಒಪ್ಪಿಕೊಳ್ಳದವರನ್ನು ದೇಶದ್ರೋಹಿ ಎಂದು ಕರೆಯಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶದ ಶೇ 85ರಷ್ಟು ಹಿಂದುಗಳ ಪೈಕಿ ಶೇ 61ರಷ್ಟು ಜನರು ಕುಲದೇವತೆಯನ್ನು ಶೇ 31ರಷ್ಟು ಜನರು ಇತರೆ ದೇವರುಗಳನ್ನು ಪೂಜಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಬ್ರಾಹ್ಮಣ್ಯ ಮತ್ತು ಹಿಂದುತ್ವದಿಂದ ಏನೂ ಆಗಬೇಕಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಈ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಲಿಂಗಾಯತರು ಪ್ರತ್ಯೇಕ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಆರಂಭಿಸಿರುವುದನ್ನು ಕಾಣಬಹುದಾಗಿದೆ’ ಎಂದು ತಿಳಿಸಿದರು.

‘ಭಾರತದ ಸಾಂಸ್ಕೃತಿಕ ಇತಿಹಾಸವನ್ನು ಪುರಾತನ ಭಾರತ, ಮಧ್ಯಕಾಲೀನ ಮುಸ್ಲಿಂ ಆಳ್ವಿಕೆಯ ಭಾರತ ಹಾಗೂ ಆಧುನಿಕ ಬ್ರಿಟಿಷ್‌ ಭಾರತ ಎಂದು ವಿಂಗಡಿಸಲಾಗಿದೆ. ಮೊದಲ ಎರಡು ಭಾಗಗಳನ್ನು ಧಾರ್ಮಿಕ ಆಧಾರದ ಮೇಲೆ ಹೇಳಿದರೆ, ಮೂರನೇ ಭಾಗವನ್ನು ಬ್ರಿಟಿಷ್ ಭಾರತ ಎಂದು ಕರೆಯಲಾಗಿದೆಯೇ ಹೊರತು ಕ್ರೈಸ್ತ ಭಾರತ ಎಂದು ಕರೆಯಲಾಗಿಲ್ಲ’ ಎಂದು ಹೇಳಿದರು.

‘ಚಟ್ಟೋಪಾಧ್ಯಾಯರು ತತ್ವಜ್ಞಾನವನ್ನು ವೈಜ್ಞಾನಿಕವಾಗಿ ಹೇಳಿದ್ದಾರೆ. ಪಾಣಿನಿಯ ಅಷ್ಟಾಧ್ಯಾಯದಲ್ಲೂ ಇದೇ ಸಂಗತಿಯನ್ನು ಪ್ರಸ್ತಾಪಿಸಲಾಗಿದೆ. ವೇದವನ್ನು ಒಪ್ಪಿಕೊಂಡರೆ ಆಸ್ತಿಕ, ಒಪ್ಪಿಕೊಳ್ಳದಿದ್ದರೆ ನಾಸ್ತಿಕ ಎಂಬುದು ಮನುವಾದವಾಗಿದೆ. ಸಂಘ ಪರಿವಾರದವರು ಭಾರತೀಯತೆ, ಸಂಸ್ಕೃತಿ, ನಾಯಕತ್ವವನ್ನು ಗುತ್ತಿಗೆ ಪಡೆದವರಂತೆ ಮಾತನಾಡುತ್ತಿದ್ದು, ಉಳಿದವರನ್ನು ದೇಶದ್ರೋಹಿಗಳಂತೆ ಕಾಣುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಕಲಾವಿದ ಪ್ರೊ.ವಿ.ಜಿ.ಅಂದಾನಿ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಹೋರಾಟಗಾರ ಮಾರುತಿ ಮಾನ್ಪಡೆ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಚೆನ್ನಿ, ಡಾ. ಪ್ರಭು ಖಾನಾಪುರೆ, ವಿಚಾರವಾದಿ ಡಾ. ಎನ್.ಗಾಯತ್ರಿ, ಶಿವಶರಣಪ್ಪ ಮುಳೆಗಾಂವ್, ಅರುಣಕುಮಾರ ಪಾಟೀಲ, ಡಾ. ಶಿವಗಂಗಾ ರುಮ್ಮಾ, ಡಾ. ಈಶ್ವರಯ್ಯ ಮಠ, ಜೆ.ಮಲ್ಲಪ್ಪ, ಅಲ್ತಾಫ್ ಇನಾಮದಾರ ಇದ್ದರು.

ಪ್ರತಿಕ್ರಿಯಿಸಿ (+)