ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಶಾಲೆ ಕೋಣೆಗಳಿಗಿಲ್ಲ ಉದ್ಘಾಟನಾ ಭಾಗ್ಯ

ಬಳೂರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ; ಕಳಪೆ ಕಾಮಗಾರಿ ಆರೋಪ
Last Updated 24 ಫೆಬ್ರುವರಿ 2020, 9:51 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಇದುವರೆಗೂಅವು ಉದ್ಘಾಟನೆ ಆಗಿಲ್ಲ. ಶಾಲೆಯ ಹಳೆಯ ಕೋಣೆಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ವಚ್ಛತೆ ಕೊರತೆಯಿಂದಾಗಿ ಗಬ್ಬು ನಾರುತ್ತಿದ್ದು, ಮಕ್ಕಳಿಗೆ ಪಾಠ ಕೇಳಲು ಕಷ್ಟವಾಗುತ್ತಿದೆ.

ಗುತ್ತಿಗೆದಾರರು ಶಾಲಾ ಕಾಂಪೌಂಡ್ ಗೋಡೆ ಬಳಸಿಕೊಂಡು ಶಾಲಾ ಕಟ್ಟಡ ಹಾಗೂ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಶಾಲಾ ಕೋಣೆಯಲ್ಲಿಯೇ ಅಡುಗೆ ಮಾಡಲಾಗುತ್ತಿದೆ.

ನಾಲ್ಕರಲ್ಲಿ ಮೂರು ಕೋಣೆ ಹಾಗೂ ಶೌಚಾಲಯವನ್ನು ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಅವುಗಳು ಇದುವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಶಾಲಾ ಕೋಣೆಗಳು ಬಳಕೆಯಾಗದೆ ಹಾಳಾಗಿ ಹೋಗುತ್ತಿವೆ. ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಈ ಬಗ್ಗೆ ಗಮನ ಕೊಡುತ್ತಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2019 ರಲ್ಲಿ ₹14.30 ಲಕ್ಷ ಅನುದಾನದಲ್ಲಿ ತಲಾ ಒಂದು ಕೋಣೆ ಮತ್ತು ಶೌಚಾಲಯ ನಿರ್ಮಿಸಲಾಗಿದೆ. ಆದರೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ಆದ್ದರಿಂದ ಅವುಗಳನ್ನು ಬಳಕೆ ಮಾಡುತ್ತಿಲ್ಲ ಎಂದು ಮುಖ್ಯ ಶಿಕ್ಷಕರು ತಿಳಿಸಿದರು.

ಈ ಶಾಲೆಗೆ ಇತ್ತೀಚೆಗೆ ಶಾಸಕ ಎಂ.ವೈ ಪಾಟೀಲ ಹಾಗೂ ಕೇತ್ರ ಶಿಕ್ಷಣಾಧಿಕಾರಿ ವಸಂತ್ ರಾಠೋಡ್ ಹಾಗೂ ಚಿತ್ರಶೇಖರ ದೇಗುಲಮಡಿ ಭೇಟಿ ನೀಡಿದ್ದಾರೆ. ಆದರೂ ಕಳಪೆ ಕಟ್ಟಡ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಶಾಲಾ ಕೋಣೆಗಳು ಮಂಜೂರು ಮಾಡಿದ ಮಾತ್ರಕ್ಕೆ ಸರ್ಕಾರದ ಕೆಲಸ ಮುಗಿಯುವುದಿಲ್ಲ. ಕಾಮಗಾರಿ ಗುಣಮಟ್ಟದಿಂದ ಇದೆಯೇ ಎಂಬುದನ್ನು ಪರಿಶೀಲಿಸಿಬೇಕು ಎಂದು ಗ್ರಾಮಸ್ಥರು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳಪೆ ಕಾಮಗಾರಿ ಕುರಿತು ಜಿಲ್ಲಾ ಪಂಚಾಯಿತಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಬಸಾವಳಗಿ ಅವರನ್ನುವಿಚಾರಿಸಿದಾಗ, ‘ನಾನು ಹೊಸದಾಗಿ ಬಂದಿದ್ದೇನೆ. ಸಂಬಂಧಪಟ್ಟಸಹಾಯಕ ಎಂಜಿನಿಯರ್ ಅವರನ್ನು ವಿಚಾರಿಸುತ್ತೇನೆ’ ಎಂದು ಹೇಳಿದರು.

ಶಾಲಾ ಕೋಣೆಗಳು ಕಳಪೆಯಾಗಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಗ್ರಾಮಸ್ಥ ಗಣಪತಿ ಪುಲಾರಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT