ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭ: ವಿದ್ಯಾರ್ಥಿಗಳಲ್ಲಿ ಹರ್ಷ

ಆಳಂದ: ಶೇ 40ರಷ್ಟು ಮಕ್ಕಳ ಹಾಜರಾತಿ; ಕೋವಿಡ್‌ ನಿಯಮ ಪಾಲನೆ
Last Updated 2 ಜನವರಿ 2021, 3:50 IST
ಅಕ್ಷರ ಗಾತ್ರ

ಆಳಂದ: 10 ತಿಂಗಳ ನಂತರ ಶಾಲಾ ಕಾಲೇಜುಗಳು ಆರಂಭಗೊಂಡ ಪರಿಣಾಮ ಶುಕ್ರವಾರ ತಾಲ್ಲೂಕಿನ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸೇರಿದಂತೆ ಶೇ 40ರಷ್ಟು ಮಕ್ಕಳು ಶಾಲೆಗೆ ಹಾಜರಾತಿ ಕಂಡು ಬಂತಲ್ಲದೆ, ಕೋವಿಡ್‌ ಸುರಕ್ಷತಾ ಕ್ರಮ ಕಟ್ಟುನಿಟ್ಟಾಗಿ ಶಾಲೆಗಳಲ್ಲಿ ಪಾಲನೆ ಮಾಡಿರುವುದು ಗಮನ ಸೆಳೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಅವರು ತಾಲ್ಲೂಕಿನ ಧರ್ಮವಾಡಿ, ನಿಂಬರ್ಗಾ, ಬಟ್ಟರ್ಗಾ, ಧಂಗಾಪುರ, ಕೊರಳ್ಳಿ ಗ್ರಾಮದ ಶಾಲೆಗಳಿಗೆ ಭೇಟಿ ನೀಡಿ ಕೋವಿಡ್‌ ಸುರಕ್ಷತಾ ಕ್ರಮಗಳ ಕುರಿತು ಶಿಕ್ಷಕರು ವಹಿಸಿದ ಕ್ರಮಗಳನ್ನು ಪರಿಶೀಲಿಸಿದರು.

ಹೊಸ ವರ್ಷದ ಕಾರಣ ಮನೆಯಿಂದಲೇ ಶಾಲೆಗೆ ಆಗಮಿಸಿದ ಮಕ್ಕಳು ಬಣ್ಣ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸಿದರು. ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರು ಥರ್ಮಲ್‌ ಸ್ಕ್ರೀನಿಂಗ್ ಮಾಡಿ ಸ್ವಾಗತಿಸಿದರು. ಹಲವು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಸಿಹಿ ಹಂಚಿ, ಕಾಣಿಕೆ ಕೊಟ್ಟು ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿ ಶಾಲೆಯೊಳಗೆ ಪ್ರವೇಶಿಸಿದರು.

ಆಳಂದ ತಾಲ್ಲೂಕಿನ ಬಸವಣ್ಣ ಸಂಗೋಳಿಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಚಿತ್ರಕ್ಕೆ ಪೂಜೆ ಸಲ್ಲಿಸಿಲಾಯಿತು. ನಂತರ ಹೊಸ ವರ್ಷದ ಕೇಕ್‌ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿ ಶಾಲಾ ಆವರಣದಲ್ಲಿ ವಿದ್ಯಾಗಮ ತರಗತಿಯು ಜರುಗಿದವು. ಜವಳಿ(ಡಿ) ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಕೋವಿಡ್‌ ಸುರಕ್ಷತಾ ಕ್ರಮಗಳ ಕುರಿತು ಫಲಕ ಪ್ರದರ್ಶಿಸಿ ಜಾಗೃತಿ ಮೂಡಿಸಿ ಗಮನ ಸೆಳೆದರು.

ತಾಲ್ಲೂಕಿನ ಮಾದನ ಹಿಪ್ಪರಗಾ, ಖಜೂರಿ, ಮಾಡಿಯಾಳ, ಕಡಗಂಚಿ, ಲಾಡ ಚಿಂಚೋಳಿ, ಕೊರಳ್ಳಿ, ತಡಕಲ, ಹಳ್ಳಿ ಸಲಗರ, ಗುಂಜ ಬಬಲಾದ, ಮೋಘಾ(ಬಿ), ನರೋಣಾ, ಹೊದಲೂರು, ಮುನ್ನೋಳ್ಳಿ, ದರ್ಗಾ ಶಿರೂರು ಗ್ರಾಮದ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿ ಕಂಡು ಬಂತು. ಆಳಂದ ಪಟ್ಟಣದ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಬೆರಳೆಣಿಕೆ ಸಂಖ್ಯೆಯಲ್ಲಿ ಮಕ್ಕಳ ಹಾಜರಾತಿ ಇತ್ತು. ಆದರೆ ಖಾಸಗಿ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ ಕಂಡು ಬಂತು. ಅನುದಾನರಹಿತ ಶಾಲೆಗಳಲ್ಲಿ ಸಂಭ್ರಮ ಕಡಿಮೆಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT