ಕಲಬುರಗಿ: ‘ಎಂಜಿನಿಯರಿಂಗ್ ವಿದ್ಯಾರ್ಥಿಗಳು ನವೋದ್ಯಮ ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು’ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಸಲಹೆ ನೀಡಿದರು.
ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹತ್ತು ದಿನಗಳ ಪರಿಚಯ (ಇಂಡಕ್ಷನ್ ಪ್ರೋಗ್ರಾಂ) ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಸಹ ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗಿಗಳನ್ನಾಗಿ ಮಾಡಿದ್ದೆ ಸಾಧನೆ ಎಂದುಕೊಂಡು ತೃಪ್ತಿಪಡುವಂತಿಲ್ಲ. ಅವರನ್ನು ನವೋದ್ಯಮಿಗಳನ್ನಾಗಿಸುವ ಕಡೆ ಗಮನಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಸಹ ನವೋದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ. ವಿದ್ಯಾರ್ಥಿಗಳು ಸರ್ಕಾರದ ನೆರವು ಬಳಸಿಕೊಂಡು ಅನ್ವೇಷಣೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಪಾಲಕರು ಮಕ್ಕಳ ಮೇಲೆ ಯಾವುದನ್ನೂ ಹೇರಬಾರದು. ಮಕ್ಕಳು ಸಹ ತಮಗೆ ಆಸಕ್ತಿ ಇರುವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪಿಡಿಎ ಕಾಲೇಜಿನಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಹೊಸ–ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಂಡು ಶ್ರದ್ಧೆಯಿಂದ ಓದುವ ಕೆಲಸ ಮಾಡಬೇಕು ಎಂದರು.
ಇಂದು ನಮ್ಮ ದೇಶಗಳಲ್ಲಿಯ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದರಿಂದ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಭಾ ಪಲಾಯನವೂ ಕಡಿಮೆಯಾಗಿರುವುದು ಸಮಾಧಾನಕರ ಸಂಗತಿ ಎಂದು ಹೇಳಿದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಂದೆ–ತಾಯಿ ಹಾಗೂ ಕಾಲೇಜಿಗೆ ಕೀರ್ತಿ ತರುವ ಕೆಲಸ ಮಾಡಬೇಕು. ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಎನ್ನುವ ಪೂರ್ವಗ್ರಹ ತೊಡೆದು ಹಾಕಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕ ಬಸವರಾಜ ಖಂಡೆರಾವ್ ಮಾತನಾಡಿ, ‘ಪಿಡಿಎ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಸೆಂಟರ್ ಆಫ್ ಎಕ್ಸಲೆನ್ಸ್ ತೆರೆಯಲಾಗಿದೆ. ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಾಲೇಜಿನ ಹಳೆ ವಿದ್ಯಾರ್ಥಿಗಳು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರದ್ಧೆಯ ಓದು, ಕಾಲೇಜಿನ ಪ್ರಾಧ್ಯಾಪಕರ ಹಾಗೂ ಸಿಬ್ಬಂದಿ ಕಾಳಜಿಯ ಕಾರಣಕ್ಕೆ ಇದು ಸಾಧ್ಯವಾಗಿದೆ’ ಎಂದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶರಣಬಸಪ್ಪ ಆರ್.ಹರವಾಳ, ಕಾರ್ಯದರ್ಶಿ ಜಗನ್ನಾಥ ಬಿ. ಬಿಜಾಪುರ, ಜಂಟಿ ಕಾರ್ಯದರ್ಶಿ ಮಹಾದೇವಪ್ಪ ರಾಂಪುರೆ, ವಿನಯ್ ಎಸ್.ಪಾಟೀಲ, ಎಸ್.ಬಿ.ಕಾಮರೆಡ್ಡಿ, ಸೋಮನಾಥ ನಿಗ್ಗುಡಗಿ, ಕೈಲಾಶ ಪಾಟೀಲ, ಸಾಯಿನಾಥ ಪಾಟೀಲ, ಉಪಪ್ರಾಚಾರ್ಯರಾದ ಭಾರತಿ ಹರಸೂರ, ಉಪಪ್ರಾಂಶುಪಾಲರಾದ ಕಲ್ಪನಾ ವಾಂಜರಖೇಡ, ಪರೀಕ್ಷಾ ನಿಯಂತ್ರಣಾಧಿಕಾರಿ ರವೀಂದ್ರ ಲಟ್ಟೆ, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.
ಕಾಲೇಜು ಪ್ರಾಚಾರ್ಯ ಶಶಿಕಾಂತ ಆರ್.ಮೀಸೆ ಸ್ವಾಗತಿಸಿದರು. ಪ್ರಾಧ್ಯಾಪಕಿ ರಾಮೇಶ್ವರಿ ಪಾಟೀಲ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಜಯಪ್ರಕಾಶ ಕ್ಷೀರಸಾಗರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.