ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬೆದರಿಸಿ ₹ 6,900 ಕೋಟಿ ಲೂಟಿ ಮಾಡಿದ ಬಿಜೆಪಿ’

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಆರೋಪ
Published 19 ಮಾರ್ಚ್ 2024, 4:47 IST
Last Updated 19 ಮಾರ್ಚ್ 2024, 4:47 IST
ಅಕ್ಷರ ಗಾತ್ರ

ಕಲಬುರಗಿ: ‘ಉದ್ಯಮಿಗಳನ್ನು ಹೆದರಿಸಿ, ಬೆದರಿಸಿ, ಐಟಿ, ಇಡಿ, ಸಿಬಿಐ ದಾಳಿ ನಡೆಸಿ ಬಿಜೆಪಿಯು ಚುನಾವಣಾ ಬಾಂಡ್ ಹೆಸರಿನಲ್ಲಿ ಒತ್ತಾಯಪೂರ್ವಕವಾಗಿ ₹ 6,900 ಕೋಟಿ ಸಂಗ್ರಹಿಸಿದೆ‘ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಗಂಭೀರ ಆರೋಪ ಮಾಡಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮ ಪಕ್ಷದ ಕಳ್ಳಾಟ ಹೊರಗೆ ಬರುತ್ತದೆ ಎಂಬ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸ್ಟೇಟ್ ಬ್ಯಾಂಕ್ ಮೇಲೆ ಒತ್ತಡ ಹೇರಿದ್ದರಿಂದಲೇ ಚುನಾವಣಾ ಬಾಂಡ್ ವಿವರವನ್ನು ಒದಗಿಸಲು ಬ್ಯಾಂಕ್ ಸುಪ್ರೀಂ ಕೋರ್ಟ್‌ಗೆ ಜೂನ್‌ 30ರವರೆಗೆ ಕಾಲಾವಧಿ ಕೇಳಿತ್ತು. ಚುನಾವಣಾ ಬಾಂಡ್‌ನ ಅಕ್ರಮಗಳು ಒಂದೊಂದಾಗಿ ಹೊರಗೆ ಬರುತ್ತಿದ್ದು, ಅತಿ ಹೆಚ್ಚಿನ ದೇಣಿಗೆಯನ್ನು ಬಿಜೆಪಿ ವಾಮ ಮಾರ್ಗದ ಮೂಲಕವೇ ಪಡೆದಿರುವುದು ಸಾಬೀತಾಗುತ್ತಿದೆ‘ ಎಂದರು.

‘ಚುನಾವಣಾ ಬಾಂಡ್‌ ಮೂಲಕ ಹಣ ಪಡೆಯುವುದು ಅಕ್ರಮ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿಯೇ ಮೋದಿಯವರು ತಮ್ಮ ಸರ್ಕಾರದ ವಿವಿಧ ಗುತ್ತಿಗೆ ಯೋಜನೆಗಳನ್ನು ನಿರ್ವಹಿಸುತ್ತಿರುವ ಉದ್ಯಮಿಗಳ ಮೇಲೆ ಒತ್ತಡ ಹಾಕಿ ನೂರಾರು ಕೋಟಿ ವಸೂಲಿ ಮಾಡಿದ್ದಾರೆ. ದೇಣಿಗೆ ನೀಡಲು ನಿರಾಕರಿಸಿದವರ ಮೇಲೆ ಐಟಿ, ಇಡಿ ದಾಳಿ ನಡೆದ ಬಳಿಕ ಕೋಟ್ಯಂತರ ರೂಪಾಯಿ ದೇಣಿಗೆ ಬಂದಿರುವ ಮಾಹಿತಿ ಲಭ್ಯವಾಗುತ್ತಿರುವುದನ್ನು ನೋಡಿದರೆ ಬಿಜೆಪಿ ತಾನು ಅಧಿಕಾರಕ್ಕೆ ಬರಲು ಎಂತಹ ಹೀನ ಕೃತ್ಯಕ್ಕೆ ಇಳಿಯಲೂ ಸಿದ್ಧ ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಕಲಬುರಗಿಗೆ ಬಂದಿದ್ದ ವೇಳೆ ಮಾತನಾಡಿದ ಬಿಜೆಪಿ ಮುಖಂಡರು ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಖರ್ಗೆ ಅವರು ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 371 (ಜೆ) ಕಲಂ ಜಾರಿಗೆ ತಂದಿದ್ದಾರೆ. ಇದರಿಂದಾಗಿ ಪ್ರತಿ ವರ್ಷ ಸಾವಿರಾರು ಮೆಡಿಕಲ್, ಎಂಜಿನಿಯರಿಂಗ್ ಸೀಟುಗಳು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಗುತ್ತಿವೆ. ಖರ್ಗೆ ಅವರ ಆಸಕ್ತಿಯ ಫಲವಾಗಿ ಕಲಬುರಗಿಯಲ್ಲಿ ಇಎಸ್‌ಐಸಿ ಆಸ್ಪತ್ರೆ ತಲೆ ಎತ್ತಿದೆ. ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಆಸ್ಪತ್ರೆಗಳು ಆರಂಭವಾಗಿವೆ. ಕೆಲವೇ ದಿನಗಳಲ್ಲಿ ಜಯದೇವ ಸ್ವಂತ ಕಟ್ಟಡವನ್ನು ಉದ್ಘಾಟಿಸಲಾಗುವುದು. ಒಟ್ಟಾರೆ ಬಿಜೆಪಿಯವರು ರಾಜ್ಯದಲ್ಲಿ 11 ವರ್ಷ ಅಧಿಕಾರದಲ್ಲಿದ್ದು, ಕಲಬುರಗಿಯಲ್ಲಿ ಅವರು ಅನುಷ್ಠಾನಗೊಳಿಸಿದ ಒಂದು ಕಟ್ಟಡವನ್ನಾದರೂ ತೋರಿಸಲಿ ಎಂದು ಶರಣಪ್ರಕಾಶ ಸವಾಲು ಹಾಕಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಪಕ್ಷದ ಮುಖಂಡ ಸುಭಾಷ್ ರಾಠೋಡ, ಪಕ್ಷದ ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಮಹಾಂತಪ್ಪ ಕಟ್ಟಿಸಂಗಾವಿ ಗೋಷ್ಠಿಯಲ್ಲಿದ್ದರು.

‘ಸಂಸತ್ತಿನಲ್ಲಿ ಜಾಧವ ಶೂನ್ಯ ಸಾಧನೆ

’ ಸಂಸತ್ತಿನಲ್ಲಿ ಡಾ. ಉಮೇಶ ಜಾಧವ ಅವರು ಶೂನ್ಯ ಸಾಧನೆ ಮಾಡಿದ್ದಾರೆ. ಖರ್ಗೆ ಅವರು ಸಚಿವರಾಗಿದ್ದ ಅವಧಿಯಲ್ಲಿ ಮಂಜೂರು ಮಾಡಿದ್ದ ರೈಲ್ವೆ ವಿಭಾಗವನ್ನೂ ಆರಂಭಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಡಾ. ಶರಣಪ್ರಕಾಶ ಪಾಟೀಲ ಟೀಕಿಸಿದರು. ‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದೇನೆ ಎಂದು ಹೇಳಿಕೊಳ್ಳುವ ಜಾಧವ ಅವರು ಈ ಭಾಗದ ಆಶಯಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನ ಕೇಂದ್ರದಿಂದ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಘೋಷಣೆಯನ್ನು ಮೋದಿ ಹೊರಡಿಸಿದರು. ಆದರೆ ಒಂದು ವರ್ಷ ಕಳೆದರೂ ಅಲ್ಲಿ ಯಾವುದೇ ಕೆಲಸವಾಗಿಲ್ಲ. ಕೇಂದ್ರ ಈ ಬಗ್ಗೆ ಹೆಚ್ಚಿನ ಗಮನವನ್ನೂ ನೀಡಿಲ್ಲ. ರಾಜ್ಯದ ಜವಳಿ ಸಚಿವ ಶಿವಾನಂದ ಪಾಟೀಲ ಅವರೇ ಆಸಕ್ತಿ ವಹಿಸಿ ಟೆಕ್ಸ್‌ಟೈಲ್ ಪಾರ್ಕ್ ಆರಂಭಕ್ಕೆ ಸಂಬಂಧಿಸಿದಂತೆ ಕೆಲ ಸಭೆಗಳನ್ನು ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಪಾರ್ಕ್ ಆರಂಭಿಸಲು ಇರುವ ಕಾಳಜಿ ಕೇಂದ್ರ ಸರ್ಕಾರಕ್ಕೆ ಇಲ್ಲ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT