ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ | ಆಸನ ಕೊರತೆ: ಮಹಿಳಾ ಪ್ರಯಾಣಿಕರಿಗೆ ನೆಲವೇ ಗತಿ

ಪ್ರಯಾಣಿಕರಿಗೆ ಬೇಕಿದೆ ಹೆಚ್ಚಿನ ಆಸನಗಳ ಸೌಲಭ್ಯ
Published 18 ಆಗಸ್ಟ್ 2023, 5:16 IST
Last Updated 18 ಆಗಸ್ಟ್ 2023, 5:16 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದಲ್ಲಿರುವ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೂಡಲು ಆಸನಗಳ ಕೊರತೆಯಿದೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ನಿತ್ಯವೂ ನೆಲದಲ್ಲಿನ ಹಾಸುಗಲ್ಲಿನ ಮೇಲೆ ಕುಳಿತುಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ದಂಡೋತಿ ಮತ್ತು ಶಹಾಬಾದ್ ಮಾರ್ಗವಾಗಿ ಸಂಚರಿಸುವ ಬಸ್ ನಿಲ್ಲುವ ಸ್ಥಳದ ಕಡೆಗೆ ಮೊದಲು ಇದ್ದ ಕೆಲವು ಆಸನಗಳು ಕಿತ್ತುಹೋಗಿದ್ದು ಅವುಗಳನ್ನು ತೆರವುಗೊಳಿಸಲಾಗಿದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು ನಿಲ್ದಾಣದ ಹಾಸುಗಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಅನೇಕರು ನಿಂತುಕೊಂಡಿರುತ್ತಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಆಸನಗಳ ವ್ಯವಸ್ಥೆ ಮಾಡಿಸುತ್ತಿಲ್ಲ ಎಂದು ಮಹಿಳಾ ಪ್ರಯಾಣಿಕ ಆಕ್ರೋಶವಾಗಿದೆ.

ನಿಲ್ದಾಣದಲ್ಲಿ ಕೇವಲ ಎರಡು ಸಾಲು ಮಾತ್ರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ದಿನಾಲೂ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ. ನಿಲ್ದಾಣದ ತುಂಬಾ ಎಲ್ಲೆಂದರಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಕೆಳಗೆ ಕುಳಿತ್ತಿರುವುದು ಗಮನಿಸಿದರೆ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ ತನಕ್ಕೆ ಸಾಕ್ಷಿಯಾಗಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

ಸೇಡಂ ಕಡೆಗೆ ಸಂಚರಿಸುವ ಬಸ್ ನಿಲ್ಲುವ ಕಡೆಗೆ ಕೆಲವು ಗ್ರಾಮಗಳಿಗೆ ಹೋಗುವ ಬಸ್ ನಿಲ್ಲುತ್ತವೆ. ಹೀಗಾಗಿ ಈ ಸ್ಥಳದಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿರುತ್ತಾರೆ. ಗುಂಪುಗುಂಪಾಗಿ ಬಸ್‌ಗಾಗಿ ಕಾಯುತ್ತಾ ವೃದ್ಧರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಆಸನಗಳು ಸಿಗದೆ ಕೆಳಗೆ ಕುಳಿತುಕೊಳ್ಳುತ್ತಿದ್ದಾರೆ. ಸ್ಥಳ ಸಿಗದೆ ಅನೇಕರು ನಿಂತಿರುತ್ತಾರೆ.

ಮಳೆ ಬಂದ ಸಮಯದಲ್ಲಿ ನಿಲ್ದಾಣದಲ್ಲಿ ಪ್ರಯಾಣಿಕರು ನಡೆದಾಡುವುದರಿಂದ ಇಡೀ ನಿಲ್ದಾಣದ ಜಾಗ ತೇವಗೊಂಡು ಮಣ್ಣು, ಕೆಸರಿನಿಂದ ಮಲೀನವಾಗಿರುತ್ತದೆ. ಆಸನ ಸಿಗದೆ, ಕೆಳಗೆ ಕುಳಿತುಕೊಳ್ಳಲಾಗದೆ ತೀವ್ರ ಪರದಾಡುತ್ತಿದ್ದಾರೆ. ಪ್ರಯಾಣಿಕರ ಸಮಸ್ಯೆಗೆ ಸಾರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮಹಿಳಾ ಪ್ರಯಾಣಿಕರಾದ ನರಸಮ್ಮ, ಮಂಜುಳಾ ಅವರು ಅಸಮಧಾನ ತೋಡಿಕೊಂಡರು.

ನಿಲ್ದಾಣದಲ್ಲಿ ಅಳವಡಿಸಿರುವ ಎರಡು ಸಾಲು ಆಸನಗಳ ನಡುವೆ ಖಾಲಿ ಜಾಗ ಹೆಚ್ಚಾಗಿದೆ. ಖಾಲಿ ಜಾಗದಲ್ಲಿ ಇನ್ನೊಂದು ಸಾಲು ಆಸನಗಳ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅನುಕೂಲವಾಗುತ್ತದೆ ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಸನಗಳ ಕೊರತೆ ಕುರಿತು ಪರಿಶೀಲಿಸುತ್ತೇವೆ. ಆಸನಗಳ ವ್ಯವಸ್ಥೆಗಾಗಿ ಇಲಾಖೆಯ ಮೇಲಧಿಕಾರಿಗೆ ಪತ್ರ ಬರೆದು ಗಮನಕ್ಕೆ ತರುತ್ತೇವೆ.

-ರವಿ ಘಟಕ ವ್ಯವಸ್ಥಾಪಕ ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT