ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಟಲು ನೋವು: ರಟಕಲ್ ಪೀಠಾಧಿಪತಿ ಆತ್ಮಹತ್ಯೆ

ಸಿದ್ದರಾಮ ಸ್ವಾಮೀಜಿ ಪಾರ್ಥಿವ ಶರೀರದ ದರ್ಶನ ಪಡೆದ ಅಪಾರ ಭಕ್ತರು: ಮಠದೊಳಗೆ ಅಂತ್ಯಕ್ರಿಯೆ
Published 8 ಜುಲೈ 2024, 15:25 IST
Last Updated 8 ಜುಲೈ 2024, 15:25 IST
ಅಕ್ಷರ ಗಾತ್ರ

ಕಾಳಗಿ: ಪ್ರವಚನ ನೀಡಲು ಸಮಸ್ಯೆಯಾಗಿರುವುದೇ ಸ್ವಾಮೀಜಿ ಆತ್ಮಹತ್ಯೆಗೆ ಕಾರಣ. ಇದು ಸ್ವಾಮೀಜಿಯ ವಾಹನ ಚಾಲಕ ಮತ್ತು ಸೇವಕ ಜಗನ್ನಾಥ ಶಿವರಾಯ ಮಳ್ಳಪ್ಪನವರ್ ನೀಡಿದ ಮಾಹಿತಿ.

ತಾಲ್ಲೂಕಿನ ರಟಕಲ್ ಗ್ರಾಮದ ಮುರಘೇಂದ್ರ ಶಿವಯೋಗಿಗಳ ವಿರಕ್ತಮಠದ (ದೊಡ್ಡಮಠ) ಪೀಠಾಧಿಪತಿಯಾಗಿದ್ದ ಸಿದ್ದರಾಮ ಸ್ವಾಮೀಜಿ (35) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅನಾರೋಗ್ಯವೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆ ಶ್ರೀಮಠದಲ್ಲಿ ಸೋಮವಾರ ಬೆಳಗಿನಜಾವ 5 ಗಂಟೆಗೆ ತಿಳಿದುಬಂದಿದೆ.

‘ಸ್ವಾಮೀಜಿಯವರು ಪ್ರವಚನಕಾರರಾಗಿದ್ದರು. ಅವರಿಗೆ ಗಂಟಲು ನೋವು ಇತ್ತು. ಪ್ರವಚನ ಹೇಳಲು ಗಂಟಲು ನೋವು ತೊಂದರೆಯಾಗುತ್ತಿತ್ತು. ನಾಲ್ಕು ವರ್ಷಗಳ ಹಿಂದೆ ಗಂಟಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿ ಬೇರೆ ಬೇರೆ ಕಡೆಯಲ್ಲಿ ತೋರಿಸಿದರೂ ಗುಣಮುಖವಾಗದೆ ಪ್ರವಚನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಜೀವನ ವ್ಯರ್ಥವೆಂದು ಭಾವಿಸಿ ಜಿಗುಪ್ಸೆಗೊಂಡು ಅವರು ತಮ್ಮ ವಿಶ್ರಾಂತಿ ಕೊಠಡಿಯೊಳಗೆ ಮಧ್ಯರಾತ್ರಿ ರುಮಾಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಜಗನ್ನಾಥ ಶಿವರಾಯ ಮಳ್ಳಪ್ಪನವರ್ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮಧ್ಯಾಹ್ನವರೆಗೂ ವಿವಿಧೆಡೆಯ ಮಠಾಧೀಶರು, ಅಪಾರ ಭಕ್ತರು ಶ್ರೀಮಠಕ್ಕೆ ಆಗಮಿಸಿದರು. ಮಠದ ಪರಂಪರೆ, ವಿಧಿವಿಧಾನಗಳನ್ವಯ ಹುಲಸೂರಿನ ಶಿವಾನಂದ ಸ್ವಾಮೀಜಿ ಮತ್ತು ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ವಿವಿಧ ಊರುಗಳಿಂದ ತಂಡೋಪ ತಂಡವಾಗಿ ಬಂದ ಭಕ್ತರು ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ ದರ್ಶನ ಪಡೆದರು. ಭಜನೆ ಮಾಡಿದರು. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಶ್ರೀಗಳ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಟ್ರ್ಯಾಕ್ಟರ್‌ನಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಶ್ರೀಮಠದ ಆವರಣದೊಳಗೆ ಸ್ವಾಮೀಜಿಯ ಅಂತ್ಯಕ್ರಿಯೆ ನೆರವೇರಿತು.

ಹಾರಕೂಡದ ಚನ್ನವೀರ ಶಿವಾಚಾರ್ಯರು, ತಡೋಳಾದ ರಾಜಶೇಖರ ಶಿವಾಚಾರ್ಯರು, ಮುತ್ತ್ಯಾನ ಬಬಲಾದ ಮಠದ ಗುರುಪಾದಲಿಂಗ ಸ್ವಾಮೀಜಿ, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಚಿತ್ತಾಪುರದ ಸೋಮಶೇಖರ ಶಿವಾಚಾರ್ಯರು, ಸೇಡಂನ ಸದಾಶಿವ ಸ್ವಾಮೀಜಿ, ಹಾಲಪ್ಪಯ್ಯ ಸ್ವಾಮೀಜಿ, ಸ್ಥಳೀಯ ರೇವಣಸಿದ್ದೇಶ್ವರ ಶಿವಾಚಾರ್ಯರು, ರೇವಣಸಿದ್ಧ ಶರಣರು, ಸುಗೂರಿನ ಚನ್ನರುದ್ರಮುನಿ ಶಿವಾಚಾರ್ಯರು, ನಾಗೂರಿನ ಅಲ್ಲಂಪ್ರಭು ಸ್ವಾಮೀಜಿ, ಸೊಂತದ ಶಿವಕುಮಾರ ಶಿವಾಚಾರ್ಯರು, ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಸೇರಿದಂತೆ ಅಷ್ಟಗಿ, ಕಲಬುರಗಿ, ಹೊಸಳ್ಳಿ, ಕೋಡ್ಲಿ, ಚಿಮ್ಮಾಇದ್ಲಾಯಿ, ರಾವೂರ, ಖೇಳಗಿ, ನೀಲೂರ, ದೇಗಲಮಡಿ, ಮಳಖೇಡ, ನಿಡಗುಂದಾ, ಹಿಂಚಗೇರಿ, ಶಿವಪುರದ ಶ್ರೀಗಳು ಪಾಲ್ಗೊಂಡಿದ್ದರು.

ಶಾಸಕರಾದ ಡಾ.ಅವಿನಾಶ ಜಾಧವ, ಬಸವರಾಜ ಮತ್ತಿಮಡು, ಜಗದೇವ ಗುತ್ತೇದಾರ, ಮಾಜಿ ಸಂಸದ ಡಾ.ಉಮೇಶ ಜಾಧವ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಮುಖಂಡರಾದ ಸುಭಾಷ ರಾಠೋಡ, ಸಂಜೀವನ್ ಯಾಕಾಪುರ, ರಾಜೇಶ ಗುತ್ತೇದಾರ, ಗೋಪಾಲರಾವ ಕಟ್ಟಿಮನಿ ಅನೇಕರು ಪಾಲ್ಗೊಂಡಿದರು.

ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೇಮಠ, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸುಲೇಪೇಟ ಸಿಪಿಐ ರಾಘವೇಂದ್ರ, ಸ್ಥಳೀಯ ಪಿಎಸ್ಐ ಪುಷ್ಪಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಸ್ಪಿ ಅಡ್ಡೂರ ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ ಭೇಟಿ ನೀಡಿದರು.

ಪಾರ್ಥಿವ ಶರೀರದ ದರ್ಶನ ಪಡೆಯಲು ಸೇರಿದ್ದ ಭಕ್ತರು
ಪಾರ್ಥಿವ ಶರೀರದ ದರ್ಶನ ಪಡೆಯಲು ಸೇರಿದ್ದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT