ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಟರಿ ಮೂಲಕ ಕುಸನೂರ ವಸತಿ ಬಡಾವಣೆಯ ನಿವೇಶನಗಳು ಹಂಚಿಕೆ

Last Updated 17 ಮೇ 2022, 8:21 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಕೆರೆಯ ಒಂದು ಭಾಗದಲ್ಲಿ ಈಗಾಗಲೇ ಮಹಾನಗರ ಪಾಲಿಕೆ ಮತ್ತು ಕೆ.ಕೆ‌.ಆರ್‌.ಡಿ.ಬಿ. ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದ್ದು, ಅದೇ ರೀತಿಯಾಗಿ ಇನ್ನೊಂದು ಭಾಗದಲ್ಲಿ ಕಲಬುರಗಿ‌ ನಗರಾಭಿವೃದ್ಧಿ ಪ್ರಾಧಿಕಾರವು ₹ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನುಕೈಗೊಳ್ಳಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ದಯಾಘನ‌ ಧಾರವಾಡಕರ್ ಹೇಳಿದರು.

ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ಕುಸನೂರ ವಸತಿ ಬಡಾವಣೆ ಯೋಜನೆಯಲ್ಲಿನ ನಿವೇಶನಗಳ ಲಾಟರಿ ಮೂಲಕ ಹಂಚಿಕೆ ಪ್ರಕ್ರಿಯೆಗೆ ಚಾಲನೆ‌ ನೀಡಿ ಮಾತನಾಡಿದರು.

ಪ್ರಾಧಿಕಾರವು ನಿವೇಶನ, ಮನೆ‌, ಬಡಾವಣೆ ಅಭಿವೃದ್ಧಿಪಡಿಸುವುದಷ್ಟೇ ಅಲ್ಲ ನಗರದ ಅಭಿವೃದ್ಧಿಗೂ ಕೈ ಜೋಡಿಸಿದೆ. ಕೆ.ಕೆ.ಆರ್.ಡಿ.ಬಿ. ಅನುದಾನದೊಂದಿಗೆ ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ನಗರದ ಕಣ್ಣಿ ತರಕಾರಿ ಮಾರುಕಟ್ಟೆ ಕಾಮಗಾರಿಗೆ ಶಂಕುಸ್ಥಾಪನೆ‌ ನೆರವೇರಿಸಿದ್ದು, ಮುಂದಿನ 2 ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ‌. ಇದರಿಂದ ಬೀದಿಯಲ್ಲಿ ತರಕಾರಿ‌ ಮಾರುತ್ತಿದ್ದ ರೈತಾಪಿ ಜನರಿಗೆ ಸುಸಜ್ಜಿತ ಸ್ಥಳ ದೊರೆಯಲಿದೆ. ಒಟ್ಟಾರೆಯಾಗಿ ಕಲಬುರಗಿ ನಗರ ಸುಂದರ‌ ಮತ್ತು ಮಾದರಿ‌ ನಗರ‌ವನ್ನಾಗಿಸುವ ಪಣ ತೊಡಲಾಗಿದೆ ಎಂದರು.

ಕುಸನೂರ ಬಡಾವಣೆ ಯೋಜನೆ ನಾಲ್ಕೈದು ವರ್ಷದ ಹಿಂದಿನ ಯೋಜನೆಯಾಗಿದೆ. ಕಾರಣಾಂತರದಿಂದ‌ ನನೆಗುದಿಗೆ ಬಿದ್ದಿದ ಈ ಯೋಜನೆಗೆ ಎದುರಾದ ಸಮಸ್ಯೆ-ತೊಡಕುಗಳನ್ನು ನಿವಾರಿಸಿ ಇಂದು ನಿವೇಶನ ಹಂಚಿಕೆ ಪಾರದರ್ಶಕವಾಗಿ ಮಾಡಲಾಗಿದೆ. ಮುಂದಿನ ದಿನದಲ್ಲಿ ಇಂತಹ ಯೋಜನೆಗಳು ನಿರಂತರವಾಗಿ ಜಾರಿಗೆ ತರಲಾಗುವುದು ಎಂದರು.

ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ 90.17 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾದ ಕುಸನೂರ ವಸತಿ ಯೋಜನೆಯಡಿ ಒಟ್ಟು 1490 ನಿವೇಶನಗಳಿದ್ದು, ಇದರಲ್ಲಿ ಮೂಲೆ‌ ನಿವೇಶನ 188 ಹೊರತುಪಡಿಸಿ 1302 ನಿವೇಶನಗಳನ್ನು ಹರಾಜಿಗೆ ಇಡಲಾಗಿದೆ. 1302 ನಿವೇಶನಕ್ಕೆ 1989 ಅರ್ಜಿ ಸ್ವೀಕೃತಗೊಂಡಿರುವ ಹಿನ್ನೆಲೆಯಲ್ಲಿ ಪ್ರವರ್ಗವಾರು ಲಾಟರಿ ಮೂಲಕ‌ ಪಾರದರ್ಶಕವಾಗಿ ಹಂಚಿಕೆ ಪ್ರಕ್ರಿಯೆ‌ ನಡೆಸಲಾಗಿದೆ ಎಂದರು.

ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಮುರಳಿಧರ ದೇಶಮುಖ, ಪ್ರಾಧಿಕಾರದ ನಗರ ಯೋಜನಾ ಸದಸ್ಯ ಎಸ್.ಎಸ್.ಗಾರಂಪಳ್ಳಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಿಲೀಪ್ ಜಾಧವ, ಕಾರ್ಯದರ್ಶಿ ವೀಣಾ ಕುಲಕರ್ಣಿ ಇದ್ದರು. ಸುಬ್ಬರಾವ್ ನಿರ್ವಹಣೆ‌ ಮಾಡಿದರು.

ಪ್ರಾಧಿಕಾರದ ಸಿಬ್ಬಂದಿ ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT