ಸೋಮವಾರ, ಆಗಸ್ಟ್ 2, 2021
28 °C
ತಂಪೆರೆದ ಮಳೆ: ರೈತರಲ್ಲಿ ಮೂಡಿದ ಮಂದಹಾಸ

ಜೇವರ್ಗಿ: ಶೇ 90 ರಷ್ಟು ಬಿತ್ತನೆ ಪೂರ್ಣ

ವೆಂಕಟೇಶ ಆರ್. ಹರವಾಳ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಬುಧವಾರ ಧಾರಾಕಾರ ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಜೂನ್ ತಿಂಗಳ ಎರಡನೇ ವಾರದಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಸುರಿದ ಕಾರಣ ಜೇವರ್ಗಿ ಹೋಬಳಿ ವ್ಯಾಪ್ತಿಯ ಸೊನ್ನ, ಕಲ್ಲಹಂಗರಗಾ, ಮಾವನೂರ, ಹರವಾಳ, ಜನಿವಾರ, ಗೌನಳ್ಳಿ, ರಾಸಣಗಿ, ಹಂದನೂರ, ರೇವನೂರ, ಕೂಡಿ, ಕೋಬಾಳ, ಮಂದ್ರವಾಡ, ಬಣಮಿ, ಕೋನಾ ಹಿಪ್ಪರಗಾ, ರದ್ದೇವಾಡಗಿ, ಕೋಳಕೂರ, ಹರನೂರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ರೈತರು ಬಿತ್ತನೆ ಪೂರ್ಣಗೊಳಿಸಿದ್ದರು.

ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಸೂರ್ಯಕಾಂತಿ, ಹೆಸರು, ಉದ್ದು ಸೇರಿದಂತೆ ಅಲ್ಪಾವಧಿ ಬೆಳೆಗಳನ್ನು ಬಿತ್ತನೆ ಮಾಡಿದ ನಂತರ ವಾರದಲ್ಲಿ ಎರಡು ಬಾರಿ ಅಲ್ಪ ಸ್ವಲ್ಪ ಮಳೆಯಾಗಿದ್ದರಿಂದ ಬೆಳೆಗಳು ಚೇತರಿಕೆ ಕಂಡಿದ್ದವು.

ಬುಧವಾರ ಸುರಿದ ಮಳೆ ರೈತರಿಗೆ ವರವಾಗಿ ಪರಿಣಮಿಸಿದೆ. ತಾಲ್ಲೂಕಿನಲ್ಲಿ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ರೈತರಿಗೆ ಬೆಳೆಗಳು ಕೈ ಸೇರಿರಲಿಲ್ಲ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಾಲ ಕಾಲಕ್ಕೆ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.

ತಾಲ್ಲೂಕಿನ ಶಖಾಪುರ, ಅವರಾದ ಗ್ರಾಮಗಳ ಸೀಮೆಯಲ್ಲಿ ರೈತರು ಹೆಸರು, ಉದ್ದು, ಹತ್ತಿ ಬಿತ್ತನೆ ಮಾಡಿದ್ದು ಈಗಾಗಲೇ ಕಳೆ ತೆಗೆಯುವ ಹಂತಕ್ಕೆ ಬಂದಿವೆ.

ತಾಲ್ಲೂಕಿನ ಪ್ರಮುಖ ಬೆಳೆಗಳಾದ ತೊಗರಿ 64,450 ಹೆಕ್ಟೇರ್, ಹತ್ತಿ 42,725 ಹೆಕ್ಟೇರ್, ಸಜ್ಜೆ, ಸೂರ್ಯಕಾಂತಿ, ಮೆಕ್ಕೆ ಜೋಳ 1000 ಹೆಕ್ಟೇರ್, ಹೆಸರು, 1,250 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಸೇರಿದಂತೆ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಈಗಾಗಲೇ ಬಿತ್ತನೆ ಕಾರ್ಯ ಶೇ 90ರಷ್ಟು ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲಕುಮಾರ ಜವಳಗಿ ತಿಳಿಸಿದ್ದಾರೆ.

‘ಒಂದು ತಿಂಗಳ ಹಿಂದೆ ಬಿತ್ತನೆ ಮಾಡಿದ ಬೆಳೆಗಳು ಕಳೆ ಕೀಳುವ ಹಂತಕ್ಕೆ ಬಂದಿವೆ’ ಎಂದು ಸೊನ್ನ ಗ್ರಾಮದ ರೈತ ಮಲ್ಲಿಕಾರ್ಜುನ ಬಿರಾದಾರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.