ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಸ್‍ಸಿಪಿ- ಟಿಎಸ್‍ಪಿ ಪ್ರಗತಿ ಪರಿಶೀಲನಾ ಸಭೆ
Last Updated 18 ಜುಲೈ 2019, 19:55 IST
ಅಕ್ಷರ ಗಾತ್ರ

ಕಲಬುರ್ಗಿ: ಎಲ್ಲ ರೈತರಿಗೆ ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸುತ್ತಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಸಲಹೆ ನೀಡಿದರು.

ಬುಧವಾರ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಅನುಸೂಚಿತ ಬುಡಕಟ್ಟುಗಳ ಉಪ ಯೋಜನೆಯಡಿ (ಎಸ್‌ಸಿಪಿ–ಟಿಎಸ್‌ಪಿ) ಕಾರ್ಯಕ್ರಮ ಅನುಷ್ಠಾನದ ಕುರಿತ ಜಿಲ್ಲಾಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ತೊಗರಿ, ಉದ್ದು, ಹೆಸರು, ಸೋಯಾಬಿನ್ ಬಿತ್ತನೆ ಬೀಜಗಳನ್ನು ಪ್ರತಿ ಕಿಲೋ ಗ್ರಾಂ ಗೆ ಎಸ್‍ಸಿ–ಎಸ್ಟಿ ಜನಾಂಗದ ರೈತರಿಗೆ ₹37.50 ಸಬ್ಸಿಡಿ ಹಾಗೂ ಇತರೆ ರೈತರಿಗೆ ₹ 25 ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಭತ್ತದ ಬೀಜವನ್ನು ಎಸ್‍ಸಿ–ಎಸ್ಟಿ ಜನಾಂಗದ ರೈತರಿಗೆ ₹ 12 ಸಬ್ಸಿಡಿ ಹಾಗೂ ಇತರೆ ರೈತರಿಗೆ ₹8 ರೂಪಾಯಿ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಸೂರ್ಯಕಾಂತಿ ಬಿತ್ತನೆ ಬೀಜಗಳು ₹ 120 ಸಬ್ಸಿಡಿ ದರದಲ್ಲಿ ದೊರೆಯಲಿವೆ. ಹಾಗೆಯೇ ಸಜ್ಜೆ, ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದ್ದು, ರೈತರು ಬಿತ್ತನೆ ಬೀಜ ಪಡೆಯುವ ಮೂಲಕ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಅವರು ಕೋರಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗೂರು ಮಾತನಾಡಿ, 2019–20ನೇ ಸಾಲಿನಲ್ಲಿ ಎಸ್‍ಸಿಪಿ ಯೋಜನೆಯಡಿಯಲ್ಲಿ ಮುಂಗಾರು ಬಿತ್ತನೆ ಬೀಜಕ್ಕಾಗಿ ರಾಜ್ಯ ವಲಯದ ಅನುದಾನದಲ್ಲಿ ₹2 ಕೋಟಿ ಮೀಸಲಿಡಲಾಗಿದೆ. ಈಗಾಗಲೇ ₹1.07 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈ ಪೈಕಿ ₹1.01 ಕೋಟಿ ರೂಪಾಯಿ ಖರ್ಚಾಗಿದೆ ಎಂದರು.

‘ನರೇಗಾ’ದಡಿ ಚೆಕ್ ಡ್ಯಾಂ, ಕೃಷಿ ಹೊಂಡ, ಕಂದಕ ಬದುಗಳ ನಿರ್ಮಾಣ ಮುಂತಾದವುಗಳ ಕಾಮಗಾರಿ ನಡೆಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜಾ, ನರೇಗಾ ಕಾಮಗಾರಿ ಹೆಚ್ಚಿಸಬೇಕು ಎಂದು ತಾಕೀತು ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಎಸ್‍ಸಿಪಿ ವಿಶೇಷ ಘಟಕ ಯೋಜನೆಯಡಿ ಭಾಗ್ಯಲಕ್ಷಿ ಬಾಂಡ್ ವಿತರಣೆಯ ಗುರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೂರು ತಿಂಗಳಲ್ಲಿ ಕೇವಲ 254 ಫಲಾನುಭವಿಗಳ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಶಿಶುಗಳ ಜನನ ಪ್ರಮಾಣಕ್ಕೆ ಹೋಲಿಸಿದರೆ ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಸತೀಶ್ ಅವರು, ಎಸ್‍ಸಿಪಿ-ಟಿಎಸ್‍ಪಿ ವಿಶೇಷ ಘಟಕ ಯೋಜನೆಗಳ ಅಡಿಯಲ್ಲಿ 2018-19 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ 95.45ರಷ್ಟು ಗುರಿ ಸಾಧಿಸಲಾಗಿದೆ. ಇನ್ನು 2019-20ನೇ ಸಾಲಿನಲ್ಲಿ ಜೂನ್ ಅಂತ್ಯದವರೆಗೆ ಶೇ15.31ರಷ್ಟು ಸಾಧನೆ ತೋರಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT