ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಆಧುನಿಕತೆಗೆ ರೂಪಾಂತರಗೊಂಡ ‘ತೊಟ್ಟಿಲು’

ಪ್ಲಾಸ್ಟಿಕ್‌, ಫೈಬರ್ ಭರಾಟೆಯಲ್ಲೂ ಬೇಡಿಕೆ ಉಳಿಸಿಕೊಂಡ ಕಟ್ಟಿಗೆ ತೊಟ್ಟಿಲು
ಪ್ರಭು ಬ. ಅಡವಿಹಾಳ
Published 5 ಜುಲೈ 2024, 5:47 IST
Last Updated 5 ಜುಲೈ 2024, 5:47 IST
ಅಕ್ಷರ ಗಾತ್ರ

ಕಲಬುರಗಿ: ‘ತೊಟ್ಟಿಲು ಹೊತ್ತುಕೊಂಡು, ತೌರ ಬಣ್ಣ ಉಟ್ಕೊಂಡು, ಅಪ್ಪ ಕೊಟ್ಟ ಎಮ್ಮೆ ಹೊಡ್ಕೊಂಡು, ತಿಟ ಹತ್ತಿ ತಿರುಗಿ ನೋಡ್ಯಾಳ...’

ಜಾನಪದದ ಈ ಸಾಲುಗಳನ್ನು ಬಹುತೇಕರು ಕೇಳಿರುವುದು ವಿರಳ. ಆದರೆ, ಚೊಚ್ಚಲ ಹೆರಿಗೆಯ ನಂತರ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಮಗಳಿಗೆ ತೊಟ್ಟಿಲು ಉಡುಗೊರೆ ಕೊಡುವುದು ಭಾರತೀಯ ಸಂಪ್ರದಾಯ ಮತ್ತು ಮಗುವಿಗೆ ತೊಟ್ಟಿಲು ಅತ್ಯಗತ್ಯ. ಮಗುವಿನ ಸೋದರ ಮಾವ ತೊಟ್ಟಿಲು ಹೊತ್ತುಕೊಂಡು ಹೋಗಿ ಮುಟ್ಟಿಸಿ ಬರುತ್ತಾನೆ.

ಆಧುನಿಕತೆಯ ಭರಾಟೆಯಲ್ಲಿ ಮಾರುಕಟ್ಟೆಗೆ ಪ್ಲಾಸ್ಟಿಕ್‌, ಫೈಬರ್, ಕಬ್ಬಿಣದ ತೊಟ್ಟಿಲುಗಳು ಲಗ್ಗೆ ಇಟ್ಟರೂ ಕಟ್ಟಿಗೆಯ ತೊಟ್ಟಿಲು ಮಾತ್ರ ತನ್ನ ಬೇಡಿಕೆ ಉಳಿಸಿಕೊಂಡಿದೆ. ನಗರದ ಚೌಕ್‌ ಪೊಲೀಸ್‌ ಠಾಣೆಯಿಂದ ಗಂಜ್‌ ರಸ್ತೆಯತ್ತ ಹೊರಟರೆ ತೊಟ್ಟಿಲುಗಳ ಅಂಗಡಿ ಕಾಣಸಿಗುತ್ತವೆ. ನಿತ್ಯ ಏನಿಲ್ಲವೆಂದರೂ ಪ್ರತಿ ಅಂಗಡಿಯಿಂದ ನಾಲ್ಕೈದು ತೊಟ್ಟಿಲುಗಳು ಮಾರಾಟವಾಗುತ್ತವೆ. ಕಟ್ಟಿಗೆಯ ತೊಟ್ಟಿಲುಗಳಿಗೆ ಗಾತ್ರ, ಬಣ್ಣ, ಕುಸುರಿ ಕೆಲಸಕ್ಕೆ ತಕ್ಕಂತೆ ದರ ನಿಗದಿಯಾಗಿದೆ. ಕನಿಷ್ಠ ₹3500ರಿಂದ ಗರಿಷ್ಠ ₹8000ದವರೆಗೆ ದರವಿದೆ.

ಕಲಬುರಗಿ ನಗರಕ್ಕೆ ಗುಜರಾತ್‌, ಹೈದರಾಬಾದ್‌ನಿಂದ ತೊಟ್ಟಿಲುಗಳು ಬರುತ್ತವೆ. ಕಟ್ಟಿಗೆ ತೊಟ್ಟಿಲುಗಳನ್ನು ಆರ್ಡರ್ ಕೊಟ್ಟೂ ಮಾಡಿಸಬಹುದಾಗಿದೆ. ಅಲ್ಲದೇ ಮೂರ್ನಾಲ್ಕು ತಲೆಮಾರುಗಳವರೆಗೂ ಇವುಗಳು ಬಾಳಿಕೆ ಬರುತ್ತವೆ. ತೊಟ್ಟಿಲು ನಿತ್ಯ ಬಳಸದಿದ್ದರೂ ನಾಮಕರಣಕ್ಕಂತೂ ಬೇಕೆ ಬೇಕು ಎನ್ನುತ್ತಾರೆ ವ್ಯಾಪಾರಿ ಬಾಲಚಂದ್ರ ಬೀರನಳ್ಳಿ. ಇನ್ನು ಕೆಲವೊಂದು ಸಮುದಾಯದಲ್ಲಿ ತವರು ಮನೆಯವರ ಬದಲು ಸಂಬಂಧಿಕರು ತೊಟ್ಟಿಲು ಕೊಡಿಸುವ ಸಂಪ್ರದಾಯವಿರುತ್ತದೆ. ಹಾಗಾಗಿ ಚೌಕಾಸಿ ಇದ್ದೇ ಇರುತ್ತದೆ ಎನ್ನುತ್ತಾರೆ ಅವರು.

ಕಟ್ಟಿಗೆ ತೊಟ್ಟಿಲುಗಳನ್ನು ಮಡಿಚಿಡುವುದು ಸ್ವಲ್ಪ ಕಷ್ಟಕರ. ಹಾಗಾಗಿ ದೂರದ ಊರುಗಳಿಗೆ ಹೋಗುವವರು ಪ್ಲಾಸ್ಟಿಕ್‌, ಫೈಬರ್‌ ತೊಟ್ಟಿಲುಗಳ ಮೊರೆ ಹೋಗುತ್ತಾರೆ. ಆದರೆ, ಅವುಗಳ ಬಾಳಿಕೆ ಕಡಿಮೆ. ಹೀಗಾಗಿ ಕಟ್ಟಿಗೆ ತೊಟ್ಟಿಲುಗಳನ್ನೇ ಇಷ್ಟಪಡುತ್ತಾರೆ. ಇನ್ನು ಕಟ್ಟಿಗೆ ತೊಟ್ಟಿಲಿಗೆ ಅರಗು, ರಾಳ, ಹುಣಸೆಬೀಜದ ಸೆರಿ ಬಳಸಿ ಬಣ್ಣ ಹಾಕಲಾಗುತ್ತದೆ. ಅರಗು ನೀರನ್ನು ಹಿಡಿಯುವುದಿಲ್ಲ. ಅದು ನೀರನ್ನು ಜಾರಿಸುತ್ತದೆ. ಆದರೆ, ಅದನ್ನು ಬಿಸಿಲಲ್ಲಿಟ್ಟರೆ ಮಾತ್ರ ಹಾಳಾಗುತ್ತದೆ ಎನ್ನುತ್ತಾರೆ ವ್ಯಾಪಾರಿ.

ತವರು ಮನೆಯಿಂದ ಹೋಗುವ ಮಗಳಿಗೆ ಅಪ್ಪ ಇಂದು ಎಮ್ಮೆ ಕೊಡಲಿಕ್ಕಿಲ್ಲ. ಮೊಮ್ಮಗುವಿನ ನೆಮ್ಮದಿಯ ನಿದ್ರೆಗೆ ತೊಟ್ಟಿಲು ಕೊಟ್ಟೇ ಕಳಿಸುತ್ತಾರೆ.

ಮೋದಿಗೂ ಕಟ್ಟಿಗೆ ತೊಟ್ಟಿಲೇ ಉಡುಗೊರೆ

ರಾಜ್ಯದಲ್ಲಿ ತೊಟ್ಟಿಲು ನಿರ್ಮಾಣಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಪ್ರಸಿದ್ಧಿ ಪಡೆದಿದೆ. ಅಲ್ಲಿ ಸಾಗವಾನಿ ಕಟ್ಟಿಗೆ ಬಳಸಿ ತೊಟ್ಟಿಲು ನಿರ್ಮಾಣ ಮಾಡುತ್ತಾರೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಧಾರವಾಡ ಐಐಟಿ ಉದ್ಘಾಟನೆಗೆ ಬಂದಿದ್ದಾಗ ಅಲ್ಲಿನ ಜಿಲ್ಲಾಡಳಿತ ಕೂಡ ಕಟ್ಟಿಗೆ ತೊಟ್ಟಿಲನ್ನೇ ಉಡುಗೊರೆ ನೀಡಿತ್ತು. ಇನ್ನು ರಾಕಿಂಗ್‌ ಸ್ಟಾರ್‌ ಯಶ್‌–ರಾಧಿಕಾ ದಂಪತಿ ಪುತ್ರ ಯಥರ್ವಗೆ ರೆಬಲ್‌ಸ್ಟಾರ್‌ ಅಂಬರೀಷ್‌ ಕೂಡ ಕಲಘಟಗಿ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು.

ಈ ಹಿಂದೆ ಮನೆಯ ಜಂತಿಗೆ ತೊಟ್ಟಿಲು ಕಟ್ಟುತ್ತಿದ್ದರು ಆದರೆ ಈಗ ನಿಲ್ಲಿಸುವ ತೊಟ್ಟಿಲು ಬಂದಿವೆ. ತೊಟ್ಟಿಲು ತಯಾರಿಕೆಯ ವಿಧಾನ ಬದಲಾಗಿರಬಹುದು. ಅದರ ಅಗತ್ಯ ಮಾತ್ರ ಇದ್ದೇ ಇದೆ.
–ಬಾಲಚಂದ್ರ ಬೀರನಳ್ಳಿ, ವ್ಯಾಪಾರಿ
ಮಗುವಿನ ನೆಮ್ಮದಿಯ ನಿದ್ದೆಗೆ ತೊಟ್ಟಿಲು ಬೇಕೆ ಬೇಕು. ಆರು ವರ್ಷದವರೆಗೂ ಮಗು ತೊಟ್ಟಿಲಲ್ಲೇ ಮಲಗುತ್ತದೆ. ಅಳುವ ಮಗು ಕೂಡ ತೊಟ್ಟಿಲಿಗೆ ಹಾಕುವುದರಿಂದ ಅಳು ನಿಲ್ಲಿಸುತ್ತದೆ.
–ಚೈತ್ರಾ, ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT