ಮಂಗಳವಾರ, ಮಾರ್ಚ್ 21, 2023
20 °C

ಕೋವಿಡ್‌ನಿಂದ ಅಪ್ಪ, ಅವ್ವ, ಅಣ್ಣ ಸಾವು: ಮನೆತನದ ಆಧಾರ ಸ್ತಂಭಗಳೇ ಇಲ್ಲವಾದರು

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮನೆತನಕ್ಕೆ ಆಸರೆ ಆಗಿದ್ದ ಅಪ್ಪ, ಅವ್ವ, ಅಣ್ಣ ಮೂವರನ್ನು ಕೊರೊನಾ ಬಲಿ ಪಡೆಯಿತು. ಒಂದೇ ತಿಂಗಳಲ್ಲಿ ಒಂದರ ನಂತರ ಒಂದು ಬಂದೆರಗಿದ ಈ ಆಘಾತಗಳನ್ನು ತಡೆದುಕೊಳ್ಳಲು ನಾವು ಪಟ್ಟಂಥ ಕಷ್ಟ ಹೇಳತೀರದು. ಕುಟುಂಬದಲ್ಲಿ ಈಗ ಅತ್ತಿಗೆ, ನಾನು ಮತ್ತು ಅಣ್ಣನ ಇಬ್ಬರು ಹೆಣ್ಣುಮಕ್ಕಳು ಮಾತ್ರ ಇದ್ದೇವೆ. ಮಕ್ಕಳ ಮನಸ್ಸಿನ ಮೇಲೆ ಇದು ಎಂಥ ಪರಿಣಾಮ ಬೀರಿದೆಯೋ ದೇವರಿಗೇ ಗೊತ್ತು...

ಕಲಬುರ್ಗಿಯ ಮಹಾದೇವ ನಗರದ ನಿವಾಸಿ ಗಂಗಾಧರ ವಿಶ್ವಕರ್ಮ ಅವರ ನೋವಿನ ಮಾತುಗಳು ಇವು. 

ಗಂಗಾಧರ ಅವರ ತಾಯಿ ಮಹಾದೇವಿ (59) ಅವರು ಏ.23ರಂದು ಕೊರೊನಾದಿಂದ ನಿಧನ ಹೊಂದಿದರು. ಇದಕ್ಕೂ ಮುಂಚೆ ಕೋವಿಡ್‌ ಪತ್ತೆಯಾಗಿದ್ದ ಅವರನ್ನು ಐದು ದಿನ ಹೋಂ ಐಸೋಲೇಷನ್‌ ಮಾಡಲಾಗಿತ್ತು. ಆಮ್ಲಜನಕ ಪ್ರಮಾಣ ಕ್ಷೀಣಿಸಿದ್ದರಿಂದ ಏ.15ರಂದು ನಗರದ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದ ಕಾರಣ ಅವರು ಉಳಿಯಲಿಲ್ಲ ಎನ್ನುವುದು ಗಂಗಾಧರ ಅವರ ನೋವು.

ತಾಯಿ ನಿಧನದ ಬಳಿಕ ಅಣ್ಣ ಮೌನೇಶಕುಮಾರ (41) ಅವರು ಜರ್ಜರಿತರಾದರು. ಅವರನ್ನೂ ಏಪ್ರಿಲ್‌ 26ಕ್ಕೆ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಯಿತು. ಇವರ ಬಳಿಕ ತಂದೆ ಶ್ರೀಪತಿರಾವ್‌ (75) ಅವರನ್ನು ಮೇ 8ಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮೇ 20ರಂದು ಬೆಳಿಗ್ಗೆ 6ಕ್ಕೆ ಅವರು ತೀರಿಕೊಂಡರು. ಅದೇ ದಿನ ಸಂಜೆ 5.43ಕ್ಕೆ ಮೌನೇಶಕುಮಾರ ಕೂಡ ಇಲ್ಲವಾದರು. ತಂದೆ– ಮಗ ಒಂದೇ ದಿನ ಸಾವನ್ನಪ್ಪಿದ್ದು, ಕುಟುಂಬಕ್ಕೆ ಬರಸಿಡಿಲು ಎರಗಿದಂತಾಯಿತು.

ಈ ಮೂವರಿಗೂ ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಕೊಡಿಸಲಾಗಿದ್ದು, ಒಟ್ಟಾರೆ ಬಿಲ್‌ ₹ 21 ಲಕ್ಷ ದಾಟಿದೆ ಎನ್ನುತ್ತಾರೆ ಗಂಗಾಧರ. ತಂದೆ– ತಾಯಿ ವಯಸ್ಸಾಗಿದ್ದರಿಂದ ಮನೆಯಲ್ಲೇ ಇದ್ದರು. ಮೌನೇಶಕುಮಾರ ಅವರು ಮುಂಬೈನ ಔಷಧಿ ತಯಾರಿಕಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಣವನ್ನು ಗೆಳೆಯರು, ಪರಿಚಯಸ್ಥರು ಹಾಗೂ ಕೆಲಸ ಮಾಡುತ್ತಿದ್ದ ಕಂಪನಿಗಳ ಬಳಿ ಸಾಲ ಪಡೆದು ಆಸ್ಪತ್ರೆ ಬಿಲ್‌ ಕಟ್ಟಿದ್ದಾರೆ.

28 ವರ್ಷದವರಾದ ಗಂಗಾಧರ ಇನ್ನೂ ಮದುವೆಯಾಗಿಲ್ಲ. ಸದ್ಯ ಮನೆತನದ ಭಾರ ಅವರ ಹೆಗಲಿಗೇ ಬಿದ್ದಿದೆ. ಹೈದರಾಬಾದ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಈಗ ಆ ಕೆಲಸವೂ ಇಲ್ಲ.

ಕಲಬುರ್ಗಿಯ ಮಹಾದೇವ ನಗರದಲ್ಲಿ ಮನೆ ಇದೆ. ಗಂಗಾಧರ ಅವರು ಅಲ್ಲೇ ಇದ್ದು, ಅವರ ಅಕ್ಕ– ಭಾವ ಜೊತೆಯಾಗಿದ್ದಾರೆ. ಮೌನೇಶಕುಮಾರ ಅವರ ಪತ್ನಿ ಕುಸುಮಾ ಅವರನ್ನು ಸಮಾಧಾನ ಪಡಿಸಲು ತವರು ಮನೆಯಾದ ಪುಣೆಗೆ ಕರೆದೊಯ್ಯಲಾಗಿದೆ.

ಮೌನೇಶಕುಮಾರ ಅವರಿಗೆ ಮುಂಬೈನಲ್ಲಿ ನೌಕರಿ ಸಿಕ್ಕ ಮೇಲೆ ಪತ್ನಿ ಕುಸುಮಾ, ಇಬ್ಬರು ಮಕ್ಕಳಾದ ಮಧುಲಿಖಾ (6ನೇ ತರಗತಿ) ಹಾಗೂ ವರ್ಷಿಣಿ (4ನೇ ತರಗತಿ) ಪುಣೆಯಲ್ಲಿ ನೆಲೆಸಿದ್ದರು. ತವರು ಮನೆಯವರೂ ಅಷ್ಟೇನು ಸ್ಥಿತಿವಂತರಲ್ಲ. ಹೀಗಾಗಿ, ಹಲವು ಚಿಂತೆಗಳು ಅವರನ್ನು ಈಗಿನಿಂದಲೇ ಬಾಧಿಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು