ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಹಾಸ್ಟೆಲ್‌ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಪ್ರತಿಭಟನೆ

ಸಿಯುಕೆ: ಪಿಎಚ್‌.ಡಿ. ಸಂಶೋಧನಾರ್ಥಿಗಳಿಗೆ ಒಬ್ಬರಿಗೆ ಒಂದೇ ಕೊಠಡಿ ಹಂಚಿಕೆಗೆ ಒತ್ತಾಯ
Last Updated 3 ಡಿಸೆಂಬರ್ 2022, 7:07 IST
ಅಕ್ಷರ ಗಾತ್ರ

ಕಲಬುರಗಿ: ಪಿಎಚ್‌.ಡಿ. ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೊದಲೇ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಸಣ್ಣ ಅಳತೆಯ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು, ಇದೀಗ ಆ ಕೊಠಡಿಗೆ ಮತ್ತೊಬ್ಬ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಕ್ರಮ ಸರಿಯಲ್ಲ. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.

‘ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಮುಖ್ಯ ಪಿಎಚ್‌.ಡಿ. ಹಾಸ್ಟೆಲ್‌ನಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, 7x11 ಅಳತೆಯ ಸಣ್ಣ ಕೊಠಡಿಗಳನ್ನು ನೀಡಲಾಗಿದೆ. ಮೂರ್ನಾಲ್ಕು ವರ್ಷಗಳವರೆಗೆ ವಿದ್ಯಾರ್ಥಿಗಳು ಇಲ್ಲಿ ಇರಬೇಕಾಗಿರುವುದರಿಂದ ಅವರ ಪುಸ್ತಕಗಳು, ಸಾಮಾನು ಸರಂಜಾಮುಗಳು ಸಾಕಷ್ಟಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಆ ಕೊಠಡಿಯಲ್ಲಿ ಇಬ್ಬರನ್ನು ಹಾಕಬಾರದು. ವಿಶ್ವವಿದ್ಯಾಲಯವು ಹಾಸ್ಟೆಲ್ ಹಾಗೂ ಮೆಸ್‌ಗಾಗಿ ನಿಗದಿತ ಶುಲ್ಕವನ್ನು ಪಡೆಯುತ್ತಿದ್ದು, ಶುಲ್ಕ ಪಾವತಿ ತಡವಾದರೆ ಶೇ 30ರಷ್ಟು ದಂಡವನ್ನು ವಿಧಿಸಲಾಗುತ್ತದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶಾಲ ಸ್ಥಳಾವಕಾಶ ಇರುವ ಒಬ್ಬರಿಗೆ ಒಂದೇ ಕೊಠಡಿಯನ್ನು ನೀಡಬೇಕು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸೂಚನೆ ನೀಡಿದೆ. ಶುಲ್ಕ ಪಡೆದುಕೊಂಡರೂ ವಿಶ್ವವಿದ್ಯಾಲಯ ಸೂಕ್ತ ವಸತಿ ವ್ಯವಸ್ಥೆ ಮಾಡುತ್ತಿಲ್ಲ. ಶೌಚಾಲಯ ನಿರ್ವಹಣೆ ಸರಿಯಾಗಿ ಮಾಡದೇ ಇರುವುದರಿಂದ ಹಲವು ರೋಗ ರುಜಿನಗಳಿಗೆ ತುತ್ತಾಗಬೇಕಾಗಿದೆ. ಆದ್ದರಿಂದ ಹಾಸ್ಟೆಲ್‌ ಕೊಠಡಿಗಳಲ್ಲಿ ಇನ್ನೊಬ್ಬರಿಗೆ ಹಂಚಿಕೆ ಮಾಡಬಾರದು. ಈ ಕುರಿತು ಹೊರಡಿಸಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ನಂದಕುಮಾರ್, ಶಶಿಕುಮಾರ್, ಆಸಿಫ್, ಚನ್ನವೀರಯ್ಯ, ಶಿವಾಂಜನಿ ಶುಕ್ಲಾ, ಇಜಾದ್, ಅಮೃತಾ, ವಿಜಯಲಕ್ಷ್ಮಿ, ರಮೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT