ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೂಪವಾಗಿದ್ದ ಮುಖಕ್ಕೆ ಮೊದಲಿನ ರೂಪ

ಯುನೈಟೆಡ್ ಆಸ್ಪತ್ರೆಯ ವೈದ್ಯರಿಂದ ಸತತ ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ
Last Updated 18 ಮೇ 2022, 12:47 IST
ಅಕ್ಷರ ಗಾತ್ರ

ಕಲಬುರಗಿ: ಹಲ್ಲೆಯಿಂದಾಗಿ ಮುಖ, ಮೂಗು, ಕಣ್ಣು, ಕಿವಿಯ ಭಾಗ ಜಜ್ಜಿದಂತಾಗಿ ವಿಕಾರಗೊಂಡಿದ್ದ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ಗಂಗಾಧರ (33) ಎಂಬ ಯುವಕನನ್ನು ಇಲ್ಲಿನ ಯುನೈಟೆಡ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಅಪಾಯದಿಂದ ಪಾರು ಮಾಡಿದ್ದಾರೆ. ಮುಖವೂ ಮೊದಲಿನ ಸ್ವರೂ‍ಪವನ್ನು ಪಡೆದುಕೊಂಡಿದೆ.

ಆಸ್ಪತ್ರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಆಸ್ಪತ್ರೆಯ ನಿರ್ದೇಶಕಿ ಡಾ. ವೀಣಾ ಸಿದ್ದಾರೆಡ್ಡಿ, ‘ಏಪ್ರಿಲ್ 11ರಂದು ಆಸ್ಪತ್ರೆಗೆ ರೋಗಿಯನ್ನು ಕರೆತಂದಾಗಿ ಮುಖದ ಭಾಗ ತೀವ್ರವಾಗಿ ಹಾನಿಗೊಂಡಿತ್ತು. ಅದಾಗಲೇ ದೇಹದಿಂದ ಎರಡು ಲೀಟರ್‌ನಷ್ಟು ರಕ್ತ ಸೋರಿಕೆಯಾಗಿತ್ತು. ಬಾಯಿಯ ಮೇಲ್ಭಾಗ ಹಾಗೂ ಕಣ್ಣಿನ ಕೆಳಭಾಗ ಪೂರ್ತಿ ಹಾನಿಗೊಂಡಿತ್ತು. ಕಣ್ಣಿನ ಬಲಭಾಗಕ್ಕೆ ಭಾರಿ ಪೆಟ್ಟಾಗಿತ್ತು. ಅಂತಹ ಸಂದರ್ಭದಲ್ಲಿ ತಕ್ಷಣ ಐಸಿಯುಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಯಿತು. ಅರಿವಳಿಕೆ ತಜ್ಞ ಡಾ. ಮಂಜುನಾಥ ರೆಡ್ಡಿ, ಇಎನ್‌ಟಿ ತಜ್ಞ ಡಾ. ಕೇದಾರನಾಥ ರಟಕಲ್, ಒಎಂಎಫ್‌ ಸರ್ಜನ್ ಡಾ. ಉಡುಪಿಕೃಷ್ಣ ಜೋಶಿ, ಪ್ಲಾಸ್ಟಿಕ್ ಸರ್ಜನ್ ಡಾ. ಪವನ್ ಪಾಟೀಲ, ಒಎಂಎಫ್‌ ಸರ್ಜನ್ ಡಾ. ಆಯೇಷಾ ಎಸ್., ಡಾ. ಸುದರ್ಶನ ಲಾಖೆ, ಡಾ. ಲಿಯಾಖತ್ ಅಲಿ, ಡಾ. ಶ್ರೀಕಾಂತ ರಾಠೋಡ ಅವರನ್ನೊಳಗೊಂಡ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿತು’ ಎಂದರು.

‘ಚಿಕಿತ್ಸೆ ಆರಂಭಕ್ಕೂ ಮುನ್ನ ಗಂಗಾಧರ ಮುಖಕ್ಕೆ ಆಗಿರುವ ಹಾನಿಯ ಬಗ್ಗೆ ಹಾಗೂ ನೀಡಬೇಕಾದ ಚಿಕಿತ್ಸೆಯ ಬಗ್ಗೆ ವಿವರ ನೀಡಿದೆವು. ಶಸ್ತ್ರಚಿಕಿತ್ಸೆಗೆ ಅವರು ಒಪ್ಪಿಗೆ ನೀಡಿದ ಬಳಿಕ ವೈದ್ಯರ ತಂಡವು ಮುಖದ ಒಳಭಾಗದಲ್ಲಿ ಟೈಟಾನಿಯಂ ಪ್ಲೇಟ್‌ಗಳನ್ನು ಅಳವಡಿಸಿತು’ ಎಂದು ಹೇಳಿದರು.

ಹಿರಿಯ ವೈದ್ಯ ಡಾ. ಉಡುಪಿಕೃಷ್ಣ ಜೋಶಿ ಮಾತನಾಡಿ, ‘ಸಾವಿನ ದವಡೆಗೆ ಸಿಲುಕಿದ್ದ ವ್ಯಕ್ತಿಯನ್ನು ಕುಟುಂಬದವರ ಸಹಕಾರ ಪಡೆದುಕೊಂಡು ಸಕಾಲಿಕ ಚಿಕಿತ್ಸೆಯ ಮೂಲಕ ಮೊದಲಿನಂತೆ ಮಾಡಲು ಸಾಧ್ಯವಾಗಿದೆ. ಕಲ್ಯಾಣ ಕರ್ನಾಟಕದ ಯಾವ ಆಸ್ಪತ್ರೆಗಳಲ್ಲಿಯೂ ಇಂತಹ ಭಾರಿ ಸವಾಲಿನ ಶಸ್ತ್ರಚಿಕಿತ್ಸೆ ನಡೆದಿಲ್ಲ. ಈ ಶಸ್ತ್ರಚಿಕಿತ್ಸೆಯ ಬಗ್ಗೆ ಅಂತರರಾಷ್ಟ್ರೀಯ ನಿಯತಕಾಲಿಕೆಗಳಿಗೆ ಲೇಖನ ಕಳಿಸಿಕೊಡಲಿದ್ದೇವೆ. ಸುಮಾರು 32 ದಿನಗಳವರೆಗೆ ರೋಗಿ ಆಸ್ಪತ್ರೆಯಲ್ಲಿದ್ದರು. ಅದರಲ್ಲಿ ಹಲವು ದಿನ ತೀವ್ರ ನಿಗಾ ಘಟಕದಲ್ಲಿ ಕಳೆದಿದ್ದಾರೆ. ಶಸ್ತ್ರಚಿಕಿತ್ಸೆಗೆ ₹ 4 ಲಕ್ಷ ವೆಚ್ಚವಾಗಿದೆ’ ಎಂದರು.

ಮೂಗು, ಬಲಭಾಗದ ಕಣ್ಣು, ಕಿವಿ, ಎಲುಬುಗಳಿಗೆ ತೀವ್ರ ಹಾನಿಯಾಗಿ ಬೇರೆ ಕಡೆ ಸರಿದಿದ್ದವು. ಅವುಗಳನ್ನು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಸ್ವಸ್ಥಾನಕ್ಕೆ ತರಲಾಯಿತು. ಅತ್ಯಾಧುನಿಕ ಐಸಿಯು, ತಜ್ಞ ವೈದ್ಯರ ತಂಡದ ಶ್ರಮದಿಂದ ರೋಗಿ ಅಪಾಯದಿಂದ ಪಾರಾದರು
ಡಾ. ವೀಣಾ ಸಿದ್ದಾರೆಡ್ಡಿ
ನಿರ್ದೇಶಕಿ, ಯುನೈಟೆಡ್ ಆಸ್ಪತ್ರೆ

ರಾತ್ರಿ ವೇಳೆ ಕರಜಗಿಯಲ್ಲಿ ಹಲ್ಲೆ ನಡೆದಿತ್ತು, ಬೆಳಿಗ್ಗೆ ಯುನೈಟೆಡ್ ಆಸ್ಪತ್ರೆಗೆ ತಂದ ಬಳಿಕ ತಕ್ಷಣ ಐಸಿಯುಗೆ ದಾಖಲಿಸಿ ಚಿಕಿತ್ಸೆ ಪ್ರಾರಂಭಿಸಿದರು. ಮತ್ತೆ ಮೊದಲಿನಂತಾಗುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ
ಅಂಬಣ್ಣ ನರಿಬೋಳಿ, ರೋಗಿಯ ಸಂಬಂಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT