ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಬೇಸಿಗೆಯಲ್ಲೂ ಬತ್ತದ 'ಪಾರ್ವತಿ ಕೆರೆ'

Last Updated 12 ಮೇ 2020, 5:39 IST
ಅಕ್ಷರ ಗಾತ್ರ

ಯಡ್ರಾಮಿ: ತಾಲೂಕಿನ ಸುಂಬಡ ಗ್ರಾಮದಲ್ಲಿರುವ ಪಾರ್ವತಿ ಕೆರೆ ಎಂತಾ ಬೇಸಿಗೆಯಲ್ಲಿಯೂ ಬತ್ತಿದ ಉದಾಹರಣೆ ಇಲ್ಲ. ಸುಮಾರು 34 ಎಕರೆ ಪ್ರದೇಶದಲ್ಲಿ ನೀರು ಸಂಗ್ರವಾಗಿದೆ. ಸುರಪುರ ದೊರೆಗಳ ಆಳ್ವಿಕೆಯ ಕಾಲದಲ್ಲಿ ಈ ಗ್ರಾಮಕ್ಕೆ ಎರಡು ಕೆರೆಗಳು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ತುಂಬಾ ಹಸಿರಿನ ನಡುವೆ ಕಂಗೊಳಿಸುವ ಈ ಕೆರೆ ಪಕ್ಷಿಗಳಿಗೆ ಆಸರೆ ತಾಣವಾಗಿ ಬದಲಾಗಿದೆ. ಪಕ್ಷಿಗಳ ಕಲರವ ಕೆರೆಯ ಅಂದವನ್ನು ಹೆಚ್ಚಿಸಿದೆ. ಅಲ್ಲದೆ ಈ ಕೆರೆಯಿಂದ ಗ್ರಾಮಕ್ಕೆ ಪೈಪ್‍ಲೈನ್ ಮಾಡಿದರೆ ಈ ಗ್ರಾಮಕ್ಕೆ ನೀರಿನ ಸಮಸ್ಯೆಯೂ ಇರುವುದಿಲ್ಲ. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ಕೆರೆಯ ನೀರು ಉಪಯೋಗಕ್ಕೆ ಬರುತ್ತಿಲ್ಲ. ಕೆರೆಯ ಸುತ್ತಮುತ್ತಲಿರುವ ಬೆರಳಣಿಕೆಯಷ್ಟು ರೈತರು ಕೆರೆಯಿಂದ ಪೈಪ್‍ಲೈನ್ ಮಾಡಿಕೊಂಡು ನೀರಾವರಿ ಮಾಡಿಕೊಂಡಿದ್ದಾರೆ. ಸುಂಬಡ ಗ್ರಾಮದಿಂದ ವಡಗೇರಾ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಕೆರೆ ಇದೆ. ಗ್ರಾಮಕ್ಕೆ ತೀವ್ರ ನೀರಿನ ಕೊರತೆ ಇರುವ ಕಾರಣದಿಂದ ಈ ಕೆರೆ ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ.

ಕೆರೆಯಲ್ಲಿರುವ ಮಣ್ಣನ್ನು ಹೂಳೆತ್ತಿಸಿದರೆ ಇನ್ನು ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಈ ಕೆರೆಯ ಬಳಿ ಕಾಲುವೆ ನೀರು ಸಹ ಹಾದು ಹೋಗುತ್ತದೆ. ಈ ಕೆರೆಗೆ ಕೆಬಿಜೆಎನ್‌ಎಲ್ ಕಾಲುವೆಯ ನೀರು ತುಂಬಿಸಿದರೆ ಇದು ಬೇಸಿಗೆಯಲ್ಲಿಯೂ ಸಹ ಗ್ರಾಮಕ್ಕೆ ಶಾಶ್ವತ ನೀರಾಗುತ್ತದೆ.

ಗ್ರಾಮದಿಂದ ಕೆರೆಗೆ ಹೋಗಲು ಉತ್ತಮವಾದ ರಸ್ತೆ ಇದೆ. ಅತೀ ಹೆಚ್ಚಿನ ನೀರಿನ ಸಂಗ್ರಹ ಇರುವ ಕಾರಣಕ್ಕೆ ಈ ಕೆರೆಯ ಪಕ್ಕದಲ್ಲಿ ಮೂರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಉತ್ತಮ ಜಲಮೂಲ ಇರುವ ಈ ಕೆರೆ ಬೇಸಿಗೆಯ ಸಮಯದಲ್ಲಿ ಮರಳು ಗಾಡಿನ ಓಯಸಿಸ್ ಎನ್ನಬಹುದು. ಗ್ರಾಮದ ಕೃಷಿ ಚಟುವಟಿಕೆಗಳಿಗೆ ತುಂಬಾ ಉಪಯುಕ್ತವಾಗಿದ್ದು, ತೋಟಗಾರಿಕೆಯ ಬೆಳೆಗಳನ್ನು ಈ ಕೆರೆ ಸುತ್ತಮುತ್ತ ಬೆಳೆಯಲಾಗುತ್ತದೆ.

ಕೆಲವು ರೈತರು ಈ ಕೆರೆಯಿಂದ 2-3 ಕಿಮೀ ದೂರದ ತಮ್ಮ ಹೊಲಗಳಿಗೆ ಪೈಪ್ ಲೈನ್ ಕಾಮಗಾರಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ರೈತರು ಕೆರೆ ಸುತ್ತಮುತ್ತ ಭತ್ತ, ಹತ್ತಿ, ಕಬ್ಬು ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸಬಲರಾಗಿದ್ದಾರೆ. ಇಂತಹ ಕೆರೆ ಇನ್ನಷ್ಟು ಅಭಿವೃದ್ಧಿಪಡಿಸಿದರೆ ಜಲಮೂಲ ಸಂರಕ್ಷಣೆ ಮಾಡಿದಂತಾಗುತ್ತದೆ. ಈ ಕೆರೆಯಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟವು ವೃದ್ಧಿಯಾಗಿದೆ.

ಮಳೆರಾಯನ ಕೃಪೆಗೆ ಈ ಕೆರೆ ತುಂಬಿ ಪಕ್ಷಿಗಳ ಆಗಮನವೂ ಆಗಿದೆ. ಕೆರೆಯ ಪ್ರದೇಶದಲ್ಲೀಗ ಬಾನಾಡಿಗಳ ಚಿಲಿಪಿಲಿ ಕಣ್ಣುಗಳಿಗೆ ಇಂಪು, ಕರೆಯಂಗಳದಲ್ಲಿ ಹಿಂಡು ಹಿಂಡಾಗಿ ಪಕ್ಷಿಗಳ ಜಮಾಯಿಸುತ್ತಿರುವುದು ಕಂಡು ಬರುತ್ತಿದೆ. ಪಕ್ಷಿ ಪ್ರಿಯರು, ಹಕ್ಕಿಗಳ ಮೋಹಕ ಸೊಬಗನ್ನು ಸವಿಯಬಹುದು. ಕೆರೆ ಸುತ್ತಮುತ್ತಲಿನ ತೋಟ ಪಟ್ಟಿಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಸರಕಾರ ಉದ್ಯೋಗ ಖಾತರಿ ಕೂಲಿಗಾಗಿ ಕಾಳು ಸೇರಿದಂತೆ ಅನೇಕ ಯೋಜನೆಗಳ ಮೂಲಕ ಇಂತಹ ಕೆರೆಯನ್ನು ಪುನಶ್ಚೇತನಗೊಳಸಬೇಕು ಅಂತಾರೆ ಈ ಭಾಗದ ಜನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT