ಸೋಮವಾರ, ಸೆಪ್ಟೆಂಬರ್ 20, 2021
23 °C
ರಾಜ್ಯ ಖಾಸಗಿ ಹಾಗೂ ಟ್ಯಾಕ್ಸಿ ವಾಹನ ಚಾಲಕರ ಸಂಘದ ಸದಸ್ಯರ ಪ್ರತಿಭಟನೆ

ಕಲಬುರ್ಗಿ: ಟ್ಯಾಕ್ಸಿ ಸಾಲದ ಬಡ್ಡಿ ಮನ್ನಾಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೋವಿಡ್ ಇರುವುದರಿಂದ ಟ್ಯಾಕ್ಸಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದನ್ನೇ ನಂಬಿಕೊಂಡಿರುವ ವಾಹನ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ವಾಹನಗಳ ಮೇಲಿನ ಬ್ಯಾಂಕ್ ಸಾಲದ ಬಡ್ಡಿಯನ್ನು ಆರು ತಿಂಗಳು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಹಾಗೂ ಟ್ಯಾಕ್ಸಿ ವಾಹನ ಚಾಲಕರ ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಬಡ್ಡಿ ಮನ್ನಾ ಮಾಡುವುದರ ಜೊತೆಗೆ ಸಾಲದ ಕಂತನ್ನು ಪಾವತಿಸಲು ಯಾವುದೇ ಷರತ್ತುಗಳಿಲ್ಲದೇ ಆರು ತಿಂಗಳಿಗೆ ವಿಸ್ತರಿಸಬೇಕು. ವಾಹನಗಳ ಸಾರಿಗೆ ತೆರಿಗೆ ಶುಲ್ಕವನ್ನು ಆರು ತಿಂಗಳ ಅವಧಿಗೆ ವಿಸ್ತರಿಸಬೇಕು. ಹಳದಿ ಬೋರ್ಡ್‌ (ಪ್ಯಾಸೆಂಜರ್ ವಾಹನ)ಗಳ ವಿಮೆ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಬೇಕು. ಆಯಾ ಜಿಲ್ಲೆಯಲ್ಲಿ ನೋಂದಣಿ ಹೊಂದಿದ ಟ್ಯಾಕ್ಸಿಗಳಿಂದ ಆ ಜಿಲ್ಲೆಯಲ್ಲಿರುವ ಟೋಲ್ ಶುಲ್ಕವನ್ನು ಮುಕ್ತಗೊಳಿಸಬೇಕು. ಬೇರೆ ಜಿಲ್ಲೆ ಪ್ರವೇಶಿಸಿದಾಗ ಟೋಲ್ ಶುಲ್ಕದ ಒಟ್ಟು ದರ ಶೇ 50ರಷ್ಟು ಮಾತ್ರ ವಿಧಿಸಬೇಕು ಎಂದು ಒತ್ತಾಯಿಸಿದರು.

ಕಲಬುರ್ಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಚಾಲಕರ ಭವನವನ್ನು ನಿರ್ಮಿಸಿಕೊಡಬೇಕು. ಜಿಲ್ಲೆಯ ಚಾಲಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಬಡಾವಣೆ ನಿರ್ಮಿಸಿಕೊಡಬೇಕು. ಟ್ಯಾಕ್ಸಿ ನಿಲುಗಡೆ ಪ್ರದೇಶದಲ್ಲಿ ಚಾಲಕರಿಗೆ ಶುದ್ಧ ಕುಡಿಯುವ ನೀರು, ವಿಶ್ರಾಂತಿಗೆ ಚಿಕ್ಕ ಕೊಠಡಿಯನ್ನು ಕಟ್ಟಿಸಿಕೊಡಬೇಕು. ಕಾರ್ಮಿಕ ಇಲಾಖೆಯಡಿ ಬರುವ ಕಾರ್ಮಿಕ ಮಂಡಳಿಯಲ್ಲಿ ಎಲ್ಲ ವರ್ಗದ ಚಾಲಕರನ್ನು ನೋಂದಣಿ ಮಾಡಿಕೊಳ್ಳಬೇಕು. ರಾಜ್ಯದ ಪ್ರತಿಯೊಬ್ಬ ಚಾಲಕನಿಗೆ ಜೀವವಿಮೆ ಪಾಲಿಸಿಯನ್ನು ಮಾಡಿಸಿ ಸರ್ಕಾರವೇ ಕಂತನ್ನು ಭರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ರುಕ್ಮಣ್ಣ ರೆಡ್ಡಿ, ಉಪಾಧ್ಯಕ್ಷ ಭೀಮರಾಯ ದೊರೆ, ಕಾರ್ಯದರ್ಶಿ ವಿಠಲ್ ತಾವಡೆ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಖಜಾಂಚಿ ಅನಿಲಕುಮಾರ ದಿಕ್ಸಂಗಿಕರ, ಸಹ ಕಾರ್ಯದರ್ಶಿ ಸುಶೀಲ ಸರಜೋಳಗಿ, ಮಲ್ಲನಗೌಡ, ಮೌನೇಶ ಕೊಪ್ಪಳ, ರಾಜು ಕೊರಳ್ಳಿ, ಮೆಹಬೂಬ್, ಪ್ರದೀಪ್, ಜಾಫರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು