ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡದಾಳ: ಭರವಸೆ ನೀಡಿ ಹೋದವರು ಬರಲೇ ಇಲ್ಲ

ಶಿವಾನಂದ ಹಸರಗುಂಡಗಿ
Published 6 ಮಾರ್ಚ್ 2024, 5:10 IST
Last Updated 6 ಮಾರ್ಚ್ 2024, 5:10 IST
ಅಕ್ಷರ ಗಾತ್ರ

ಅಫಜಲಪುರ: ರಸ್ತೆಗಳ ನಿರ್ಮಾಣ, ಸುಧಾರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಬಡದಾಳ ನಾಗರಿಕ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ 10ನೇ ಕಾಲಿಟ್ಟಿದೆ.

ಧರಣಿ ಸ್ಥಳಕ್ಕೆ ಬಂದು ‘ಸೋಮವಾರ ಕಾಮಗಾರಿ ಆಂಭಿಸುತ್ತೇವೆ’ ಎಂದು ಹೇಳಿದ್ದ ಲೋಕಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಿಕಾಂತ ಬಿರಾದಾರ, ಜಿ.ಪಂ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಾಬುರಾವ್ ಜೋತಿ ಮತ್ತೆ ಇತ್ತ ಕಡೆ ತಲೆ ಹಾಕಿಲ್ಲ.

ಅನೇಕ ವರ್ಷಗಳಿಂದ ಬಡದಾಳ ಗ್ರಾಮಕ್ಕೆ ಸಂಪರ್ಕ ರಸ್ತೆಗಳ ಸಮಸ್ಯೆ ಇದೆ. ಗ್ರಾಮದಿಂದ ರೇವೂರ(ಬಿ) ಜಿಲ್ಲಾ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ, ಬಳೂರ್ಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಮುಖ್ಯ ರಸ್ತೆ, ಚಿಂಚೋಳಿ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ, ಅರ್ಜುಣಗಿ ಅಂತರಾಜ್ಯ ಸಂಪರ್ಕ ಮುಖ್ಯ ರಸ್ತೆಗಳು ಹಾಳಾಗಿವೆ. 

ಸುಸ್ಥಿಯಲ್ಲಿ ಇರದ ರಸ್ತೆಗಳಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ಮಹಿಳೆಯೊಬ್ಬರು ದ್ವಿಚಕ್ರ ವಾಹನದಿಂದ ಜಾರಿ ಬಿದ್ದು ದವಡೆ ಒಡೆದುಕೊಂಡಿದ್ದಾರೆ. ವಾಹನಗಳು ರಿಪೇರಿಗೆ ಬರುತ್ತಿವೆ.

‘ರಸ್ತೆಗಳ ನಿರ್ಮಾಣಕ್ಕೆ ಸಂಬಂಧಪಟ್ಟವರಿಗೂ ಎಲ್ಲರಿಗೂ ಮನವಿ ಮಾಡಿ, ದೂರು ಕೊಟ್ಟು ಸಾಕಾಗಿದೆ. ಆಶ್ವಾಸನೆ ಕೇಳಿ ಸಾಕಾಗಿ ಕೊನೆಗೆ ಧರಣಿಗೆ ಮುಂದಾಗಿದ್ದೇವೆ’ ಎಂದು ನಾಗರಿಕ ಹೋರಾಟ ಸಮಿತಿಯವರು ಹೇಳುತ್ತಾರೆ.

‘ಗ್ರಾಮದ ಶಾಲಾ ಕಟ್ಟಡಗಳು, ಗ್ರಾ.ಪಂ ಕಚೇರಿ ಶೀಥಿಲಾವಸ್ಥೆಯಲ್ಲಿವೆ. ಮೂಲಸೌಕರ್ಯಗಳಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾ.ಪಂ ಕೇಂದ್ರ ಸ್ಥಾನವಾದ ಬಡದಾಳಕ್ಕೆ ಸರ್ಕಾರ ವಿಶೇಷ ಅನುದಾನ ನೀಡಿ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ನಾಗರಿಕ ಹೋರಾಟ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ.

‘ಬಡದಾಳದಿಂದ ಬಳೂರ್ಗಿ ರಾಷ್ಟ್ರೀಯ ಹೆದ್ದಾರಿ ವರೆಗಿನ ರಸ್ತೆ, ಬಡದಾಳ ರೇವೂರ(ಬಿ) ಜಿಲ್ಲಾ ಮುಖ್ಯ ರಸ್ತೆ ವರೆಗಿನ ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ₹7.40 ಕೋಟಿ ಇಡಲಾಗಿದ್ದು ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಅವರು ಯಾವಾಗ ಕೆಲಸ ಆರಂಭಿಸುತ್ತಾರೆ ಎನ್ನುವುದನ್ನು ಅವರನ್ನೇ ಕೇಳಬೇಕು‘ ಎಂದು ಹೋರಾಟ ಸಮಿತಿಯವರ ಮಾತು.

ಬಡದಾಳ ಗ್ರಾಮದ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎಂ.ವೈ.ಪಾಟೀಲ ಅನುದಾನ ನೀಡಿದ್ದಾರೆ. ಕೆಲಸ ಶೀಘ್ರ ಆರಂಭವಾಗಲಿದೆ
ಸಿದ್ದಾರ್ಥ್ ಬಸರಿಗಿಡದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಗ್ರಾಮಸ್ಥರು ಸಂಘಟಿತರಾಗಿ ಹೋರಾಟ ಮಾಡಬೇಕು. ನಾಗರಿಕರ ಹೋರಾಟ ಸಮಿತಿಯ ಧರಣಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು.
ಶ್ರೀಮಂತ ಬಿರಾದಾರ, ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT