ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ | ಆದೇಶವಾದರೂ ಮುಜರಾಯಿಗೆ ಸೇರದ ದೇಗುಲ!

Published 23 ನವೆಂಬರ್ 2023, 5:09 IST
Last Updated 23 ನವೆಂಬರ್ 2023, 5:09 IST
ಅಕ್ಷರ ಗಾತ್ರ

ಚಿತ್ತಾಪುರ: ರಾಜ್ಯ ಸರ್ಕಾರವು 2012ರ ಸೆ.29 ರಂದು ತಾಲ್ಲೂಕಿನ ದಂಡಗುಂಡ ಬಸವೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ಅಧಿಕೃತವಾಗಿ ದೇವಾಲಯವನ್ನು ಮುಜರಾಯಿ ಇಲಾಖೆ ಅಧೀನಕ್ಕೆ ತೆಗೆದುಕೊಳ್ಳಲು ನಿರ್ಲಕ್ಷಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕ್ರಮ ಕೈಗೊಳ್ಳುವಂತೆ ಸೂಚನೆ

‘ದಂಡಗುಂಡ ಗ್ರಾಮದ ಬಸವೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಿದರೂ ಇಲಾಖೆಗೆ ತೆಗೆದುಕೊಂಡಿಲ್ಲ’ ಎಂದು ಸಂಗನಬಸವ ಶಿವಾಚಾರ್ಯರು 2022ರ ಮಾ.3 ರಂದು ಜಿಲ್ಲಾಧಿಕಾರಿಗೆ ದೂರುಪತ್ರ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯು ಮಾ.29 ರಂದು ತಹಶೀಲ್ದಾರ್ ಅವರಿಗೆ ಪತ್ರದ ಮೂಲಕ ಸೂಚಿಸಿರುವುದು ಅಧಿಕೃತ ದಾಖಲೆಗಳಿಂದ ತಿಳಿದು ಬಂದಿದೆ.

ದೇವಸ್ಥಾನ ಸರ್ಕಾರದ ವಶಕ್ಕೆ ಪಡೆಯಲು ಮನವಿ:‘ ಜಿಲ್ಲಾಧಿಕಾರಿ ಆದೇಶದ ಪ್ರಕಾರ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದುಕೊಂಡು ಖಾಸಗಿ ಟ್ರಸ್ಟ್ ರದ್ದುಪಡಿಸಬೇಕು’ ಎಂದು ಗ್ರಾಮದ ವಿದ್ಯಾನಂದ ಬಸವರಾಜಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಒಂಬತ್ತು ಜನ ಮುಖಂಡರು ತಹಶೀಲ್ದಾರ್ ಅವರಿಗೆ 2022ರ ಏ.12 ರಂದು ಮನವಿಪತ್ರ ಸಲ್ಲಿಸಿದ್ದಾರೆ.

ಬಸವೇಶ್ವರ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ಅಧಿಕಾರ ನಮಗಿಲ್ಲ. ಎಸಿ ಅಥವಾ ಡಿಸಿ ಕ್ರಮ ಕೈಗೊಳ್ಳುತ್ತಾರೆ. ದೇವಸ್ಥಾನವನ್ನು ಮುಜರಾಯಿ ಇಲಾಖೆ ಅಧೀನಕ್ಕೆ ತೆಗೆದುಕೊಳ್ಳುವ ಕುರಿತು ಪರಿಶೀಲನೆ ನಡೆಸುತ್ತೇವೆ.
ಸೈಯದ್ ಷಾಷಾವಲಿ, ತಹಶೀಲ್ದಾರ್, ಚಿತ್ತಾಪುರ

ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲು ಪತ್ರ

ದಂಡಗುಂಡ ಬಸವೇಶ್ವರ ದೇವಸ್ಥಾನದಲ್ಲಿ 1985ರಲ್ಲಿ ಟ್ರಸ್ಟ್ ನೊಂದಣಿ ಮಾಡಿಕೊಂಡಿದ್ದು, ದೇವಸ್ಥಾನವನ್ನು ಟ್ರಸ್ಟ್ ನಿರ್ವಹಿಸಿಕೊಂಡು ಹೋಗುತ್ತಿದೆ. 2012ರಲ್ಲಿ ರಾಜ್ಯ ಸರ್ಕಾರ ರಾಜ್ಯಪತ್ರದ ಮೂಲಕ ಹೊರಡಿಸಿದ ಆದೇಶದಂತೆ ಬಸವೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿರುತ್ತದೆ. ಮುಜರಾಯಿ ಇಲಾಖೆಗೆ ತೆಗೆದುಕೊಳ್ಳುವ ಕುರಿತು 2022ರ ಸೆ.6ರಂದು ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಆಡಳಿತಾಧಿಕಾರಿ ನೇಮಕಕ್ಕೆ ಜಿಲ್ಲಾಧಿಕಾರಿ ಸೂಚನೆ

ದಂಡಗುಂಡ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997, ನಿಯಮಗಳು 2002 ಸೆಕ್ಷನ್ 3 ರನ್ವಯ ತಹಶೀಲ್ದಾರ್ ಅವರ ಪ್ರಸ್ತಾವನೆಯನ್ನು ಗಣನೆಗೆ ತೆಗೆದುಕೊಂಡು, ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ 2023ರ ಜು.18 ಮತ್ತು ಅ.3 ರಂದು ಜಿಲ್ಲಾಧಿಕಾರಿಯು ಎರಡು ಸಲ ಸೇಡಂ ಉಪ ವಿಭಾಗಾಧಿಕಾರಿಗೆ ಜರೂರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸೇಡಂ ಉಪ ವಿಭಾಗಾದಿಕಾರಿಯು 2023ರ ಸೆ.15ರಂದು ಚಿತ್ತಾಪುರ ತಹಶೀಲ್ದಾರ್ ಅವರಿಗೆ ಪತ್ರ ಬರೆದು, ಜಿಲ್ಲಾಧಿಕಾರಿ ಆದೇಶದಂತೆ ದಂಡಗುಂಡ ಬಸವೇಶ್ವರ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತಾಧಿಕಾರಿ ನೇಮಕಕ್ಕೆ ಜರೂರಾಗಿ ಕ್ರಮ ಕೈಗೊಳ್ಳಬೇಕು ಎಂದು ಸೇಡಂ ಉಪ ವಿಭಾಗಾಧಿಕಾರಿ ತಹಶೀಲ್ದಾರ್ ಅವರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.

ದೇವಸ್ಥಾನವು ಮುಜರಾಯಿ ಇಲಾಖೆಯ ನಿಯಮಗಳ ಪ್ರಕಾರ ಪ್ರವರ್ಗ 'ಬಿ' ಪಟ್ಟಿಯಲ್ಲಿದೆ. ಅದನ್ನು ತಕ್ಷಣ ಮುಜರಾಯಿ ಇಲಾಖೆ ಅಧೀನಕ್ಕೆ ತೆಗೆದುಕೊಳ್ಳದೆ ತಾಲ್ಲೂಕು ಮತ್ತು ಜಿಲ್ಲಾ ಆಡಳಿತವು ದೇವಸ್ಥಾನದ ಖಾಸಗಿ ಟ್ರಸ್ಟ್ ಪರಭಾರೆಯಲ್ಲಿಯೇ ಬಿಟ್ಟಿರುವುದು ಗ್ರಾಮಸ್ಥರು ನೀಡಿರುವ ದೂರು ಮತ್ತು ಅಧಿಕಾರಿಗಳು ನಡೆಸಿದ ಪತ್ರ ವ್ಯವಹಾರಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT