ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಕೂಸಿನ ಮನೆಯಲ್ಲಿ ಕೂಸು ಇಲ್ಲ, ಅನುದಾನವು ಇಲ್ಲ

Published 14 ಜನವರಿ 2024, 6:16 IST
Last Updated 14 ಜನವರಿ 2024, 6:16 IST
ಅಕ್ಷರ ಗಾತ್ರ

ಅಫಜಲಪುರ: ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗಾಗಿ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಕೂಸಿನ ಮನೆ ಎಂಬ ಹೆಸರಿನ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಸುಮಾರು 4000 ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರ ಸ್ಥಾಪನೆಗೆ ಗುರಿ ಹೊಂದಲಾಗಿದೆ. ಈಗಾಗಲೇ ತಾಲೂಕಿನಲ್ಲಿ ಶಿಶು ಪಾಲನೆ ಕೇಂದ್ರಗಳು ಕೆಲವು ಕಡೆ ಆರಂಭವಾಗಿವೆ. ಆದರೆ ಅವುಗಳಿಗೆ ಮೂಲಸೌಲಭ್ಯಗಳಿಲ್ಲ. ಅಲ್ಲಿ ಮಕ್ಕಳೂ ಇಲ್ಲ, ಅನುದಾನವೂ ಬಂದಿಲ್ಲ. ಕೇವಲ ಕೋಣೆ ಮಾತ್ರ ಗುರುತಿಸಿ, ಬಣ್ಣ ಹಚ್ಚಿ ನಾಮಫಲಕ ಹಾಕಲಾಗಿದೆ.

ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ 6 ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಸುರಕ್ಷತೆಗಾಗಿ ‘ಕೂಸಿನ ಮನೆ’ ಎಂಬ ಹೆಸರಿನಲ್ಲಿ ಗ್ರಾ.ಪಂ.ಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯಿಂದ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸುವ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಮಹಿಳೆಯರು, ಕೆಲಸ ಮಾಡಲು ಸೈಟ್‌ಗಳಿಗೆ ತೆರಳಿದರೆ 6 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ. ಇದರಿಂದ ಮಹಿಳೆಯರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇನ್ನೂ ಕೆಲವರು ಮಕ್ಕಳನ್ನು ಕರೆದುಕೊಂಡು ಸೈಟಿಗೆ ಹೋಗುತ್ತಿದ್ದರು. ಇಂತಹದ್ದಕ್ಕೆ ಬ್ರೇಕ್‌ ಹಾಕಲು, ಮಹಿಳೆಯರ ಉದ್ಯೋಗಕ್ಕೆ ಒತ್ತು ನೀಡಲು ಈ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲು ಇಲಾಖೆ ಮುಂದಾಗಿದೆ ಎಂದು ತಾ.ಪಂ ಇಒ ಬಾಬುರಾವ ಜ್ಯೋತಿ ಹೇಳುತ್ತಾರೆ.

ತಾಲೂಕಿನ ಗೌರ(ಬಿ) ಗ್ರಾ.ಪಂ ಶಿಶು ಪಾಲನೆ ಕೇಂದ್ರ ಆರಂಭಿಸಲಾಗಿದೆ. ಒಂದು ಕೋಣೆಗೆ ಬಣ್ಣ ಬಳೆದು ನಾಮಫಲಕ ಅಳವಡಿಸಲಾಗಿದೆ. ಆದರೆ ಕೋಣೆಗೆ ಬಾಗಿಲು ಇಲ್ಲ, ಮಕ್ಕಳು ಇಲ್ಲ.

ಈಚೆಗೆ ಜಿ.ಪಂ ಸಿಇಒ ತಾ.ಪಂ ಸಭಾಂಗಣದಲ್ಲಿ ಪಿಡಿಒಗಳ ಸಭೆಯಲ್ಲಿ ಎಲ್ಲ ಗ್ರಾ.ಪಂ ಶಿಶು ಪಾಲನಾ ಕೇಂದ್ರ ಆರಂಭಿಸಬೇಕು ಎಂದು ಹೇಳಿದ್ದಾರೆ. ಕೆಲವರು ಸಭೆಯಲ್ಲಿ ಆರಂಭ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಪಿಡಿಒಗಳು, ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸುವ ಪ್ರಯತ್ನ ಮಾಡುತ್ತಿಲ್ಲ. ಕೆಲವು ಕಡೆ ಕೋಣೆ ಸಮಸ್ಯೆಯಿದೆ. ಇನ್ನು ಕೆಲವು ಕಡೆ ಅನುದಾನವು ಇಲ್ಲ. ಮತ್ತು ಕೇಂದ್ರಕ್ಕೆ ಬಂದು ಮಕ್ಕಳು ವಾಸ ಮಾಡಬೇಕು. ಅವರಿಗಾಗಿ ಸೌಲಭ್ಯ ಹಾಗೂ ಆಹಾರ ಸಿದ್ಧಪಡಿಸಬೇಕು. ಜತೆಗೆ ನಿರ್ವಹಣೆಗಾಗಿ ಒಬ್ಬರನ್ನು ನೇಮಿಸಬೇಕು. ಆದರೆ ಇವುಗಳಿಗಾಗಿ ಅನುದಾನ ಇಲ್ಲ.

 ರಮೇಶ್ ಪಾಟೀಲ್ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು.
 ರಮೇಶ್ ಪಾಟೀಲ್ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು.
ಪಿಡಿಒಗಳು ಕಡ್ಡಾಯವಾಗಿ ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಆರಂಭಿಸಬೇಕು. ನರೇಗಾ ಕಾರ್ಮಿಕರ ಮಕ್ಕಳನ್ನು ಅಲ್ಲಿ ಪಾಲನೆ ಪೋಷಣೆ ಮಾಡಲಾಗುತ್ತದೆ. ಅದಕ್ಕಾಗಿ ಸರ್ಕಾರ ಅನುದಾನ ನೀಡಲಿದೆ
ರಮೇಶ ಪಾಟೀಲ ನರೇಗಾ ಯೋಜನೆ ಸಹಾಯಕ ನಿರ್ದೇಶಕ
‘ಸರ್ಕಾರ ಶೀಘ್ರ ಅನುದಾನ ನೀಡಲಿ’
ಕೃಷಿ ವಲಯದಲ್ಲಿ ಕೆಲಸ ಕಾರ್ಯಗಳು ಮುಗಿದಿವೆ. ಅದಕ್ಕಾಗಿ ಕೃಷಿ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಕೆಲಸ ನೀಡಲಾಗುವುದು. ಹೀಗಾಗಿ ಕೂಸಿನ ಮನೆಯನ್ನು ಆರಂಭಿಸಲು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗುವುದು. ಆದಷ್ಟು ಬೇಗನೆ ಸರ್ಕಾರ ಮನೆ ನಿರ್ವಹಣೆಗೆ ಕೂಸಿನ ಮನೆ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಬೇಕು. ಇದು ಸರ್ಕಾರದ ಉತ್ತಮ ಯೋಜನೆಯಾಗಿದ್ದು ಬಡ ಕಾರ್ಮಿಕ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಗೌರ(ಬಿ) ಗ್ರಾ.ಪಂ ಅಧ್ಯಕ್ಷೆ ಶಬನ್‌ ಬೇಗಮ್ ಶೇಕ್ ಹೇಳಿದರು. ‘ಕೂಸಿನ ಮನೆಗೆ ಅನುದಾನ ಇಲ್ಲ’ ಶಿಶು ಪಾಲನ ಕೇಂದ್ರ ನಡೆಸಲು ಕೋಣೆ ಗುರುತಿಸಿ ಬಣ್ಣ ಬಳೆದು ಸಿದ್ಧತೆ ಮಾಡಲಾಗಿದೆ. ಆದರೆ ಮಕ್ಕಳು ಇಲ್ಲ ಅನುದಾನವು ಇಲ್ಲ ಏನು ಮಾಡಬೇಕು. ಹಿಂದೆ ನೆರೆಹಾವಳಿ ಸಮಯದಲ್ಲಿ ಕೈಯಿಂದ ₹ 5 ಲಕ್ಷ ಖರ್ಚು ಮಾಡಿದ್ದೇವೆ. ಇನ್ನು ಸರ್ಕಾರ ನೀಡಿಲ್ಲ. ನಾವು ಮತ್ತೆ ಕೂಸಿನ ಮನೆಗೆ ಹಣ ಎಲ್ಲಿಂದ ತರುವುದು. ಅದಕ್ಕಾಗಿ ಕೂಸಿನ ಮನೆ ಆರಂಭಿಸಿಲ್ಲ ಎಂದು ಪಿಡಿಒ ಶಂಕರ ದ್ಯಾಮಣ್ಣವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT