ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಯುವಜನರ ಗೆದ್ದ ನವೋದ್ಯಮ ಸಾಧ್ಯತೆಗಳು

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಕಲಬುರ್ಗಿ ಥಿಂಕಥಾನ್– ಸ್ಟಾರ್ಟಪ್ ಎಕ್ಸ್‌ಪೊ ಮೇಳ’ಕ್ಕೆ ಚಾಲನೆ
Last Updated 17 ಸೆಪ್ಟೆಂಬರ್ 2021, 15:21 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ‘ಕಲಬುರ್ಗಿ ಥಿಂಕಥಾನ್– ಸ್ಟಾರ್ಟಪ್ ಎಕ್ಸ್‌ಪೊ ಮೇಳ’ ಯುವ ಸಮುದಾಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮೇಳದಲ್ಲಿ ವೈವಿಧ್ಯಮಯ ಉದ್ಯೋಗಾವಕಾಶ ಹಾಗೂ ಕೌಶಲಗಳ ಪ್ರದರ್ಶನ ನೀಡಿದನವ ಉದ್ಯಮಿಗಳು ಪ್ರೇಕ್ಷಕರ ಮನ ಗೆದ್ದರು.

ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಕಿರಿಯ ಹಾಗೂ ಹಿರಿಯ ಸಂಶೋಧಕರು, ಯುವ ಉದ್ಯಮಿಗಳು ಸೇರಿದಂತೆ ಹಲವರು ತಮ್ಮತಮ್ಮ ಕ್ರೇತ್ರಗಳಲ್ಲಿ ಸ್ಟಾರ್ಟ‍ಪ್‌ಗಳಿಂದ ಆದ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿಸಿದರು. ನವೋದ್ಯಮದ 29 ಮಳಿಗೆಗಳನ್ನು ತೆರೆಯಲಾಗಿದ್ದು, ಈ ಪ್ರದರ್ಶನ ಶನಿವಾರ ಕೂಡ ನಡೆಯಲಿದೆ.

ವೈಶಿಷ್ಟ್ಯ ಏನು?: ಬೆಲ್‌ಸ್ಪೈರ್‌ ವರ್ಚುವಲ್ ಆರ್ಟ್‌ ಲಿ. ಹಾಗೂ ಲಿನಸ್‌ ಕಾರ್ಟ್‌ ಸಲೂಷನ್ಸ್‌ ಪ್ರವೇಟ್‌ ಕಂಪನಿಗಳು ಸಿದ್ಧಪಡಿಸಿದ ಶೈಕ್ಷಣಿಕ ಸಲಕರಣೆಗಳು ಮಕ್ಕಳ ಗಮನ ಸೆಳೆಯುವಂತಿವೆ. ಎಲೆಕ್ಟ್ರಾನಿಕ್‌ ಬೋರ್ಡ್‌, ಎಲೆಕ್ಟ್ರಾನಿಕ್‌ ನೋಟ್‌, ಪರಿಸರ ಪ್ರಿಯ ವಸ್ತುಗಳಿಂದ ಪ್ರಾಯೋಗಿಕ ಕಲಿಕೆ ಸೇರಿದಂತೆ ಮಕ್ಕಳ ಮನೋವಿಕಾಸಕ್ಕೆ ಬೇಕಾದ ಹಲವು ಸಂಶೋಧನೆಗಳನ್ನು ಪ್ರದರ್ಶಿಸಲಾಗಿದೆ.

ವಿ.ಆರ್‌. ಥೀಮ್‌ ಪಾರ್ಕ್‌ನವರು ಆಯೋಜಿಸಿದ್ದ ವಿಡಿಯೊ ಮನರಂಜನಾ ಪ್ರದರ್ಶನ ವಿಶೇಷವಾಗಿದೆ. 7ಡಿ ಮಾದರಿಯ ಚೆಸ್ಮಾ ಧರಿಸಿಕೊಂಡು ಮುಂದಿನ ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ಬರುವ ದೃಶ್ಯಗಳನ್ನು ವೀಕ್ಷಿಸುತ್ತ ಹೋದರೆ ಹೊಸದೊಂದು ಲೋಕವನ್ನೇ ಕಂಡಷ್ಟು ನೈಜ ಅನುಭವ ಇದರಲ್ಲಿ ಆಗುತ್ತದೆ. ಮಳಿಗೆಯ ಒಂದು ಮೂಲೆಯಲ್ಲಿ ನಿಂತುಕೊಂಡೇ ದಟ್ಟಾರಣ್ಯದಲ್ಲಿ ಖುದ್ದು ಸುತ್ತಾಡಿದ ಅನುಭವ, 100 ಅಂತಸ್ತಿನ ಕಟ್ಟಡದಿಂದ ಜಿಗಿದಾಗ ಎದೆ ತಲ್ಲಣಸುವ ಅನುಭವ... ಹೀಗೆ ಒಂದಕ್ಕಿಂತ ಒಂದು ಮೋಜಿನಿಂದ ಕೂಡಿವೆ. ಕಲಬುರ್ಗಿಯಲ್ಲಿ ಈ ಪ್ರಯೋಗವನ್ನು ತಾವೇ ಮೊದಲು ಮಾಡುತ್ತಿರುವುದಾಗಿ ಮುಖ್ಯಸ್ಥ ಮನೋಹರ ಗೋಲ್ಡ್‌ಸ್ಮಿತ್‌ ವಿವರಿಸಿದರು.

ಮಾಧವ ಗೋ ಶಾಲೆಯ ಮಹೇಶ ಬೀದರಕರ್‌ ಅವರು ಪ್ರದರ್ಶಿಸಿದ ಗೋಮೂತ್ರ, ಗೋಮಯದಿಂದ ತಯಾರಿಸಿದ ವಸ್ತುಗಳು ವನಿತೆಯರಿಗೆ ಮೆಚ್ಚುಗೆಯಾದವು. 7ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಹಾಗೂ ಪಿಯು ವಿದ್ಯಾರ್ಥಿನಿ ಕಾವ್ಯ ತಾವೇ ಸಿದ್ಧಪಡಿಸಿದ ಚಾಕೊಲೇಟ್‌ಗಳನ್ನು ಮಾರಾಟ ಮಾಡಿ ಸೈ ಎಣಿಸಿಕೊಂಡರು. ಒಳಾಂಗಣ ವಿನ್ಯಾಸದ ಯಂತ್ರ, ಕ್ರೀಡೆಯಲ್ಲಿ ಸಹಕಾರಿಯಾಗಬಲ್ಲ ಮಷಿನ್‌, ಸೌರಶಕ್ತಿ ಮೇಲೆ ಓಡಬಲ್ಲ ಬೈಸೈಕಲ್‌... ಹೀಗೆ ಹಲವು ನವೀನ ಶೋಧನೆಗಳು ಗಮನ ಸೆಳೆದವು.

ಉದ್ಘಾಟನೆ: ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿದ್ದರು. ಸ್ಟಾರ್ಟಿಸ್ಟ್ ಸಂಸ್ಥೆ ಸಿಇಒ ಪುಷ್ಪಲತಾ ಎಂ.ಎಸ್., ಅಪ್‌ಸರ್ಜ್ ಗ್ಲೋಬಲ್‌ನ ಸಿಇಒ ವಿವೇಕ ವರ್ಮಾ, ಫ್ಲೆಕ್ಸಿಟ್ರಾನ್ ಸಂಸ್ಥಾಪಕ ಆರ್.ಎಸ್‌. ಹಿರೇಮಠ, ಡಾ.ಎಸ್‌.ಎಸ್. ಕಲಶಡಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT