ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಬೇಳೆ ಬೆಲೆ ₹150ಕ್ಕೆ ಏರಿಕೆ‌

ಗ್ರಾಹಕರಿಗೆ ತಟ್ಟಿದ ಬಿಸಿ; ಇನ್ನೂ ದರ ಹೆಚ್ಚುವ ಸಾಧ್ಯತೆ
Published 22 ಜೂನ್ 2023, 23:30 IST
Last Updated 22 ಜೂನ್ 2023, 23:30 IST
ಅಕ್ಷರ ಗಾತ್ರ

-ಓಂಕಾರ ಬಿರಾದಾರ

ಕಲಬುರಗಿ: ಮೇ ಮೊದಲ ವಾರದಲ್ಲಿ ಕ್ವಿಂಟಲ್‌ಗೆ ₹8,500 ಇದ್ದ ತೊಗರಿ ಬೆಲೆ, ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾದ ಪರಿಣಾಮ ಒಂದೂವರೆ ತಿಂಗಳಲ್ಲಿ ಕ್ವಿಂಟಲ್‌ಗೆ ₹1,800ರಷ್ಟು ಹೆಚ್ಚಾಗಿದೆ.

ಜೂನ್‌ 22ರಂದು ಕ್ವಿಂಟಲ್‌ ಮಾದರಿ ತೊಗರಿ ₹10,500ವರೆಗೂ ಮಾರಾಟವಾಗಿದೆ. ಈಗ ದಾಲ್‌ಮಿಲ್‌ಗಳಲ್ಲಿ ತಯಾರಾದ ಬೇಳೆ ಬೆಲೆ ಪ್ರತಿ ಕ್ವಿಂಟಲ್‌ಗೆ ₹14,000ವರೆಗೆ ಮಾರಾಟವಾಗುತ್ತಿದೆ. ಮೇ ತಿಂಗಳಲ್ಲಿ ತೊಗರಿ ಬೇಳೆ ಪ್ರತಿ ಕೆ.ಜಿಗೆ ₹115ರಿಂದ ₹125ರವರೆಗೆ ಇತ್ತು. ಈಗ ರಿಟೇಲ್ ಮಾರುಕಟ್ಟೆಯಲ್ಲಿ ಇದರ ಬೆಲೆಯು ₹150ಕ್ಕೆ ತಲುಪಿದೆ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ ವರ್ಷ 4.87 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಅತಿವೃಷ್ಟಿ ಮತ್ತು ಪ್ರವಾಹದಿಂದ 1.29 ಲಕ್ಷ ಹೆಕ್ಟೇರ್‌, ಕೊಳೆ ರೋಗದಿಂದ 69,900 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿತ್ತು.

‘ಜಿಲ್ಲೆಯಲ್ಲಿ ನೆಟೆರೋಗದಿಂದ ಉತ್ಪಾದನೆ ಕಡಿಮೆಯಾಗಿ ತೊಗರಿ ಆವಕ ಕಡಿಮೆಯಾಗುತ್ತಿದೆ. ಪ್ರತಿದಿನ 2,000 ಕ್ವಿಂಟಲ್‌ನಷ್ಟು ಮಾತ್ರ ತೊಗರಿ ಎಪಿಎಂಸಿಗೆ ಬರುತ್ತಿದೆ. ವರ್ತಕರು ತಮ್ಮ ಬಳಿ ದಾಸ್ತಾನು ಇರುವ ತೊಗರಿಯನ್ನೂ ಮಾರುಕಟ್ಟೆಗೆ ಬಿಡುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ’ ಎಂದು ಕಲಬುರಗಿ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 150 ದಾಲ್ ಮಿಲ್‌ಗಳಿವೆ. ಈ ಎಲ್ಲಾ ಗಿರಣಿಗಳನ್ನು ನಿರಂತರವಾಗಿ ನಡೆಸಲು ಪ್ರತಿದಿನ 10 ಸಾವಿರದಿಂದ 15 ಸಾವಿರ ಕ್ವಿಂಟಲ್ ತೊಗರಿ ಆವಕ ಆಗಬೇಕು. ಆದರೆ, ಪ್ರತಿದಿನ ಕೇವಲ 2 ಸಾವಿರದಿಂದ 3 ಸಾವಿರ ಕ್ವಿಂಟಲ್‌ಗಳಷ್ಟು ತೊಗರಿ ಮಾರುಕಟ್ಟೆಗೆ ಬರುತ್ತಿದೆ ಎಂದು ಕಲಬುರಗಿ ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಸಂತೋಷ ಲಂಗರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ತೊಗರಿ ದಾಸ್ತಾನು ಇಲ್ಲದಿರುವುದರಿಂದ ದಾಲ್‌ಮಿಲ್‌ಗಳಿಗೆ ಸರಬರಾಜು ಆಗುತ್ತಿಲ್ಲ. ಹೊಸ ಬೆಳೆ ಬರುವ ವೇಳೆಗೆ ತೊಗರಿ ಬೇಳೆ ಬೆಲೆ ₹200ರ ಗಡಿ ದಾಟಬಹುದು.
-ಶಿವಶರಣಪ್ಪ ನಿಗ್ಗುಡಗಿ, ಗುಲಬರ್ಗಾ ದಾಲ್‌ ಮಿಲ್‌ಗಳ ಮಾಲೀಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT