ಚಿಂಚೋಳಿ: ಇಲ್ಲಿನ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ವತಿಯಿಂದ ತಾಲ್ಲೂಕಿನ ಕಲಭಾವಿ ತಾಂಡಾದಲ್ಲಿ ಗುರುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಮುಖ್ಯ ಆಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಸಂತೋಷ ಪಾಟೀಲ, ಟಿಎಚ್‌ಒ ಮಹಮದ್ ಗಫಾರ್ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಸೋಮಸಿಂಗ್ ನೇತೃತ್ವದಲ್ಲಿ ಗ್ರಾಮದ ಸಾರ್ವಜನಿಕ ಕಟ್ಟೆಯ ಬಳಿ ಆರೋಗ್ಯ ತಪಾಸಣೆ ನಡೆಸಿದರು.
ಶಿಬಿರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 85 ಜನರಿಗೆ ತಪಾಸಣೆ ನಡೆಸಲಾಗಿದೆ. 58 ಜನರ ರಕ್ತದ ಮಾದರಿ ಸಂಗ್ರಹಿಸಲಾಯಿತು. ರಕ್ತದೊತ್ತಡ, ಸಕ್ಕರೆ ಕಾಯಿಲೆಯ ತಪಾಸಣೆ ನಡೆಸಲಾಗಿದೆ. ಗ್ರಾಮದ ಮಗು ಸಹಿತ ಮೂವರನ್ನು ಆಂಬುಲೆನ್ಸ್‌ನಲ್ಲಿ ಕಳುಹಿಸಿಕೊಟ್ಟು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಂಡಾಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಜನರಿಗೆ ಪರೀಕ್ಷಿಸಿ ಮಾತ್ರೆಗಳನ್ನು ನೀಡಿದ್ದಾರೆ. ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯಾ ಮತ್ತಿತರ ಪರೀಕ್ಷೆಗಾಗಿ ರಕ್ತದ ಮಾದರಿ ಪಡೆದುಕೊಂಡಿದ್ದಾರೆ ಎಂದು ತಾಂಡಾದ ಮುಖಂಡ ತಾರಾಸಿಂಗ್ ಜಾಧವ ತಿಳಿಸಿದರು.
ಕಲಭಾವಿ ತಾಂಡಾದಲ್ಲಿ ಜನರು ಅನಾರೋಗ್ಯದಿಂದ ಬಳಲುತ್ತಿರುವುದು ಮೈ, ಕೈನೋವು ಮತ್ತು ಜ್ವರದ ಹಿನ್ನೆಲೆಯಲ್ಲಿ ಪ್ರಯೋಗಾಲಯದ ವರದಿ ಬಂದ ಮೇಲೆ ನಿಖರವಾಗಿ ಹೇಳಬಹುದಾಗಿದೆ. ಮೇಲ್ನೋಟಕ್ಕೆ ಇದು ವೈರಲ್ ಜ್ವರ ಎಂಬ ಅನುಮಾನವಿದೆ. ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯಲ್ಲಿ ವೈರಲ್ ಜ್ವರದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು 10 ಹಾಸಿಗೆಗಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ’ ಡಾ.ಸಂತೋಷ ಪಾಟೀಲ ತಿಳಿಸಿದರು.
ತಪಾಸಣೆ ವೇಳೆ ಮುಜಾಸಿಮ್, ಪೂಜಾ ಮತ್ತು ಆರೋಗ್ಯ ನಿರೀಕ್ಷಕ ಶಿವರಾಯ ಹಾಗೂ ಪ್ರಯೋಗಾಲಯ ತಂತ್ರಜ್ಞ ಮಹಮದ್ ಗೌಸ್, ಅಂಗನವಾಡಿ ಕಾರ್ತಕರ್ತೆ ಪಾರ್ವತಿಬಾಯಿ ಭೀಮರಾವ್ ರಾಠೋಡ್ ಇತರರಿದ್ದರು.
ಕಲಭಾವಿ ತಾಂಡಾದಲ್ಲಿ ಜಲ ಮೂಲಗಳ ಸುತ್ತಲೂ ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆ ಕೈಗೊಳ್ಳಲು ನಿರ್ದೇಶನ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಲಾಗಿದೆ.
-ಡಾ.ಮಹಮದ್ ಗಫಾರ್ ಟಿಎಚ್‌ಒ ಚಿಂಚೋಳಿ
ತಾಂಡಾ ಜನ ಅನಾರೋಗ್ಯಕ್ಕೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ವೈದ್ಯರು ಶಿಬಿರ ನಡೆಸಿ ನೆರವಾಗಿದ್ದಾರೆ.
-ಶರಣು ಪಾಟೀಲ ಮೋತಕಪಳ್ಳಿ ವಕ್ತಾರ ಬ್ಲಾಕ್ ಕಾಂಗ್ರೆಸ್ ಚಿಂಚೋಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.