ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಮಾಹಿತಿ ನೀಡಿದರೆ ಮನೆಗೆ; ಮಾಧುಸ್ವಾಮಿ

ಪುರಸಭೆ ಅಧ್ಯಕ್ಷ ಮಹಮದ್ ಖಲಂದರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆ
Last Updated 19 ಜೂನ್ 2018, 8:45 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪುರಸಭೆ ಆಡಳಿತ ಅಧೋಗತಿಗೆ ಹೋಗಿದೆ. ಬೀದಿ ದೀಪಗಳ ಬಲ್ಬ್‌ ಸರಿಪಡಿಸಲು ಒಂದು ತಿಂಗಳಿಗೆ ₹ 15 ಲಕ್ಷ ತೋರಿಸುತ್ತೀರ. ಎರಡು ದಿನಗಳಿಗೊಮ್ಮೆ ಒಂದೇ ಅಂಗಡಿಯಲ್ಲಿ ಲಕ್ಷಾಂತರ ವ್ಯವಹಾರ ನಡೆದಿದೆ. ಸುಳ್ಳು ಮಾಹಿತಿ ನೀಡಿದರೆ ಮನೆಗೆ ಹೋಗುತ್ತೀರಿ ಎಚ್ಚರವಾಗಿರಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಪುರಸಭೆ ಅಧಿಕಾರಿಗಳ ಬೆವರಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಮಹಮದ್ ಖಲಂದರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆಯಲ್ಲಿ ಅವರವರ ಇಚ್ಛೆಯಂತೆ ಬಿಲ್‌ಗಳಾಗಿವೆ. ಹೀಗಾದರೆ ಪುರಸಭೆ ನಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಪುರಸಭೆಗೆ ಕಂಪ್ಯೂಟರ್ ಆಪರೇಟರ್ಸ್ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳ ಕಾರ್ಯನಿರ್ವಹಣೆಗೆ ಹಿಂದಿನ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಆ ಗುತ್ತಿಗೆದಾರ ಇದುವರೆಗೂ ಒಂದು ದಿನ ಕೂಡ ಪುರಸಭೆಗೆ ಬಂದಿಲ್ಲ ಕಂಪ್ಯೂಟರ್ ಆಪರೇಟರ್ ಗುತ್ತಿಗೆದಾರ ಸಿವಿಲ್ ಕಂಟ್ರಾಕ್ಟರ್ ಆ ವ್ಯಕ್ತಿಗೆ ಕಂಪ್ಯೂಟರ್ ಜ್ಞಾನ ಇಲ್ಲ ಎಂದು ಸದಸ್ಯ ಸಿ.ಪಿ.ಮಹೇಶ್ ಆರೋಪಿಸಿದರು.

ಎಂಜನಿಯರ್ ಯೋಗಾನಂದ ಬಾಬು ಮಾತನಾಡಿ, ಪುರಸಭೆಗೆ ಆದಾಯ ಕಡಿಮೆ ಇರುವುದರಿಂದ ಕಂಪ್ಯೂಟರ್ ಆಪರೇಟರ್ಸ್ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಹೊರಗುತ್ತಿಗೆ ಮೂಲಕ ಇಬ್ಬರಿಗೆ ಸೀಮಿತಿಗೊಳಿಸಲು ಚರ್ಚಿಸಲಾಗಿತ್ತು. ಹಾಗೂ ಅವರಿಗೆ ತಿಂಗಳಿಗೆ ಹದಿನೈದು ಸಾವಿರ ನೀಡಲಾಗುತ್ತಿದೆ. ನಮ್ಮಲ್ಲಿ ಈಗ ಐದು ಮಂದಿ ಆಪರೇಟರ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪುರಸಭೆಯಲ್ಲಿ ಐದು ಮಂದಿ ಕಂಪ್ಯೂಟರ್ ಆಪರೇಟರ್‌ಗಳು ಕೆಲಸ ನಿರ್ವಹಿಸುತ್ತಿದ್ದರೂ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಅಷ್ಟು ಪುರಸಭೆಯಲ್ಲಿ ಕೆಲಸವಿದೆಯೇ. ಇಬ್ಬರನ್ನು ಮಾತ್ರ ಕೆಲಸದಲ್ಲಿ ಇರಿಸಿಕೊಳ್ಳಿ ಮೂವರನ್ನು ಕೆಲಸದಿಂದ ತೆಗಿಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪುರಸಭೆ ಉಪಾಧ್ಯಕ್ಷೆ ಇಂದಿರಾ ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್, ಸದಸ್ಯರಾದ ಪ್ರೇಮಾ ದೇವರಾಜು, ರೇಣುಕಮ್ಮ, ರೂಪಾ ಶಿವಕುಮಾರ್, ಗೀತಾ ರಮೇಶ್, ನೇತ್ರಾವತಿ, ಧರಣಿ ಬಿ.ಲಕ್ಕಪ್ಪ, ಸಿ.ಕೆ.ಕೃಷ್ಣಮೂರ್ತಿ, ಸಿ.ಆರ್.ತಿಮ್ಮಪ್ಪ, ಎಂ.ಕೆ.ರವಿಚಂದ್ರ, ಮಲ್ಲೇಶಯ್ಯ, ನಾಮಿನಿ ಸದಸ್ಯರಾದ ಕೆ.ಜಿ.ಕೃಷ್ಣೇಗೌಡ, ಜಾವಿದ್‌ಪಾಷಾ, ಬಸವರಾಜು ಇದ್ದರು.

ಅನುಮೋದನೆಗೆ ತಂದಿದ್ದ 3 ವಿಷಯಗಳು ರದ್ದು

ಮುಖ್ಯಾಧಿಕಾರಿಗಳು ಬೇರೆ ಊರಿಗೆ ವಿವಿಧ ಸಭೆಗೆ ಸಂಚರಿಸಲು ವಾಹನವನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಚರ್ಚಿಸಲು ಸಭೆಗೆ ತಂದಿದ್ದ ವಿಷಯದ ಬಗ್ಗೆ ಮಾತನಾಡಿದ ಶಾಸಕರು, ಮುಖ್ಯಾಧಿಕಾರಿಗಳು ಪಟ್ಟಣದ ಕೆಲಸಕ್ಕಾಗಿ ಪುರಸಭೆ ವ್ಯಾಪ್ತಿಯಲ್ಲಿ ಸಂಚರಿಸಬೇಕು ಬೇರೆ ಊರಿಗೆ ತೆರಳಲು ವಾಹನ ಕಲ್ಪಿಸುವುದು ಬೇಡ ಎಂದು ಪ್ರಸ್ತಾವ ತಳ್ಳಿಹಾಕಿದರು. ಕಸ ವಿಲೇವಾರಿ ವಾಹನಗಳ ಡ್ರೈವರ್ ಮತ್ತು ಕ್ಲೀನರ್ ಟೆಂಡರ್ ಹಾಗೂ ಬೀದಿ ದೀಪ ನಿರ್ವಹಣೆ ಟೆಂಡರ್ ರದ್ದುಗೊಳಿಸಿ ಎಂದರು.

ಕುರುಬರಹಳ್ಳಿ ರಸ್ತೆಗೆ ವಾರದ ಸಂತೆ

ಈಗ ವಾರದ ಸಂತೆ ನಡೆಯುತ್ತಿರುವ ಜಾಗ ಸದಾ ಜನಸಂದಣೆಯಿಂದ ಕೂಡಿರುತ್ತದೆ. ತಾಲ್ಲೂಕು ಕ್ರೀಡಾಂಗಣ, ಪದವಿಪೂರ್ವ ಕಾಲೇಜು, ಪ್ರೌಢಶಾಲೆಗಳು, ಬಿಎಸ್ಎನ್ಎಲ್ ಕಚೇರಿ ಹಾಗೂ ತೀ.ನಂ.ಶ್ರೀ ಸಭಾಂಗಭದ ಪಕ್ಕದಲ್ಲಿ ಸಂತೆ ನಡೆಯುತ್ತಿದೆ. ಇದು ಶಾಲಾ-ಕಾಲೇಜು ವಲಯ ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆ. ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ. ಆದ್ದರಿಂದ ಕುರುಬರಹಳ್ಳಿಗೆ ತೆರಳುವ ರಸ್ತೆಯ ದೇವಾಂಗ ಜನಾಂಗದ ಸ್ಮಶಾನದ ಬಳಿ ಪುರಸಭೆಗೆ ಸೇರಿರುವ ಜಾಗವಿದ್ದು, ಅಲ್ಲಿ ಸಂತೆ ಮಾಡಬಹುದು ಎಂದು ಸದಸ್ಯ ಸಿ.ಡಿ.ಚಂದ್ರಶೇಖರ್ ಸಲಹೆ ನೀಡಿದರು. ಈ ಕುರಿತು ಸರ್ವೆ ಮಾಡಿ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್ ಅವರಿಗೆ ಶಾಸಕರು ಸೂಚಿಸಿದರು.

ಅರಸು ಸಮಾಧಿ ಸ್ಥಳ ಪಾರ್ಕ್ ಹಾಗೂ ಶಾಲೆಗೆ

ಪಟ್ಟಣದ ತೀ.ನಂ.ಶ್ರೀ ಗ್ರಂಥಾಲಯದ ಹಿಂಬದಿ ದೊಡ್ಡ ದೇವರಾಜ ಅರಸು ಅವರ ಸಮಾಧಿ ಇರುವ ಪುರಸಭೆ ಜಾಗದ 24 ಗುಂಟೆಯಲ್ಲಿ ಉದ್ಯಾನ ನಿರ್ಮಿಸಿ, ಅರಸು ಸಮಾಜಕ್ಕೆ ನಿರ್ವಹಣೆ ಜವಾಬ್ದಾರಿ ವಹಿಸಿ. ಉಳಿದ ಜಾಗವನ್ನು ಉರ್ದು ಶಾಲೆಯ ಆಟದ ಮೈದಾನಕ್ಕೆ ನೀಡಿ ಎಂದು ಶಾಸಕರು ಸಲಹೆ ನೀಡಿದರು. ಸದಸ್ಯರು ಒಪ್ಪಿಗೆ ಸೂಚಿಸಿದರು.

ತಲೆ ಮೇಲೆ ಕೈ ಹೊತ್ತು ಕುಳಿತ ಶಾಸಕ

ಪುರಸಭೆಯಲ್ಲಿ ಈ ರೀತಿಯ ಕೆಟ್ಟ ಆಡಳಿತ, ಅವ್ಯವಹಾರ ಮಹಾನಗರ ಪಾಲಿಕೆಯಲ್ಲೂ ನಡೆದಿರುವುದು ಅನುಮಾನ. ಸಣ್ಣ, ಸಣ್ಣ ಕೆಲಸಗಳಿಗೂ ಲಕ್ಷಾಂತರ ರೂಪಾಯಿ ವೆಚ್ಚ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಇದೆಲ್ಲ ನೋಡುತ್ತಿದ್ದರೆ ತಲೆ ಚಿಟ್ಟು ಹಿಡಿಯುತ್ತದೆ. ಸಾಕಪ್ಪ ಈ ಪುರಸಭೆ ಸಹವಾಸ ಎಂದು ಶಾಸಕರು ಕ್ಷಣಕಾಲ ತಲೆ ಮೇಲೆ ಕೈ ಹೊತ್ತು ಕುಳಿತ ಪ್ರಸಂಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT