ಶನಿವಾರ, ಆಗಸ್ಟ್ 24, 2019
23 °C
ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ಪ್ರತಿಭಟನೆ

ಹೆಚ್ಚುವರಿ ಕಾರ್ಯಭಾರ ಕಡಿಮೆ ಮಾಡಲು ಒತ್ತಾಯ

Published:
Updated:
Prajavani

ಕಲಬುರ್ಗಿ: ಗ್ರಾಮ ಲೆಕ್ಕಾಧಿಕಾರಿಗಳ ಮೇಲಿನ ಕಾರ್ಯಭಾರವನ್ನು ಕಡಿಮೆ ಮಾಡಬೇಕು. ರಜಾ ದಿನಗಳಲ್ಲಿಯೂ ಕೆಲಸ ಮಾಡುವಂತೆ ಒತ್ತಡ ಹೇರುವುದನ್ನು ನಿಲ್ಲಿಸಿ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಸಾರ್ವತ್ರಿಕ ರಜಾ ದಿನಗಳಲ್ಲಿಯೂ ರಜೆಯ ಸೌಲಭ್ಯ ಸಿಗುತ್ತಿಲ್ಲ. ಇದರಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು, ಕುಟುಂಬದಲ್ಲಿ ಕಲಹಗಳೂ ಹೆಚ್ಚುತ್ತಿವೆ. ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಆಗುತ್ತಿರುವ ನಿರಂತರ ಅನ್ಯಾಯವನ್ನು ಸರಿಪಡಿಸಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮತ್ತು ಗ್ರಾಮ ಲೆಕ್ಕಿಗರ ಜ್ಯೇಷ್ಠತೆಗಳನ್ನು ಒಗ್ಗೂಡಿಸಿ ಪದನವೀಕರಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣಭತ್ಯೆ ದರವನ್ನು ಈಗ ₹ 300ರಿಂದ ₹ 500ಕ್ಕೆ ಹೆಚ್ಚಿಸಿದೆ. ಅದನ್ನು ₹ 1 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.‌ ಇಷ್ಟು ಮೊತ್ತದ ಹೆಚ್ಚಳಕ್ಕೆ ಸರ್ಕಾರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ತೀರ್ಮಾನಿಸಿದ್ದು, ಈ ಬಗ್ಗೆ ಆದೇಶ ಹೊರಡಿಸಬೇಕು ಎಂದರು.

ಗ್ರಾಮ ಲೆಕ್ಕಾಧಿಕಾರಿಗಳ ಜಾಬ್‌ ಚಾರ್ಟ್‌ ನೀಡುವ ಬಗ್ಗೆ ತೀರ್ಮಾನಿಸಿದ್ದರೂ ಇದುವರೆಗೆ ನೀಡಿಲ್ಲ. ಮರಳು ದಂದೆಕೋರರಿಂದ ಕೊಲೆಯಾದ ಸಾಹೇಬ ಪಟೇಲ್‌ ಅವರಿಗೆ ₹ 20 ಲಕ್ಷ ವಿಶೇಷ ಪರಿಹಾರವನ್ನು ಇನ್ನೂವರೆಗೆ ನೀಡಿಲ್ಲ. ಕೂಡಲೇ ಹಣವನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಸಹಾಯಕರ ಹುದ್ದೆಗಳನ್ನು ಕಾಯಂಗೊಳಿಸಬೇಕು ಎಂದೂ ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಗುರುಮೂರ್ತಯ್ಯ ಚತುರಾಚಾರಿಮಠ, ಪ್ರಧಾನ ಕಾರ್ಯದರ್ಶಿ ನವಾಜ್‌ ಮೊಹಮ್ಮದ್‌, ಖಜಾಂಚಿ ಪ್ರಶಾಂತ ಬಿ.ಮಡಿವಾಳ ಹಾಗೂ ಸಂಘದ ಇತರ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Post Comments (+)