ಹಳ್ಳಿ ಹಾಡು ಚೆಂದ, ಜಾನಪದ ಸಂಸ್ಕೃತಿ ಅಂದ

7
ಸಂತ ಜೋಸೆಫ್ ಸಂಯುಕ್ತ ಪದವಿ ಕಾಲೇಜಿನಲ್ಲಿ ವಿಶ್ವಜಾನಪದ ದಿನಾಚರಣೆ

ಹಳ್ಳಿ ಹಾಡು ಚೆಂದ, ಜಾನಪದ ಸಂಸ್ಕೃತಿ ಅಂದ

Published:
Updated:
Deccan Herald

ಕಲಬುರ್ಗಿ: ಹಳ್ಳಿಯ ಸೊಬಗನ್ನು ನಾಚಿಸುವಂತೆ ಸೀರೆಯುಟ್ಟು ಜಾನಪದ ಹಾಡುಗಳಿಗೆ ಹೆಜ್ಜೆ ಹಾಕುವ ಹುಡುಗಿಯರ ತಂಡಗಳು. ನೈತಿಕ ಮೌಲ್ಯಗಳನ್ನು ಹೇಳಿಕೊಡುವ ಜಾನಪದ ಹಾಡುಗಳು ಸುಶ್ರಾವ್ಯವಾಗಿ ಶೋತೃಗಳನ್ನು ಸೆಳೆಯುತ್ತಿತ್ತು. ಇನ್ನಷ್ಟು ಇಂಬು ನೀಡುವಂತ ಬೈತಲೆ, ಬೋರಮಳ ಸರಗಳು, ಸೀರೆಗೆ ತಕ್ಕನಾದ ಹಣೆಬೊಟ್ಟು, ಜುಮಕಿ, ನಡುಪಟ್ಟಿ, ಡಾಬುಗಳ ಧರಿಸಿ ಜಾನಪದ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರೆ ನೋಡುಗರು ಕುಳಿತಲ್ಲೆ ಎದ್ದೆದ್ದು ಕೂರುತ್ತಿದ್ದರು. ಚಪ್ಪಾಳೆ, ಕೇಕೆಗಳು ಮುಗಿಲು ಮುಟ್ಟಿದ್ದವು.

ಇದೆಲ್ಲವೂ ಕಂಡು ಬಂದದ್ದು ನಗರದ ಸಂತ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ. ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಬುಧವಾರ 5ನೇ ವರ್ಷದ ಜಾನಪದ ಸಂಭ್ರಮವನ್ನು ‘ಆದಾವ ನಮ್ಮ ಜೋಳ, ಉಳಿದಾವ ನಮ್ಮ ಹಾಡ’ ಅಡಿ ಬರಹದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉತ್ತರ ಕರ್ನಾಟಕದ ಹಳ್ಳಿಗಳ ಸೊಗಡು ಬಿಂಬಿಸುವ ಕಲೆ, ಹಾಡು ನೃತ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದರು. ‘ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ, ನಿಂಬೀಯ ಬನದ ಮ್ಯಾಗಲ ಚಂದ್ರಮ’ ಹಾಡಿಗೆ ಜಯಶ್ರೀ ಹಾಗೂ ಪಂಕಜಾ ತಂಡದವರು ಜಾನಪದ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಪ್ರೇಕ್ಷರಿಂದ ಚಪ್ಪಾಳೆಯ ಮಳೆ ಸುರಿಯುತ್ತಿತ್ತು. ವಿದ್ಯಾರ್ಥಿನಿ ಮಾರ್ಗರೇಟ್ ಗುಜರಾತಿ ಜಾನಪದ ಶೈಲಿಯ ನೃತ್ಯವೂ ನೋಡುಗರ ಹುಬ್ಬೇರಿಸುವಂತೆ ಮಾಡಿತ್ತು. ಲಂಬಾಣಿ ನೃತ್ಯ, ಸಮೂಹ ಗಾಯನಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಮೋಹಕವಾಗಿದ್ದವು.

ಬಾಯಿ ಚಪ್ಪರಿಸುವ ಖಾಧ್ಯಗಳು ಹಾಗೂ ವಸ್ತು ಪ್ರದರ್ಶನ: ಇನ್ನೊಂದು ಕಡೆ ಬಾಯಿ ಚಪ್ಪರಿಸಿ ತಿನ್ನಬೇಕು ಎನ್ನುವಷ್ಟು ಆಸೆ ಹುಟ್ಟಿಸುವ ವಿವಿಧ ರೀತಿಯ ಖಾಧ್ಯಗಳ ಸಾಲು ಸಾಲು. ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ಕಾಳು ಪಲ್ಲೆ, ಶೇಂಗಾ ಹೋಳಿಗೆ, ಎಳ್ಳುಹೋಳಿಗೆ, ಪಚಡಿ, ಬದನೆಕಾಯಿ ಎಣಗಾಯಿ, ರಾಗಿದೋಸೆ, ಖರ್ಚಿಕಾಯಿ, ಉಂಡೆ ಹೀಗೆ ವಿವಿಧ ಬಗೆಯ ಸುಮಾರು 50ಕ್ಕೂ ಹೆಚ್ಚು ಉತ್ತರ ಕರ್ನಾಟಕ ಭಾಗದ ಅಡುಗೆಗಳನ್ನು ವಿದ್ಯಾರ್ಥಿನಿಯರು ಸಿದ್ಧಪಡಿಸಿ ನೋಡುಗರ ಬಾಯಿಯಲ್ಲಿ ನೀರುರಿಸಿದರು.

ಹಳ್ಳಿ ಮನೆಗಳ ಸೌಂದರ್ಯವನ್ನು ಕೃತಕವಾಗಿ ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಅಲ್ಲಿ ಬಳಸುವ ಗೃಹ ಬಳಕೆಯ ಹಾಗೂ ರೈತರು ಹೊಲದಲ್ಲಿ ಬಳಸುವ ವಸ್ತುಗಳ ಪ್ರದರ್ಶನದ ಜೊತೆಗೆ ಪರಿಚಯವನ್ನು ಮಾಡಕೊಡಲಾಯಿತು.

ಮೊದಲ ಬಾರಿಗೆ ಅನೇಕ ವಿದ್ಯಾರ್ಥಿನಿಯರು ಕುದ್ದು ತಾವೇ ಅಡುಗೆಯನ್ನು ತಯಾರಿಸಿದ್ದರು. ಮುಖ್ಯವಾಗಿ ರೊಟ್ಟಿ, ಚಪಾತಿಗಳನ್ನು ತಯಾರಿಸಿ ಹೊಲಕ್ಕೆ ಬುತ್ತಿ ಕಟ್ಟಿದಂತೆ ಕಟ್ಟಿಕೊಂಡು ಬಂದಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅಭ್ಯಾಸದ ಜೊತೆಗೆ ಇಂತಹ ಕಾರ್ಯಕ್ರಮ ಹಾಗೂ ಚಟುವಟಿಕೆಗಳು ಹೆಚ್ಚು ಅವಿಸ್ಮರಣೀಯವಾಗಿವೆ. ಹಬ್ಬದ ವಾತಾವರಣವನ್ನು ಕಾಲೇಜಿನಲ್ಲಿ ಕಾಣುತ್ತಿದ್ದೇವೆ ಎಂದು ‘ಪ್ರಜಾವಾಣಿ’ ಯೊಂದಿಗೆ ತಮ್ಮ ಖುಷಿಯನ್ನು ವಿದ್ಯಾರ್ಥಿನಿಯರು ಹಂಚಿಕೊಂಡರು.

ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಬಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಹಳ್ಳಿ ಜನರು ತಮ್ಮ ಕೆಲಸದ ಜೊತೆಗೆ ಬೇಸರ ಕಳೆಯುವುದಕ್ಕೆ ಹಾಡುತ್ತಿದ್ದ ಹಾಡುಗಳು ಜಾನಪದಗಳಾಗಿವೆ. ಅವರು ಯಾವ ಪ್ರಶಸ್ತಿ, ಕಿರೀಟಗಳಿಗಾಗಿಯೂ ಹಾಡಲಿಲ್ಲ. ಆ ಹಾಡುಗಳಲ್ಲಿ ಬದುಕಿನ ಅರ್ಥವನ್ನು ತಿಳಿಸಿಕೊಡುತ್ತಿದ್ದರು’ ಎಂದು ಹೇಳಿದರು.

ಪತ್ರಕರ್ತ ದೇವಯ್ಯ ಗುತ್ತೇದಾರ ಜನಪದ ಅಡುಗೆ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಸರ್ಕಾರವೂ ಜಾನಪದ ಕಲೆ, ಸಂಸ್ಕೃತಿಯನ್ನು ಬೆಳೆಸಲು ಪ್ರತಿ ಶಾಲಾ–ಕಾಲೇಜಿನಲ್ಲಿ ಒಂದು ದಿನ ಜಾನಪದ ಹಬ್ಬ ಆಚರಿಸುವಂತೆ ಸುತ್ತೋಲೆ ಹೊರಡಿಸಬೇಕು. ‘ಕೂಸಿದ್ದ ಮನೆಗೆ ಬೀಸಣಿಕೆ ಯಾತಕ್ಕ, ಕೂಸು ಕಂದಯ್ಯ ಒಳ–ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಂಗ’ ಇಂತಹ ಅನೇಕ ಜಾನಪದ ಹಾಡುಗಳು ಯುವ ಪೀಳಿಗೆಯಿಂದ ಮರೆಯಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಒಂದು ಕಾಲದಲ್ಲಿ ಜಾನಪದ ಬದುಕಿನ ರೀತಿ, ಧ್ಯೇಯ, ಚಿಂತನೆಯಾಗಿತ್ತು. ಕೇವಲ ಮನರಂಜನೆಯಾಗಿರಲಿಲ್ಲ. ಒಳ್ಳೆಯ ವಿಚಾರಗಳಿಗೆ ಬರವಿಲ್ಲ, ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ. ಜಾನಪದ ಹಾಡುಗಳ ಅರ್ಥವನ್ನು ತಿಳಿದುಕೊಂಡಂತೆ ಅದರ ಮಹತ್ವ ಅರಿವಾಗುತ್ತದೆ.

ಸಣ್ಣ ಮೊಬೈಲ್‌ ದೊಡ್ಡ ಸಂಬಂಧಗಳನ್ನು ಹಾಳು ಮಾಡುತ್ತಿವೆ. ಅವಶ್ಯಕತೆಗಿಂತ ಅತಿಯಾಗಿ, ಅನಾವಶ್ಯಕವಾಗಿ ಬಳಸುವುದು ವಿದ್ಯಾರ್ಥಿ–ಯುವಜನರಿಗೆ ಮಾರಕವಾಗಿದೆ. ಕಥೆ, ಕಾದಂಬರಿ, ನಾಟಕದಂತಹ ಅನೇಕ ಸೃಜನಶೀಲ ಚಟುವಟಿಕೆಗಳಿಂದ ವಿಮುಖರಾಗುವ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೇಳಿದರು.

ಜಾನಪದ ಭಾರತದ ಮೂಲ ಸಂಸ್ಕೃತಿ. ಇಲ್ಲಿ ಸತ್ಯ, ಪ್ರೀತಿ, ಮಮತೆ ಹಾಗೂ ಎಲ್ಲವನ್ನು ಒಗ್ಗೂಡಿಸುವಂತೆ ಮಾಡುತ್ತದೆ. ಬದುಕಿನ ಏರಿಳಿತವನ್ನು, ಸುಖ–ದು:ಖವನ್ನು ಸಮಗ್ರವಾಗಿ ಬಿಂಬಿಸುತ್ತದೆ.
- ಪ್ರೊ.ಐ.ಎಸ್.ವಿದ್ಯಾಸಾಗರ, ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕಲಬುರ್ಗಿ

ಕಾಲೇಜಿನಲ್ಲಿ ಲಂಬಾಣಿ ನೃತ್ಯ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ವೇದಿಕೆ ಮೇಲೆ ನಿಂತುಕೊಳ್ಳಲು ಭಯ ಅನ್ನಿಸುತ್ತಿತ್ತು. ಈಗ ಯಾವ ಭಯವೂ ಇಲ್ಲ. ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸ್ಪೂರ್ತಿ ಬಂದಿದೆ.
- ಪೂಜಾ ಹರಿಜಾಧವ

ಹಳ್ಳಿಯಲ್ಲಿನ ವಾತಾವರಣವನ್ನು ಇಂದು ಕಾಲೇಜಿನಲ್ಲಿ ನೋಡಿದ್ದು ಮರೆಯಲಾಗದ ಕ್ಷಣಗಳಾಗಿವೆ. ನನ್ನ ಆತ್ಮವಿಶ್ವಾಸವನ್ನು, ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಹಾಯವಾಯಿತು.
- ಪಂಕಜಾ ಕಟ್ಟಿಮನಿ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !