ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮೂರನೇ ಅಲೆ; ಕಾಡಲಿದೆ ವೈದ್ಯರ ಕೊರತೆ

ನಿಯಂತ್ರಣಕ್ಕೆ ಜಿಲ್ಲಾಡಳಿತ ಸಿದ್ಧತೆ; 9 ಲಕ್ಷ ಮಕ್ಕಳಿಗೆ ಕೇವಲ 90 ವೈದ್ಯರು, 450 ಬೆಡ್‌
Last Updated 7 ಜೂನ್ 2021, 2:08 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ 9 ಲಕ್ಷಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ, ಮಕ್ಕಳ ತಜ್ಞರ ಸಂಖ್ಯೆ ಕೇವಲ 90. ಬೆಡ್‌ಗಳ ಸಂಖ್ಯೆ 420 ಮಾತ್ರ. ಕೋವಿಡ್ ಮೂರನೇ ಅಲೆಯು ಹೆಚ್ಚಾಗಿ ಮಕ್ಕಳನ್ನೇ ಕಾಡಲಿದೆ ಎಂದು ತಜ್ಞರು ಪದೇಪದೇ ಎಚ್ಚರಿಸುತ್ತಲೇ ಇದ್ದಾರೆ. ಆದರೆ, ಮಕ್ಕಳ ತಜ್ಞರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಕಾಗದದ ಹಂತದಲ್ಲೇ ಇದೆ.

ಕೋವಿಡ್‌ ಎರಡನೇ ಅಲೆಯ ಉಪಟಳ ತುಸು ನಿಯಂತ್ರಣಕ್ಕೆ ಬರುತ್ತಿದ್ದು, ಇದರ ಬೆನ್ನಲ್ಲೇ ಮೂರನೇ ಅಲೆಯ ಹತೋಟಿಗೆ ಜಿಲ್ಲಾಡಳಿತ ಮುಂಜಾಗ್ರತೆಯಿಂದ ಕೆಲಸ ಆರಂಭಿಸಿದೆ. ಈಗಾಗಲೇ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಮಕ್ಕಳ ಆಸ್ಪತ್ರೆಗಳ ತಜ್ಞ ವೈದ್ಯರ ಸಭೆ ನಡೆಸಿ, ಚರ್ಚಿಸಲಾಗಿದೆ. ಇರುವ 90 ವೈದ್ಯರಲ್ಲಿ 14 ಮಂದಿ ಮಾತ್ರ ಸರ್ಕಾರಿ ವೈದ್ಯರು.

ನಗರದಲ್ಲಿ 15 ಮಕ್ಕಳ ಆಸ್ಪತ್ರೆಗಳಿದ್ದು, ಅವುಗಳಲ್ಲಿ 7 ಮಾತ್ರ ಕೋವಿಡ್‌ ಚಿಕಿತ್ಸೆ ನೀಡಲು ಸಮರ್ಥವಾಗಿವೆ.

ಬೆಡ್‌ಗಳ ಸಂಖ್ಯೆಯನ್ನು ಕನಿಷ್ಠ ಒಂದು ಸಾವಿರಕ್ಕೆ ಏರಿಸಬೇಕಿದೆ. ಪ್ರತಿ ತಾಲ್ಲೂಕಿಗೂ ಇನ್ನೂ ಇಬ್ಬರು ಮಕ್ಕಳ ತಜ್ಞರ ನೇಮಕ ಅಗತ್ಯವಾಗಿದೆ.

ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌: ಕೋವಿಡ್‌ ಎರಡನೇ ಅಲೆಯನ್ನು ಜಿಲ್ಲಾಡಳಿತ ಹಗುರವಾಗಿ ಪರಿಗಣಿಸಿದ್ದರಿಂದಲೇ ಸೋಂಕು ನಿಯಂತ್ರಣಕ್ಕೆ ಬಾರದಷ್ಟು ವ್ಯಾಪಿಸಿತು. ಜಿಲ್ಲಾಸ್ಪತ್ರೆ ಹಾಗೂ ಎಲ್ಲ ಖಾಸಗಿ ಆಸ್ಪತ್ರೆಗಳು ತುಂಬಿ, ಬೆಡ್‌ಗಳ ಸಮಸ್ಯೆ ಕಾಡಿದಾಗ ತಾಲ್ಲೂಕು ಕೇಂದ್ರದ ಆಸ್ಪತ್ರೆಗಳನ್ನು ಸಿದ್ಧಗೊಳಿಸಲಾಯಿತು.

ಇದರಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಮೂರನೇ ಅಲೆ ಬರುವ ಮುನ್ನವೇ ತಾಲ್ಲೂಕು ಆಸ್ಪತ್ರೆಗಳನ್ನು ಕೂಡ ಮಕ್ಕಳ ಚಿಕಿತ್ಸೆಗೆ ಸಿದ್ಧಗೊಳಿಸಲು ಮುಂದಾಗಿದೆ. ಎಲ್ಲ 11 ತಾಲ್ಲೂಕು ಕೇಂದ್ರಗಳ ಆಸ್ಪತ್ರೆಯಲ್ಲೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್‌ ಸಿದ್ಧಗೊಳಿಸಲು ಸೂಚಿಸಲಾಗಿದೆ. ಸದ್ಯ 50 ಆಮ್ಲಜನಕಯುಕ್ತ ಬೆಡ್‌ಗಳು ಇದ್ದು, ಈ ಸಂಖ್ಯೆಯನ್ನು 100ಕ್ಕೆ ಏರಿಸಲು ಉದ್ದೇಶಿಸಲಾಗಿದೆ.

ಅದರಲ್ಲಿ 30 ಬೆಡ್‌ಗಳು ಮಕ್ಕಳಿಗಾಗಿಯೇ ಇರಲಿದ್ದು, 5 ಬೆಡ್‌ಗಳ ಐಸಿಯು ಘಟಕ ಕೂಡ ಇರಲಿದೆ.‌ ಸಣ್ಣ ಪ್ರಮಾಣದ ಲಕ್ಷಣ ಕಂಡುಬರುವ ಮಕ್ಕಳಿಗೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಚಿಕಿತ್ಸೆ ಸಿಗುವಂತೆ ನಿಗಾ ವಹಿಸಲಾಗಿದೆ ಎಂಬುದು ಜಿಲ್ಲಾಡಳಿತದ ಮಾಹಿತಿ.

ಆಮ್ಲಜನಕ ಘಟಕ ಇನ್ನೂ ವಿಳಂಬ: ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ರಿಫಿಲ್ ಸೌಲಭ್ಯದೊಂದಿಗೆ 500 ಎಲ್.ಪಿ.ಎಂ. ದ್ರವ ರೂಪದ ಆಮ್ಲಜನಕ ತಯಾರಿಕಾ ಘಟಕ ಸ್ಥಾಪನೆ ಮಾಡಲು
ರಾಜ್ಯ ಸರ್ಕಾರ ಉದ್ದೇಶಿಸಿದೆ. ಅದರೆ, ಅದು ತುರ್ತಾಗಿ ಆಗುವ ಕೆಲಸವಲ್ಲ. ಇನ್ನೂ ಸಾಕಷ್ಟು ಸಮಯ ಹಿಡಿಯುತ್ತದೆ ಎಂಬುದು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಳವಳ.

ಯಾರು ಏನೆಂದರು?

ಜಿಲ್ಲೆಯಾದ್ಯಂತ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಘಟಕ ವಿಭಾಗ ಒಳಗೊಂಡಂತೆ ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಬಲವರ್ಧನೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

–ಡಾ.ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

***

ತಜ್ಞರ ಸಭೆ ಕರೆದು ಅಗತ್ಯ ಸಲಹೆ ಪಡೆಯಲಾಗಿದೆ. ಪಾಲಕರು ಈಗಿನಿಂದಲೇ ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಸುವಂಥ ಆಹಾರ, ಯೋಗ, ವ್ಯಾಯಾಮ, ಕ್ರೀಡಾ ಚಟುವಟಿಕೆ ಮಾಡಿಸಬೇಕು. ಸದ್ಯ ಔಷಧಿ, ಆಮ್ಲಜನಕದ ಕೊರತೆ ಇಲ್ಲ.

–ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ

***

ಶೀಘ್ರದಲ್ಲಿ ಇಎಸ್‌ಐಸಿ ಆಸ್ಪತ್ರೆಯಲ್ಲಿ ಎರಡು ಆಮ್ಲಜನಕ ಉತ್ಪಾದನಾ ಘಟಕಗಳು ಆರಂಭವಾಗಲಿವೆ. ಇನ್ನೆರಡು ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಆಮ್ಲಜನಕ, ಔಷಧೋಪಚಾರ ಸೇರಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.

–ಡಾ.ಉಮೇಶ ಜಾಧವ, ಸಂಸದ

***
ಜಿಮ್ಸ್‌ ಆವರಣದ ಹೊಸ ಕಟ್ಟಡದಲ್ಲಿ ಬೆಡ್‌ಗಳಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಚಿಕಿತ್ಸೆಗೆ ಬೇಕಾಗಿರುವ ಔಷಧಿಗಳು, ಕನ್ಸುಮೇಬಲ್ಸ್ ಸಾಮಗ್ರಿ, ವೈದ್ಯಕೀಯ ಉಪಕರಣಗಳ ಖರೀದಿಗೆ ಆದ್ಯತೆ ನೀಡಲಾಗಿದೆ.

–ಡಾ.ಕವಿತಾ ಪಾಟೀಲ, ಜಿಮ್ಸ್‌ ನಿರ್ದೇಶಕಿ

***
‘ಟೆಲಿ ಕನ್ಸಲ್ಟೇಷನ್’ ಚಿಕಿತ್ಸೆ

ಕಲಬುರ್ಗಿಯ ಜಿಮ್ಸ್‌ ಹಾಗೂ ಇಎಸ್‌ಐಸಿ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞ ವೈದ್ಯರು ಇದ್ದಾರೆ. ಆದರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಮಾತ್ರ ಇದ್ದಾರೆ. ಆದ್ದರಿಂದ ಜಿಮ್ಸ್ ಮತ್ತು ಇಎಸ್ಐಸಿ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ವೈದ್ಯರು ತಾಲ್ಲೂಕು ಆಸ್ಪತ್ರೆಗಳಲ್ಲಿ ದಾಖಲಾಗುವ ಮಕ್ಕಳಿಗೆ ಅಗತ್ಯವಿದ್ದಾಗ ಟೆಲಿ ಕನ್ಸಲ್ಟೇಷನ್ (ದೂರವಾಣಿ ಮೂಲಕ ಮಾರ್ಗದರ್ಶನ) ಮೂಲಕ ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಮಾಡಲಾಗುವುದು. ಸದ್ಯ ಇರುವ ವೈದ್ಯರ ಕೊರತೆಯನ್ನು ಇದು ನೀಗಿಸಬಲ್ಲದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಹೊಸ ಸವಾಲುಗಳೇನು?

l ಮಕ್ಕಳ ಅಳತೆಗೆ ತಕ್ಕಂತ ಆಮ್ಲಜನಕ ಸಿಲಿಂಡರ್‌ ಹಾಗೂ ಆಮ್ಲಜನಕದ ಮಾಸ್ಕ್‌ ಖರೀದಿಸಬೇಕು.

l ಆಸ್ಪತ್ರೆಯಲ್ಲಿ ಸೋಂಕಿತ ಮಗುವಿನ ಜತೆಗೆ ಒಬ್ಬ ಪಾಲಕರೂ ಇರುವುದು ಅನಿವಾರ್ಯ. ಇದನ್ನು ಜಿಲ್ಲಾಡಳಿತ ಹೇಗೆ ನಿಭಾಯಿಸುತ್ತದೆ ಎಂಬುದೇ ಸವಾಲು.

l ಪಾಲಕರ ಓಡಾಟ ಅನಿವಾರ್ಯ ಆಗಲಿರುವ ಕಾರಣ ಕೋವಿಡ್‌ ಮಾರ್ಗಸೂಚಿಗಳಲ್ಲೂ ಬದಲಾವಣೆ ಅಗತ್ಯ.

l ಇದೀಗ ತಾನೆ ರಾಜ್ಯ ಸರ್ಕಾರ ಮಕ್ಕಳ ತಜ್ಞರ ನೇಮಕಕ್ಕೆ ಹೆಜ್ಜೆ ಇಟ್ಟಿದ್ದು, ಈ ಕೆಲಸ ವಿಳಂಬವಾಗುವ ಸಾಧ್ಯತೆ.

l ಮಕ್ಕಳ ಮುಖದ ಅಳತೆಯ ಮಾಸ್ಕ್‌ಗಳ ಸಿದ್ಧತೆ ಹಾಗೂ ಅವುಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು ತುರ್ತು.

14499 ಸಹಾಯವಾಣಿ

ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯು ಮಕ್ಕಳಲ್ಲಿನ ಮಾನಸಿಕ ಒತ್ತಡ ನಿವಾರಣೆಗೆ 14499 ಟೋಲ್ ಫ್ರೀ ಸಂಖ್ಯೆ ನೀಡಿದೆ. ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಲು ಹಾಗೂ ಅವರಲ್ಲಿನ ಭಯ ನಿವಾರಿಸುವುದು ಹೇಗೆ ಎಂಬ ಬಗ್ಗೆ ಪಾಲಕರು ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ತಾಲ್ಲೂಕಿಗೊಂದು ಪೌಷ್ಟಿಕಪುನರ್ವಸತಿ ಕೇಂದ್ರ

ಜಿಲ್ಲೆಯಲ್ಲಿ 28 ಸಾವಿರಕ್ಕೂ ಹೆಚ್ಚು ಮಕ್ಕಳ ತೂಕ ಕಡಿಮೆ ಇದೆ. ಇವರು ಪದೇಪದೇ ಒಂದಿಲ್ಲೊಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ 680 ಮಕ್ಕಳಲ್ಲಿ ಅಪೌಷ್ಟಿಕತೆ ಇದ್ದು, ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಅಂಗನವಾಡಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಅಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನೆರವಿನಿಂದ ಮಕ್ಕಳ ನಿಖರ ಲೆಕ್ಕ ಹಾಕಲಾಗಿದೆ. ಹೀಗೆ ಅಪೌಷ್ಟಿಕತೆ ಇರುವ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿ, ಅವರಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಸದಿಂದ ತಾಲ್ಲೂಕಿಗೆ ಒಂದು ಪೌಷ್ಟಿಕ ಪುನರ್ವಸತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಇನ್ನೆರಡು ವಾರದಲ್ಲಿ ಇದರ ನಿಖರ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT