ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಎಸ್‌ಎಸ್‌ ಬಡವರ ಬಗ್ಗೆ ಮಾತಾಡುವುದು ಯಾವಾಗ?’

ಭಾರತ ಕಮ್ಯುನಿಸ್ಟ್ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಪ್ರಶ್ನೆ
Last Updated 15 ಜನವರಿ 2022, 13:40 IST
ಅಕ್ಷರ ಗಾತ್ರ

ಕಲಬುರಗಿ: ಇತ್ತೀಚೆಗೆ ನಗರದಲ್ಲಿ ನಡೆದ ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಅವರು ಹಿಂದೂ ರಾಷ್ಟ್ರದ ಬಗ್ಗೆಯೇ ಒತ್ತು ಕೊಟ್ಟು ಮಾತನಾಡಿದ್ದಾರೆ. ತಮ್ಮದೇ ಮಾತು ಕೇಳುವ ಸರ್ಕಾರ ಕೋವಿಡ್‌ ನಿರ್ವಹಣೆಯನ್ನು ಅಸಮರ್ಥವಾಗಿ ಮಾಡಿದೆ. ಇದರ ಪರಿಣಾಮ ಬಡತನ, ನಿರುದ್ಯೋಗ ಸೃಷ್ಟಿಯಾಗಿದೆ. ಈ ಬಗ್ಗೆ ಅವರು ಮಾತನಾಡುವುದು ಯಾವಾಗ ಎಂದು ಭಾರತ ಕಮ್ಯುನಿಸ್ಟ್ (ಮಾರ್ಕ್ಸ್‌ವಾದಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಬೈಠಕ್‌ನಲ್ಲಿ 135 ಕೋಟಿ ಜನಸಂಖ್ಯೆಯ ಪೈಕಿ 100 ಕೋಟಿ ಹಿಂದೂಗಳಿದ್ದಾರೆ. ಉಳಿದವರು ಅಲ್ಪಸಂಖ್ಯಾತರು ಎನ್ನುವ ಮೂಲಕ ಒಡೆದು ಆಳುವ ನೀತಿಗೆ ಇಂಬು ಕೊಟ್ಟಿದ್ದಾರೆ. ಕಲಬುರಗಿಯ ನೆಲವು ವಚನಕಾರರು, ಸೂಫಿಗಳು, ಸಂತರು, ಶರಣರ ಭಾವೈಕ್ಯದ ನೆಲೆಯಾಗಿದೆ. ಇಂಥಲ್ಲಿ ಒಂದು ಸಮುದಾಯವನ್ನಷ್ಟೇ ಮೇಲೆತ್ತುವ ಬಗ್ಗೆ ಭಾಗವತ್ ಅವರು ಮಾತನಾಡಬಾರದಿತ್ತು’ ಎಂದರು.

‘ಸಂಘಟನೆಯ ಕಟ್ಟಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಆರ್‌ಎಸ್‌ಎಸ್‌ 1925ರಿಂದಲೇ ಸಂಘಟನೆ ಮಾಡಿಕೊಳ್ಳುತ್ತಿವೆ. ಆದರೆ, ಸ್ವಾತಂತ್ರ್ಯಾನಂತರ ಭಾರತ ಅಂಗೀಕರಿಸಿದ ಸಂವಿಧಾನವನ್ನು ಆರ್‌ಎಸ್‌ಎಸ್‌ ಒಪ್ಪಿಕೊಂಡಿಲ್ಲ. ಮನುಸ್ಕೃತಿಯ ಅಂಶಗಳು ಸಂವಿಧಾನದಲ್ಲಿ ಇಲ್ಲದೇ ಇರುವುದರಿಂದ ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಸಂಘದ ಮುಖಂಡರು ಹೇಳಿದ್ದಾರೆ. ಇನ್ನು ಎಲ್ಲ ಧರ್ಮೀಯರೂ ಒಟ್ಟಾಗಿ ಬಾಳ್ವೆ ಮಾಡಬೇಕು ಎಂಬ ಸಂವಿಧಾನದ ಆಶಯ ಸಾಕಾರವಾಗುವುದು ಹೇಗೆ’ ಎಂದು ಪ್ರಶ್ನಿಸಿದರು.

17ರಂದು ಹೋರಾಟ: ಕರ್ನಾಟಕ ಸರ್ಕಾರವು ಅತ್ಯಂತ ಜನವಿರೋಧಿಯಾದ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಇದೇ 17ರಂದು ಜಿಲ್ಲಾಧಿಕಾರಿ ಕಚೇರಿ ಹಾಗೂ ಎಲ್ಲ ತಾಲ್ಲೂಕು ಕಚೇರಿಗಳ ಎದುರು ಕೋವಿಡ್ ನಿಯಮದಂತೆ ಅಂತರ ಕಾಯ್ದುಕೊಂಡು ಹೋರಾಟ ನಡೆಸಲಾಗುವುದು ಎಂದು ಕೆ. ನೀಲಾ ತಿಳಿಸಿದರು.

‘ಈಗಾಗಲೇ ಅನಧಿಕೃತವಾಗಿ ನಡೆಯುತ್ತಿರುವ ಪುಂಡಾಟಿಕೆಗೆ ಈ ಕಾಯ್ದೆಯ ಮೂಲಕ ಅಧಿಕೃತ ಮನ್ನಣೆ ನೀಡುವ ಹುನ್ನಾರ ಇದೆ. ಆದ್ದರಿಂದ ಈ ಕಾಯ್ದೆ ಜಾರಿಯಾಗಬಾರದು’ ಎಂದರು.

ಅಲ್ಲದೇ, ಜನವರಿ 26ರಿಂದ 30ರವರೆಗೆ ಪಕ್ಷದ ವತಿಯಿಂದ ಜನಗಣ ರಾಜ್ಯೋತ್ಸವವನ್ನು ಆಚರಿಸಲಾಗುವುದು. ಈ ಸಂದರ್ಭದಲ್ಲಿ ಎಲ್ಲ ಧರ್ಮಗಳ ಗುರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಬಿ. ಸಜ್ಜನ ಮಾತನಾಡಿ, ‘ಬುಲ್ಲಿಆ್ಯಪ್ ಮೂಲಕ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರನ್ನು ಅವಮಾನ ಮಾಡುವ ಯತ್ನಗಳು ನಡೆಯುತ್ತಿವೆ. ಇಡೀ ಜಾಗತಿಕವಾಗಿ ನಡೆಯುತ್ತಿರುವ ವಿದ್ಯಮಾನದ ಒಂದು ಭಾಗವಾಗಿದೆ. ಒಂದೆಡೆ ಅಲ್ಪಸಂಖ್ಯಾತರನ್ನು ಹೆದರಿಸಿ ತನ್ನ ಅಂಕೆಯಲ್ಲಿಟ್ಟುಕೊಳ್ಳುತ್ತಿರುವ ಸರ್ಕಾರ, ಮತ್ತೊಂದೆಡೆ ದೇಶದ ಸಂಪತ್ತು ಖಾಸಗಿಯವರಿಗೆ ಒಪ್ಪಿಸಲು ಪ್ರಯತ್ನಿಸುತ್ತಿದೆ. ಬರುವ ಏಪ್ರಿಲ್‌ನಲ್ಲಿ ಕೇರಳದಲ್ಲಿ ಅಖಿಲ ಭಾರತ ಸಮ್ಮೇಳನ ಜರುಗಲಿದ್ದು, ಅಲ್ಲಿ ಪ್ರಸಕ್ತ ದೇಶದ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು’ ಎಂದರು.

ಜಿಲ್ಲಾ ಸಮಿತಿ ಸದಸ್ಯರಾದ ನಾಗಯ್ಯಸ್ವಾಮಿ, ಸುಧಾಮ ಧನ್ನಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT