ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರನ್ನು ಗೌರವದಿಂದ ಕಾಣಿ; ನ್ಯಾ. ಶಿವರಾಜ ವಿ.ಪಾಟೀಲ

Last Updated 14 ಮಾರ್ಚ್ 2023, 4:21 IST
ಅಕ್ಷರ ಗಾತ್ರ

ಕಲಬುರಗಿ: ‘ಜಾಗತಿಕ ಮಟ್ಟದಲ್ಲಿ ಮಹಿಳಾ ದಿನ ಆಚರಿಸಿ ದೊಡ್ಡದಾಗಿ ಭಾಷಣ ಮಾಡಬಹುದು. ಮಹಿಳೆಯರ ಪರ ಕಾನೂನು ಎಷ್ಟೇ ಬಲವಾಗಿರಬಹುದು. ಆದರೆ, ಮಹಿಳೆಯರ ಕುರಿತ ನಮ್ಮ ಮನಸ್ಥಿತಿ ಮತ್ತು ಮನೋಭಾವ ಬದಲಾಗಬೇಕು. ಅವರನ್ನು ಗೌರವದಿಂದ ಕಾಣುವುದು ಎಲ್ಲಕ್ಕಿಂತ ಮುಖ್ಯ’ ಎಂದು ರಾಜ್ಯ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಡಾ. ಶಿವರಾಜ ವಿ.ಪಾಟೀಲ ಹೇಳಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಮಹಿಳೆ’ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರನ್ನು ವೈಭವೀಕರಿಸಿ ದೈವತ್ವದ ಸ್ಥಾನಕ್ಕೆ ಒಯ್ದು, ಸೃಷ್ಟಿಯಲ್ಲಿ ಸ್ತ್ರೀಗೆ ಮೊದಲ ಪೂಜೆ ಎಂದು ಶ್ಲಾಘಿಸಿಸುತ್ತೇವೆ. ಆದರೆ, ತೆರೆಮರೆಯಲ್ಲಿ ಹಿಯಾಳಿಸಲಾಗುತ್ತದೆ. ಮಹಿಳೆಯ ವೈಭವೀಕರಣವನ್ನು ಬದಿಗಿರಿಸಿ ಗಂಡು–ಹೆಣ್ಣು ಸಮಾನರು ಎಂಬ ಗೌರವ ಭಾವನೆ ಇರಿಸಿಕೊಂಡರೆ ಸಾಕು’ ಎಂದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಪರಿಸ್ಥಿತಿ ಈಗ ಇಲ್ಲ. ಕಾಲಾನುಕ್ರಮೇಣ ಮಹಿಳೆಯರಿಗೆ ಗೌರವ, ಅಧಿಕಾರ, ಅಂತಸ್ತು ಸಿಕ್ಕಿವೆ. ಇನ್ನಷ್ಟು ಸ್ಥಾನಮಾನ ಲಭಿಸಬೇಕಿದೆ. ಅದಕ್ಕಾಗಿ ಮಹಿಳೆಯರ ಧ್ವನಿ ಗಟ್ಟಿಯಾಗಬೇಕು. ಒಳ್ಳೆಯವರೂ ಎಚ್ಚರವಾಗಿ ತಮ್ಮ ಸುತ್ತಲಿನ ಪರವಾಗಿ ಧ್ವನಿ ಎತ್ತಬೇಕಿದೆ’ ಎಂದರು.

‘ನಗರ, ಪಟ್ಟಣದಲ್ಲಿ ಮಹಿಳಾ ದಿನಾಚರಣೆಗಳು ನಡೆಯುತ್ತಿವೆ. ಆದರೆ, ಗ್ರಾಮೀಣ ಭಾಗದಲ್ಲಿ ಮಹಿಳೆಯರ ಸ್ಥಿತಿ ಇನ್ನು ಸುಧಾರಿಸಿಲ್ಲ. ಗ್ರಾಮೀಣ ಭಾಗಕ್ಕೆ ತೆರಳಿ ಮಹಿಳೆಯರ ಕಾನೂನು ಮತ್ತು ಹಕ್ಕುಗಳ ಬಗ್ಗೆ ತಿಳಿಸಿ, ಅವರ ಕಷ್ಟಗಳಿಗೆ ಸ್ಪಂದಿಸಬೇಕಿದೆ’ ಎಂದರು.

ಪತಿಯ ಅಧಿಪತ್ಯ: ‘ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಅಧ್ಯಕ್ಷರ ಪತಿಯ ಅಧಿಪತ್ಯ ತಡೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ಅಧ್ಯಕ್ಷೆ ಆದವರು ಗಟ್ಟಿಯಾಗಿ ಧ್ವನಿ ಎತ್ತಬೇಕು. ನನಗೂ ತಿಳಿವಳಿಕೆ ಇದೆ. ನನ್ನ ಅಧಿಕಾರದಲ್ಲಿ ಮಧ್ಯೆ ಪ್ರವೇಶಿಸದಂತೆ ಪತಿಗೆ ತಾಕೀತು ಮಾಡಬೇಕು. ಇದಕ್ಕೂ ಬೆಲೆ ಕೊಡದಿದ್ದರೆ ಗ್ರಾಮದ ಎಲ್ಲ ಮಹಿಳೆಯರೂ ಒಗ್ಗೂಡಿ ಹೋರಾಟ ಮಾಡಬೇಕು’ ಎಂದು ಸಂವಾದದಲ್ಲಿ ಉತ್ತರಿಸಿದರು.

ಸಾಕ್ಷಿಗಳ ಮೇಲೆ ದಬ್ಬಾಳಿಕೆ: ‘ಕೌಟುಂಬಿಕ, ಮದುವೆಯಂತಹ ಕೆಲವು ಕಾರಣಗಳಿಗೆ ಮಹಿಳೆಯ ಮೇಲಿನ ಅತ್ಯಾಚಾರದ ಬಹುತೇಕ ಪ್ರಕರಣಗಳು ನ್ಯಾಯಾಲಯದ ಅಂಗಳಕ್ಕೆ ಬರುವುದಿಲ್ಲ. ಕೆಲವು ಪ್ರಕರಣಗಳಿಗೆ ಸಾಕ್ಷಿಗಳು ಸಿಗುವುದಿಲ್ಲ. ಸಾಕ್ಷಿ ಸಿಕ್ಕರೂ ಅವರ ಮೇಲೆ ದಬ್ಬಾಳಿಕೆ ನಡೆಯುತ್ತದೆ’ ಎಂದು ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಬೇಸರ ವ್ಯಕ್ತಪಡಿಸಿದರು.

‘ನ್ಯಾಯಾಲಯಕ್ಕೆ ಸಾಕ್ಷಿ, ಆಧಾರ ಮುಖ್ಯವಾಗುತ್ತದೆ. ಆಧಾರ ಇಲ್ಲದೆ ಶಿಕ್ಷೆ ಕೊಡಲು ಆಗುವುದಿಲ್ಲ’ ಎಂದರು.

ಗೊಂದಲ ಸೃಷ್ಟಿಸಿದ ‘ರಾಷ್ಟ್ರಪತಿ’ ಪ್ರಶ್ನೆ

ಶಿವರಾಜ ಅಂಡಗಿ ಅವರು ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತಿ’ ಎಂದು ಕರೆಯುವುದರ ಕುರಿತು ಕೇಳಿದ ಪ್ರಶ್ನೆಯಿಂದ ಸಂವಾದದಲ್ಲಿ ಗೊಂದಲ ಉಂಟಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ನ್ಯಾ. ಡಾ. ಶಿವರಾಜ ಪಾಟೀಲ ಅವರು, ‘ಅದು ಸಾಂವಿಧಾನಿಕ ಹುದ್ದೆಯ ಹೆಸರು ಕಾಲಾನುಕ್ರಮೇಣ ಮುಂದೆ ಬದಲಾಗಬಹುದು’ ಎಂದರು.

ಶಿವರಾಜ ಅಂಡಗಿ ಅವರ ಪ್ರಶ್ನೆಗೆ ಕೆಲವು ಮಹಿಳೆಯರು ಆಕ್ಷೇಪ ಎತ್ತಿ, ‘ರಾಷ್ಟ್ರಪತಿ ಬಗೆಗಿನ ಈ ಪ್ರಶ್ನೆ ಕೆಲವು ಪರುಷರಲ್ಲಿನ ಮನಸ್ಥಿತಿ ಏನು ಎಂಬುದನ್ನು ಸೂಚಿಸುತ್ತದೆ’ ಎಂದರು.

ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗೌರವ ಕಾರ್ಯದರ್ಶಿಗಳಾದ ಯಶವಂತರಾಯ ಅಷ್ಟಗಿ, ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಮಹಿಳಾ ಸಂಘಟಕಿ ರೇಣುಕಾ ಸರಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT