ಶನಿವಾರ, ಫೆಬ್ರವರಿ 4, 2023
28 °C

ಏಡ್ಸ್ ಹರಡುವಿಕೆ ತಡೆಗೆ ಜಾಗೃತಿ ಅಗತ್ಯ; ಸುಶಾಂತ ಎಂ.ಚೌಗಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಭಯಾನಕ ಏಡ್ಸ್ ರೋಗ ತಡೆಗಟ್ಟಲು ಗ್ರಾಮೀಣ ಭಾಗದಲ್ಲಿ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿ
ಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ ಎಂ. ಚೌಗಲೆ ಹೇಳಿದರು.

ಇಲ್ಲಿನ ಹಳೆಯ ಜಿಲ್ಲಾ ಪಂಚಾಯಿತಿ ಕಟ್ಟಡದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ನಿಯಂತ್ರ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೆಡ್‍ರಿಬ್ಬನ್ ಕ್ಲಬ್‍, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಎನ್‌ಎಸ್‌ಎಸ್ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.

‘ನಮ್ಮನ್ನು ನಾವು ಪರೀಕ್ಷೆಗೆ ಒಳಪಡಿಸಿಕೊಂಡು ಎಚ್‌ಐವಿ ಕೊನೆಗೊಳಿಸಲು ಸಮಾನತೆ ಸಾಧಿಸುವುದು ವಿಶ್ವ ಏಡ್ಸ್ ದಿನದ ಘೋಷ ವಾಕ್ಯವಾಗಿದೆ’ ಎಂದರು.

ವಿಭಾಗೀಯ ಜಂಟಿ ನಿರ್ದೇಶಕರ ಕಚೆರಿಯ ಸಹ ನಿರ್ದೇಶಕ ಡಾ. ಶಂಕ್ರಪ್ಪ ಮೈಲಾರಿ ಮಾತನಾಡಿ, ‘ಮಕ್ಕಳು ದುಶ್ಚಟಗಳಿಂದ ಹಾಳಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕಿದೆ’ ಎಂದು ಸಲಹೆ ನೀಡಿದರು.

‘ಉತ್ತರ ಕರ್ನಾಟಕದಲ್ಲಿ ಏಡ್ಸ್ ರೋಗದಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ನಮ್ಮ ಆಸ್ಪತ್ರೆಗಳಲ್ಲಿ ಗರ್ಭಣಿಯರಿಗೆ ಏಡ್ಸ್ ರೋಗ ತಪಾಸಣೆಗೆ ಒಳಪಡಿಸಿದಾಗ 50,000 ಮಹಿಳೆಯರಲ್ಲಿ ಕೇವಲ 24 ಜನರಿಗೆ ಮಾತ್ರ ಎಚ್ಐವಿ  ಪತ್ತೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ತಪಾಸಣೆ ಮಾಡಿಕೊಳ್ಳಬೇಕು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಶೇಖರ ಮಾಲಿ ಮಾತನಾಡಿ, ಕೇಂದ್ರ ಸರ್ಕಾರವು 2025ಕ್ಕೆ ಟಿಬಿ ಹಾಗೂ 2030ಕ್ಕೆ  ಏಡ್ಸ್‌ ರೋಗ ಮುಕ್ತದ ಗುರಿ ಹಾಕಿಕೊಂಡಿದೆ’ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆ ಎಆರ್‌ಟಿ ಕೇಂದ್ರದ ಡಾ. ರೀಮಾ ಹರವಾಳ್ ಅವರು ಉಪನ್ಯಾಸ ನೀಡಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಚಂದ್ರಕಾಂತ ನರಬೋಳ, ಆರ್‌ಸಿಎಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಕಾಲರಾ ನಿರ್ಮೂಲನಾಧಿಕಾರಿ ಡಾ. ವಿವೇಕ
ನಾಂದ ರೆಡ್ಡಿ, ಆರೋಗ್ಯ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ, ಡಿಎಲ್‌ಒ ಅಧಿಕಾರಿ ಡಾ. ರಾಜುಕುಮಾರ ಪಾಟೀಲ, ಜಿಲ್ಲಾ ಮೇಲ್ವಿಚಾರಕ ಸೋಮಶೇಖರ ಪಾಟೀಲ, ಮಂಜುನಾಥ ಕಂಬಳಿಮಠ, ಅರ್ಚನಾ ಅಣವೇಕರ್, ಜಿಮ್ಸ್ ನರ್ಸಿಂಗ ಕಾಲೇಜಿನ ವಿದ್ಯಾರ್ಥಿಗಳು ಹಾಗು ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಏಡ್ಸ್ ನಿಯಂತ್ರಣಕ್ಕೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಸಿಬ್ಬಂದಿ ಹಾಗೂ ಸಂಘ ಸಂಸ್ಥೆಯ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆಸ್ಪತ್ರೆಯಿಂದ ಹಳೆಯ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ನಡೆದ ಜಾಗೃತಿ ಜಾಥಾದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಏಡ್ಸ್‌ ಜಾಗೃತಿ ಸಂದೇಶದ ನಾಮ ಫಲಕಗಳು ಹಿಡಿದು ಸಾಗಿದರು.

ಜಗತ್ ವೃತ್ತದಲ್ಲಿ ಬೀದ ನಾಟಕ ಪ್ರದರ್ಶನ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು