ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿಯಲ್ಲಿ ಯಾಜ್ಞವಲ್ಕ್ಯ ಅನುಯಾಯಿಗಳ ಸಮ್ಮೇಳನ

Published 1 ಜುಲೈ 2024, 5:53 IST
Last Updated 1 ಜುಲೈ 2024, 5:53 IST
ಅಕ್ಷರ ಗಾತ್ರ

ಕಲಬುರಗಿ: ‘ಯಾಜ್ಞವಲ್ಕ್ಯ ಮಹರ್ಷಿಗಳಲ್ಲಿನ ಜ್ಞಾನ ಹಾಗೂ ಸಮಾಜಕ್ಕೆ ಅವರ ನೀಡಿದ ಕೊಡುಗೆಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಲು ಹುಬ್ಬಳ್ಳಿಯಲ್ಲಿ ನವೆಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಯಾಜ್ಞವಲ್ಕ್ಯ ಮಹರ್ಷಿ ಅನುಯಾಯಿಗಳ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಹುಬ್ಬಳ್ಳಿ ಯೋಗೀಶ್ವರ ಸೇವಾ ಟ್ರಸ್ಟ್ ಪ್ರಮುಖರಾದ ಸತ್ಯನಾರಾಯಣ ಮರಟಗೇರಿ ಹೇಳಿದರು.

ನಗರದ ಸಂಗಮೇಶ್ವರ ಬಡಾವಣೆಯ ಸೂರ್ಯನಾರಾಯಣ ದೇವಸ್ಥಾನದ ಯಾಜ್ಞವಲ್ಕ್ಯ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಯಾಜ್ಞವಲ್ಕ್ಯ ಮಹರ್ಷಿಗಳು ಕೇವಲ ವಿಪ್ರರಿಗೆ ಮಾತ್ರವಲ್ಲದೆ ಇಡೀ ಮನುಕುಲದ ಕಲ್ಯಾಣಕ್ಕಾಗಿ ವೇದ, ಉಪನಿಷತ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸೂರ್ಯನಿಂದ ಪಡೆದ ಬ್ರಹ್ಮಜ್ಞಾನವನ್ನು ಮನಕುಲದ ಒಳಿತಿಗಾಗಿ ನೀಡಿದ್ದಾರೆ. ಸಪ್ತ ಋಷಿಗಳು ಕೂಡ ಬ್ರಹ್ಮ ಜ್ಞಾನವನ್ನು ಯಾಜ್ಞವಲ್ಕ್ಯರಲ್ಲಿ ಪಡೆದಿದ್ದರು’ ಎಂದರು.

‘ಬ್ರಾಹ್ಮಣರೆಲ್ಲರೂ ಯಾಜ್ಞವಲ್ಕ್ಯ ಅನುಯಾಯಿಗಳು. ನಮ್ಮೆಲ್ಲರ ಸಂಪ್ರದಾಯಗಳು ಯಾಜ್ಞವಲ್ಕ್ಯರಿಂದಲೇ ಆರಂಭವಾಗುತ್ತವೆ. ಹಳ್ಳಿಯಿಂದ ದಿಲ್ಲಿಯವರೆಗೂ ಯಾಜ್ಞವಲ್ಕ್ಯರ ಜಯಂತಿಯನ್ನು ಆಚರಿಸುತ್ತೇವೆ. ಅವರ ಕೊಡುಗೆಗಳನ್ನು ಸಮಾಜಕ್ಕೆ ತಲುಪಿಸಲು ರಾಜ್ಯಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.

ಯಾಜ್ಞವಲ್ಕ್ಯ ಸಮಿತಿಯ ಜಿಲ್ಲಾ ಅಧ್ಯಕ್ಷ ಮಲ್ಹಾರಾವ ಕುಲಕರ್ಣಿ ಗಾರಂಪಳ್ಳಿ ಮಾತನಾಡಿ, ‘ಜಿಲ್ಲೆಯ ವಿಪ್ರರೆಲ್ಲರೂ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಕ್ತಿಯಿಂದ ಭಾಗಿಯಾಗುತ್ತಾರೆ. ಧರ್ಮ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ’ ಎಂದರು.

ಶಾಮಾಚಾರ್ಯ ಬೈಚಬಾಳ್ ಮಾತನಾಡಿ, ‘ಧರ್ಮ ಜಾಗೃತಿಗೊಳಿಸುವ, ಮಹಾಋಷಿಗಳ ಮಹಿಮೆ ಹಾಗೂ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವ ಸಮ್ಮೇಳನ ಆಯೋಜಿಸುತ್ತಿರುವುದು ಸ್ವಾಗತಾರ್ಹ’ ಎಂದು ಬಣ್ಣಿಸಿದರು.

ಸಭೆಯಲ್ಲಿ ಪ್ರಮುಖರಾದ ಅಶೋಕ ಮಳ್ಳಿ, ಭೀಮರಾವ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಭೀಮಸೇನರಾವ ಸಿಂಧಗೇರಿ, ವಾಸುದೇವರಾವ ಕುಳಗೇರಿ, ಅನಿಲ್ ಕುಲಕರ್ಣಿ, ಮಂಜುನಾಥ್ ಕುಲಕರ್ಣಿ, ಶ್ರೀರಾಮಾಚಾರ, ದಯಾಘನ್ ಧಾರವಾಡ್ಕರ್, ಪ್ರಾಣೇಶ ಕುಲಕರ್ಣಿ, ಜನಾರ್ಧನ್ ಕುಲಕರ್ಣಿ, ಮಾರುತಿ ಕುಲಕರ್ಣಿ, ಸತ್ಯನಾರಾಯಣ ಜೋಶಿ, ಲಕ್ಷ್ಮಿ ಕುಲಕರ್ಣಿ, ಅಂಬುಜಾ ಸಿಂಧಗೇರಿ, ಶೀಲಾ ಜೋಶಿ ಉಪಸ್ಥಿತರಿದ್ದರು.

ಯಾಜ್ಞವಲ್ಕ್ಯ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ವಕೀಲ್ ಸ್ವಾಗತಿಸಿದರು, ವಿನುತ ಜೋಶಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT