ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಜಿಲ್ಲೆಯಲ್ಲಿ 36,543 ಹೊಸ ಮತದಾರರು

ಚಿತ್ತಾಪುರದಲ್ಲಿ ಅತ್ಯಧಿಕ 4,712, ಕಲಬುರಗಿಯಲ್ಲಿ ಅತಿ ಕಡಿಮೆ 3,773 ಹೊಸ ಮತದಾರರು
Published 17 ಏಪ್ರಿಲ್ 2024, 5:31 IST
Last Updated 17 ಏಪ್ರಿಲ್ 2024, 5:31 IST
ಅಕ್ಷರ ಗಾತ್ರ

ಕಲಬುರಗಿ: ಮತದಾರರ ಪಟ್ಟಿಯ ಮಾಹಿತಿ ಪ್ರಕಾರ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಗುರುಮಠಕಲ್ ಹೊರತುಪಡಿಸಿ 28,437 ಹೊಸ ಮತದಾರರು ನೋಂದಣಿ ಆಗಿದ್ದಾರೆ. ನೋಂದಣಿ ಪ್ರಕ್ರಿಯೆಯು ಇನ್ನೂ ಪ್ರಗತಿಯಲ್ಲಿದ್ದು, ಇಡೀ ಜಿಲ್ಲೆಯಲ್ಲಿ ಹೊಸದಾಗಿ 36,543 ಮತದಾರರು ಸೇರ್ಪಡೆಯಾಗಿದ್ದಾರೆ.

ಲೋಕಸಭಾ ಕ್ಷೇತ್ರಕ್ಕೆ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಸೇಡಂ, ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ ಹಾಗೂ ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಆಳಂದ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳು ಬೀದರ್ ಸಂಸತ್ ಕ್ಷೇತ್ರಕ್ಕೆ ಹೋಗುತ್ತವೆ. ಈ ಎರಡೂ ಕ್ಷೇತ್ರಗಳಲ್ಲಿ ಕ್ರಮವಾಗಿ 4,334 ಹಾಗೂ 3,771 ಯುವ ಮತದಾರರು ಇದ್ದಾರೆ.

ಎಂಟು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲು 15,970 ‍ಯುವಕರು, 12,462 ಯುವತಿಯರು ಹಾಗೂ ಐವರು ಲಿಂಗತ್ವ ಅಲ್ಪಸಂಖ್ಯಾತ ಮತದಾರರು ನೋಂದಣಿ ಆಗಿದ್ದಾರೆ. ಮೊದಲ ಬಾರಿ ಮತದಾನ ಮಾಡಲು ಕುತೂಹಲದಿಂದ ಕಾದಿದ್ದಾರೆ. ಗುರುಮಠಕಲ್ ಕ್ಷೇತ್ರದ ಯುವ ಮತದಾರರ ಪ್ರಮಾಣ ಲಭ್ಯವಾಗಿಲ್ಲ.

ಲಭ್ಯವಾದ 7 ಕ್ಷೇತ್ರಗಳ ಮಾಹಿತಿ ಅನ್ವಯ, ಚಿತ್ತಾಪುರ ಕ್ಷೇತ್ರದಲ್ಲಿ ಅತ್ಯಧಿಕ 4,712 ಯುವ ಮತದಾರರು ನೋಂದಣಿಯಾಗಿದ್ದಾರೆ. ಅತ್ಯಧಿಕ ಮತದಾರರ ಪ್ರಮಾಣದಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ 3,773 ಯುವ ಮತದಾರರು ನೋಂದಣಿಯಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಯುವಕ ಮತದಾರರ ನೋಂದಣಿ ಎರಡು ಸಾವಿರ ಮೇಲಿದ್ದರೆ, ದಕ್ಷಿಣದಲ್ಲಿ 1,954ರಷ್ಟು ಇದ್ದಾರೆ.

ಅತಿ ಕಡಿಮೆ ಮಹಿಳಾ ಯುವ ಮತದಾರರ ಪ್ರಮಾಣವು ಜೇವರ್ಗಿ (1,531) ಕ್ಷೇತ್ರದಲ್ಲಿ ಇದ್ದರೆ, ಅತಿ ಹೆಚ್ಚು ನೋಂದಣಿಯು ಚಿತ್ತಾಪುರ ಕ್ಷೇತ್ರದಲ್ಲಿ (1,967) ಆಗಿದೆ. ನಂತರದ ಸ್ಥಾನ ಕಲಬುರಗಿ ಗ್ರಾಮೀಣ ಕ್ಷೇತ್ರ (1,918) ಪಡೆದಿದೆ. ಮತದಾನ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಯುವ ಮತದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಹಲವು ಮಂದಿ ಅರ್ಜಿ ನೋಂದಣಿಗೆ 18 ವರ್ಷ ತುಂಬುವುದನ್ನೇ ಕಾಯುತ್ತಿದ್ದಾರೆ. 2024ರ ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸುತ್ತಿದೆ. ಅಂತಿಮ ಮತದಾರರ ಪಟ್ಟಿ ಮುಂದಿನ ಕೆಲವು ವಾರಗಳಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.

ರಾಜಕೀಯ ಪಕ್ಷಗಳ, ಅಭ್ಯರ್ಥಿಗಳು ಹೊಸ ಹಾಗೂ ಯುವ ಮತದಾರರ ಮೇಲೆ ಕಣ್ಣು ನೆಟ್ಟು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಯುವಕರನ್ನು ಸೆಳೆದು, ಮತ ಫಸಲು ತೆಗೆಯಲು ನಾನಾ ಬಗೆಯ ಕಸರತ್ತು ನಡೆಸುತ್ತಿದ್ದಾರೆ. ಯುವ ಮತದಾರರ ನಾಡಿ ಮಿಡಿತ ಅರಿಯು ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ.

ಮಲ್ಲಪ್ಪ ಪೂಜಾರಿ
ಮಲ್ಲಪ್ಪ ಪೂಜಾರಿ

ಚುನಾವಣೆ ವ್ಯವಸ್ಥೆಯು ಅಭಿವೃದ್ಧಿ ವಿಷಯಾಧಾರಿತ ಇರದೆ ಧರ್ಮ ಜಾತಿ ಆಧಾರಿತ ಚುನಾವಣೆಯಾಗಿದೆ. ಯುವ ಮತದಾರರು ಅಭಿವೃದ್ಧಿಯ ದೂರ ದೃಷ್ಟಿಯುಳ್ಳ ವ್ಯಕ್ತಿಯ ಆಯ್ಕೆಗೆ ಒತ್ತುಕೊಡಬೇಕು

–ಮಲ್ಲಪ್ಪ ಪೂಜಾರಿ ಕಾಲೇಜು ವಿದ್ಯಾರ್ಥಿ

ಯುವ ಮತದಾರರಿಗೆ ಗಾಳ

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಐಟಿ ಸೆಲ್‌ಗಳು ಯುವ ಮತದಾರರನ್ನು ಸೆಳೆಯಲು ಸಾಮಾಜಿಕ ಜಾಲತಾಣವನ್ನು ಗರಿಷ್ಠವಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಬಿಜೆಪಿ ಐಟಿ ಸೆಲ್‌ ತಮ್ಮ ಸರ್ಕಾರದ ಯೋಜನೆಗಳ ಹೈಲೈಟ್‌ಗಳ ಕುರಿತ ಕಿರು ವಿಡಿಯೊ ತುಣುಕುಗಳು ಇನ್ಫೋಗ್ರಾಫಿಕ್ಸ್‌ ಪೋಸ್ಟರ್‌ಗಳು ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ವಾಟ್ಸ್‌ಆ್ಯಪ್‌ ‘ಎಕ್ಸ್‌’ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿವೆ. ಶಿಕ್ಷಣ ಆರೋಗ್ಯ ಸಂವಹನ ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಕಿರು ವಿಡಿಯೊಗಳು ಓಡಾಡುತ್ತಿವೆ. ಕಾಂಗ್ರೆಸ್ ಇದಕ್ಕೆ ತಿರುಗೇಟು ಎಂಬಂತೆ ಕಳೆದು 10 ವರ್ಷಗಳ ಅವಧಿಯಲ್ಲಿ ನಿರುದ್ಯೋಗ ಹಣದುಬ್ಬರ ಬೆಲೆ ಏರಿಕೆ ಅನುದಾನ ಹಂಚಿಕೆಯ ತಾರತಮ್ಯ ಈ ಹಿಂದೆ ನೀಡಿದ್ದ ಭರವಸೆಗಳನ್ನು ಮುಂದಿಟ್ಟುಕೊಂಡು ಇದೇ ಕಿರು ವಿಡಿಯೊಗಳ ಕೊಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT