ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡ ರಸ್ತೆಗಳಲ್ಲಿ ‘ಕಾನ್ವೆಕ್ಸ್‌ ಮಿರರ್‌’

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಪ್ರಮುಖ ರಸ್ತೆಗಳನ್ನು ಕೂಡುವ ಅಡ್ಡ ರಸ್ತೆಗಳಿಗೆ ಬಿಂಬ ಪ್ರತಿಫಲನ ನಿಲುವು ಕನ್ನಡಿಗಳನ್ನು (ಕಾನ್ವೆಕ್ಸ್‌ ಮಿರರ್‌) ಅಳವಡಿಸಲಾಗಿದೆ. ಇದನ್ನು ವಾಹನ ಚಾಲಕರು ಗಂಭೀರವಾಗಿ ಗಮನಿಸಿದರೆ ಅಪಘಾತಗಳನ್ನು ತಡೆಯಲು ಅನುಕೂಲವಾಗಲಿದೆ.

ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅಡ್ಡ ರಸ್ತೆಗಳಿಂದ ಮುಖ್ಯ ರಸ್ತೆಗೆ ಬರುವ ವಾಹನಗಳನ್ನು ಗಮನಿಸುವುದಿಲ್ಲ. ಈ ಸಂದರ್ಭ ಅಪಘಾತಗಳು ಸಂಭವಿಸಿ ಪ್ರಾಣಾಪಾಯ ಆಗುವ ಸಾಧ್ಯತೆಗಳಿವೆ. ಈ ಬಿಂಬ ಪ್ರತಿಫಲನ ನಿಲುವು ಕನ್ನಡಿಗಳನ್ನು ಬಳಕೆ ಮಾಡುವುದರಿಂದ ಎಡ ಮತ್ತು ಬಲದಿಂದ ಬರುತ್ತಿರುವ ವಾಹನಗಳನ್ನು ಗುರುತಿಸಲು ಸಹಾಯವಾಗುತ್ತದೆ ಎನ್ನುತ್ತಾರೆ ಪೊಲೀಸರು.

ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯ ಅನುದಾನದಲ್ಲಿ ಈ ನಿಲುವು ಕನ್ನಡಿಗಳನ್ನು ಖರೀದಿಸಲಾಗಿದೆ. ನಗರದ ಸ್ಟೇಷನ್‌ ಬಜಾರ್‌ ರಸ್ತೆ ಸೇರಿದಂತೆ ಪ್ರಮುಖ 24 ಸ್ಥಳಗಳಲ್ಲಿ ಇವುಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಕಾನ್ವೆಕ್ಸ್‌ ಮಿರರ್‌ಗೆ ₨6 ಸಾವಿರ ವೆಚ್ಚವಾಗಿದೆ. ಕಳೆದ 2 ತಿಂಗಳಿಂದ ಇವುಗಳನ್ನು ಅಳವಡಿಸಲಾಗುತ್ತಿದೆ. 2ನೇ ಹಂತದಲ್ಲಿ ಮತ್ತಷ್ಟು ಸ್ಥಳಗಳಲ್ಲಿ ಬಿಂಬ ಪ್ರತಿಫಲನ ಕನ್ನಡಿ ಅಳವಡಿಸಲು ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದೆ.

‘ನಗರದ ಪ್ರಮುಖ ಎಲ್ಲ ಸ್ಥಳಗಳಲ್ಲಿ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲು ಸಾಧ್ಯವಿಲ್ಲ. ಚಾಲಕರು ಜಾಗ್ರತೆಯಿಂದ ವಾಹನ ಚಲಾಯಿಸಿದರೆ ಅಪಘಾತಗಳನ್ನು ತಡೆಯಬಹುದು. ಈಗ ಅಳವಡಿಸಿರುವ ಕನ್ನಡಿಗಳನ್ನು ಗಮನಿಸಿದರೆ, ಸವಾರರು ತಮ್ಮ ಮೂರೂ ಬದಿಯಿಂದ ಬರುತ್ತಿರುವ ವಾಹನಗಳನ್ನು ಗುರುತಿಸಬಹುದು. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ’ ಎಂದು ನಗರ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ಡಿ.ಟಿ.ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಮೂರು ರಸ್ತೆಗಳು ಕೂಡುವ ಪ್ರಮುಖ ಸ್ಥಳಗಳಲ್ಲಿ ಬಿಂಬ ಪ್ರತಿಫಲನ ಕನ್ನಡಿಗಳನ್ನು ಅಳವಡಿಸಲಾಗಿದೆ. ಇನ್ನೂ ಹಲವೆಡೆ ಅಳವಡಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಎಚ್‌ಕೆಆರ್‌ಡಿಬಿಯಿಂದ ಅನುದಾನ ಕೋರಲಾಗಿದೆ. ಎಲ್ಲ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಾಧ್ಯವಿಲ್ಲ. ಇದನ್ನು ವಾಹನ ಸವಾರರು ಗಮನಿಸಿದರೆ ಅದರ ಪ್ರಾಮುಖ್ಯತೆಯ ಅರಿವಾಗುತ್ತದೆ ಎಂದು ಹೇಳಿದರು.

ನಗರದ ಪ್ರಮುಖ ಸ್ಥಳಗಳಲ್ಲಿ ನಗರೋತ್ಥಾನ ಯೋಜನೆಯಡಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅಲ್ಲದೆ ನಗರ ಪಾಲಿಕೆ ಮುಂಭಾಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಸ್ತೆಯ ಮಾರ್ಗಗಳ ಬಗ್ಗೆ ಮಾಹಿತಿ ಇರುವ ಎಲೆಕ್ಟ್ರಾನಿಕ್‌ ಡಿಸ್‌ಪ್ಲೇ ಫಲಕ ಅಳವಡಿಸಲು ಎಚ್‌ಕೆಆರ್‌ಡಿಬಿಯಿಂದ ಅನುದಾನ ಕೋರಲಾಗಿದೆ ಎಂದು ಅವರು ತಿಳಿಸಿದರು.

‘ನಗರದ ವಾಹನ ಸವಾರರಲ್ಲಿ ಸಂಚಾರ ನಿಯಮಗಳ ಅರಿವಿನ ಕೊರತೆ ಇದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸ್‌ ಇಲಾಖೆ ಒಂದರಿಂದಲೇ ಜನರಿಗೆ ಅರಿವು ಮೂಡಿಸುವುದು ಕಷ್ಟಸಾಧ್ಯ. ಇದಕ್ಕೆ ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ. ವಾಹನಗಳನ್ನು ಪರಿಶೀಲಿಸಿ ದಂಡ ವಿಧಿಸುವುದರಿಂದಲೇ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT