ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪ’ ಪುತ್ರನ ಸಂಭ್ರಮದ ‘ಪುರ’ ಪ್ರವೇಶ

Last Updated 10 ನವೆಂಬರ್ 2017, 8:30 IST
ಅಕ್ಷರ ಗಾತ್ರ

ಕಲಬುರ್ಗಿ: ಪುತ್ರನೊಂದಿಗೆ ಮೊದಲ ಬಾರಿಗೆ ‘ಪುರ’ ಪ್ರವೇಶ ಮಾಡಿದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಹಾಗೂ ದಾಕ್ಷಾಯಣಿ ದಂಪತಿಗೆ ಭಕ್ತರು ಗುರುವಾರ ಭವ್ಯ ಸ್ವಾಗತ ನೀಡಿದರು. ಶ್ರೀಗಳ ಗಂಡು ಸಂತಾನವನ್ನು ಭಕ್ತಸಮೂಹ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡಿತು.

ರಾತ್ರಿ 7 ಗಂಟೆಗೆ ಶರಣಬಸವಪ್ಪ ಅಪ್ಪ ದಂಪತಿಯನ್ನು ರೈಲು ನಿಲ್ದಾಣದಲ್ಲಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವ ವಿಶ್ವವಿದ್ಯಾಲಯದ ಕಾರ್ಯದರ್ಶಿ, ಕುಲಪತಿ, ಪದಾಧಿಕಾರಿಗಳು, ಸಂಸ್ಥೆಯ ಕಾಲೇಜುಗಳ ಸಿಬ್ಬಂದಿ ಮೊದಲ ಸ್ವಾಗತ ಕೋರಿದರು.

ರೈಲು ನಿಲ್ದಾಣದಿಂದ ದೇವಸ್ಥಾನದ ವರೆಗೆ ಅಲಂಕೃತ ವಾಹನದಲ್ಲಿ ಮೆರವಣಿ ಮಾಡಲಾಯಿತು. ಬೈಕ್ ರ್‍ಯಾಲಿ, ಕಲಾತಂಡಗಳು ಮೆರವಣಿಗೆಯಲ್ಲಿದ್ದವು. ಶರಣಬಸವಪ್ಪ ಅವರ ಪುತ್ರನನ್ನು ವೀಕ್ಷಿಸಲು ಕಾರು ಸಾಗಿದ ಮಾರ್ಗದಲ್ಲಿ ಸಾಕಷ್ಟು ಜನರು ನಿಂತಿದ್ದರು. ಗೋವಾ ಹೋಟೆಲ್‌ನಿಂದ ದೇವಸ್ಥಾನ ವರೆಗಿನ ಮಾರ್ಗದ ಉದ್ದಕ್ಕೂ ಪುಷ್ಪವೃಷ್ಟಿ ಆಯಿತು. ಕಾರು ಸಾಗುತ್ತಿದ್ದಂತೆ ‘ಶರಣ ಬಸವೇಶ್ವರ ಮಹಾರಾಜ್‌ ಕಿ ಜೈ’, ‘ದೊಡ್ಡಪ್ಪ ಅಪ್ಪ’ ಅವರಿಗೆ ಜಯವಾಗಲಿ, ‘ಭಾವಿ ಪೀಠಾಧಿಪತಿ’ಗೆ ಶುಭಾವಾಗಲಿ ಎಂದು ಜಯಘೋಷ ಮೊಳಗಿಸಿದದರು.

ಅತ್ತ ಮೆರವಣಿಗೆ ಆರಂಭವಾದರೆ, ಇತ್ತ ಮಠದ ಆವರಣದಲ್ಲಿ ಅಳವಡಿಸಿದ್ದ ಎಲ್‌ಸಿಡಿ ಪರದೆಯ ಮೇಲೆ ಈ ದೃಶ್ಯಾವಳಿಯನ್ನು ಭಕ್ತರು ಕಣ್ತುಂಬಿಕೊಡರು. ದೇಗುಲದ ಪ್ರವೇಶದ್ವಾರದಲ್ಲಿ ಕಾರಿಗೆ ಸಂಸ್ಥೆಯ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಗುಲಾಬಿ ದಳಗಳ ಮಳೆಗರೆದರು. ವಿವಿಧ ಮಠಾಧೀಶರು, ಮುಖಂಡರು ಕಾರಿಗೆ ಪುಷ್ಪ ಎರಚಿ ಆಶೀರ್ವದಿಸಿದರು. ಭಕ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ದೇಗುಲದಲ್ಲಿ ಸಡಗರ: ಅಪ್ಪ ಪುತ್ರನ ‘ಪುರ’ ಪ್ರವೇಶದ ಅಂಗವಾಗಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು. ದೇಗುಲಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಕಾರಂಜಿ, ಲಕ್ಷ್ಮದೀಪೋತ್ಸವ ಭಕ್ತರ ಮನಸೂರೆಗೊಂಡಿತು. ತಡರಾತ್ರಿ ವರೆಗೆ ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆಯಿಂದಲೇ ಶರಣಬಸವೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ 6ರಿಂದಲೇ ಭಕ್ತರ ದಂಡು ದೇವಸ್ಥಾನಕ್ಕೆ ಹರಿದುಬಂದಿತು.

ಜಾತ್ರೆಯ ನೆನಪು: ಸ್ವಾಗತ ಕಾರ್ಯಕ್ರಮಕ್ಕಾಗಿ ಕೆಲವು ದಿನಗಳಿಂದ ದೇವಸ್ಥಾನ ಆವರಣ, ಮಠವನ್ನು ಸಿಂಗರಿಸುವ ಕೆಲಸ ನಡೆದಿತ್ತು. ಅಪ್ಪನ ಗುಡಿಯ ಆವರಣದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಶರಣಬಸವಪ್ಪ ದಂಪತಿ ಕೆಲಕಾಲ ಪುತ್ರನೊಂದಿಗೆ ಆಸೀನರಾದರು. ಗಣ್ಯರು ಹಾಗೂ ಸ್ವಾಮೀಜಿಗಳಿಗಾಗಿ 500ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಡೊಳ್ಳು ಕುಣಿತ, ಗೀಗಿಪದ ಹಾಗೂ ಜನಪದ ಕಲಾತಂಡಗಳು ಪ್ರದರ್ಶನ ನೀಡಿದವು. ಇಡೀ ವಾತಾವರಣ ದೊಡ್ಡ ರಥೋತ್ಸವವನ್ನು ನೆನಪಿಸಿತು.

ಶರಣಬಸವಪ್ಪ ಅಪ್ಪ ಅವರು ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ. ಅವರ ಪುತ್ರ 9ನೇ ಪೀಠಾಧಿಪತಿಯಾಗಲಿರುವ ಹಿನ್ನೆಲೆಯಲ್ಲಿ ಭಕ್ತರಲ್ಲಿ ಹರ್ಷ ಮನೆ ಮಾಡಿತ್ತು. ಅವರ ಮೊದಲ ಪತ್ನಿ ಕೋಮಲಾತಾಯಿಗೆ ಐವರು ಹಾಗೂ ಎರಡನೇ ಪತ್ನಿ ದಾಕ್ಷಾಯಿಣಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನವೆಂಬರ್ 1ರಂದು ಶರಣಬಸವಪ್ಪ ಅಪ್ಪ ದಂಪತಿಗೆ ಗಂಡು ಮಗು ಜನಿಸಿತ್ತು. ಅಂದಿನಿಂದಲೇ ಭಕ್ತರು ಮಗುವಿನ ಮುಖ ನೋಡಲು ಕಾತರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT