ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯಕಟ್ಟಿನ ಸ್ಥಳದಲ್ಲಿ ನೌಕರರ ಠಿಕಾಣಿ!

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಯೋಜನಾ ವೃತ್ತ ಕಚೇರಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಕಚೇರಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದ 100ಕ್ಕೂ ಅಧಿಕ ಸಿಬ್ಬಂದಿ ತಳಯೂರಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಮುಖ ಹುದ್ದೆಗಳಲ್ಲಿರುವ ಕೆಲವು ಅಧಿಕಾರಿಗಳು 21 ವರ್ಷಗಳಿಂದ ಇದೇ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವುದು ಹಾಗೂ ಕೆಲವು ಅಧಿಕಾರಿಗಳು ನಿಯಮಬಾಹಿರವಾಗಿ ಈ ಕಚೇರಿಗೆ ನಿಯೋಜನೆ ಮೇಲೆ ಬಂದಿರುವುದು ಸಹ ಹಲವು ಸಂಶಯಗಳಿಗೆ ಕಾರಣವಾಗಿದೆ.

ಕೇವಲ ಮುನಿರಾಬಾದ್‌ನಲ್ಲಷ್ಟೇ ಅಲ್ಲದೇ, ವೃತ್ತ ಕಚೇರಿಯ ವ್ಯಾಪ್ತಿಗೆ ಒಳಪಡುವ ಸಿಂಧನೂರು, ಕುರುಗೋಡು, ವಡ್ಡರಹಟ್ಟಿ, ಬಳ್ಳಾರಿ, ಮಾನ್ವಿಕಚೇರಿಗಳ ಆಯಕಟ್ಟಿನ ಸ್ಥಳಗಳಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡರೆ ಅಂಥವರ ಸಂಖ್ಯೆ 200ರ ಗಡಿ ಮುಟ್ಟುತ್ತದೆ.

`ಪ್ರಜಾವಾಣಿ~ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ ತುಂಗಭದ್ರಾ ಯೋಜನಾ ವೃತ್ತ ಕಚೇರಿಯಲ್ಲಿ 10 ಜನ ಅಧಿಕಾರಿಗಳು 1981ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 13 ಜನ ಅಧಿಕಾರಿಗಳು 1982ರಿಂದ, 8 ಅಧಿಕಾರಿಗಳು 1983ರಿಂದ ಹಾಗೂ 11 ಅಧಿಕಾರಿಗಳು 1984ರಿಂದ ಇದೇ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾರೆ.

1985 ಹಾಗೂ 1986ರಿಂದ ತಲಾ 5 ಜನ ಅಧಿಕಾರಿಗಳು, 1995ರಿಂದ 7, 1998ರಿಂದ 3, 2000ನೇ ವರ್ಷದಿಂದ 4 ಜನ ಅಧಿಕಾರಿಗಳು ಇದೇ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು, 2002ರಿಂದ 5, 2003ರಿಂದ 8, 2004ರಿಂದ ಮೂವರು ಅಧಿಕಾರಿಗಳು ಸೇವೆಯಲ್ಲಿದ್ದಾರೆ.

ಇನ್ನೂ, ವಿಚಿತ್ರ ಎಂದರೆ, ತುಂಗಭದ್ರಾ ಕಾಡಾ ವ್ಯಾಪ್ತಿಯಲ್ಲಿ ಭೂ ಪುನರ್‌ಸುಧಾರಣಾ ಕಾಮಗಾರಿಗಾಗಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಟೆಂಡರ್ ಕರೆಯಲಾಗಿದೆ ಎಂದು ಮುನಿರಾಬಾದ್ ಮೂಲದ ಸಾಹಿತ್ಯ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ 20.7.2010ರಂದು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದು, ಈ ಸಂಬಂಧ ತನಿಖೆಗೆ ಸಹ ಆದೇಶಿಸಲಾಗಿದೆ.

ಕಾಡಾ ನಿಯಮಾವಳಿಯಂತೆ ಕೃಷಿ ಭೂ ಅಭಿವೃದ್ಧಿ ಅಧಿಕಾರಿ ಮಾತ್ರ ಭೂ ಪುನರ್‌ಸುಧಾರಣೆಗಾಗಿ ಟೆಂಡರ್ ಕರೆಯಬೇಕು. ಆದರೆ, 19.5.2010ರಂದು ತಾಂತ್ರಿಕ ವಿಭಾಗದ ಭೂ ಅಭಿವೃದ್ದಿ ಅಧಿಕಾರಿ ನಿಗದಿತ ಅವಧಿಗಿಂತ 7 ತಿಂಗಳು ಮುಂಚಿತವಾಗಿ ಟೆಂಡರ್ ಕರೆದಿರುವುದನ್ನು ವೇದಿಕೆಯ ಅಧ್ಯಕ್ಷ ಎಂ.ಆರ್.ವೆಂಕಟೇಶ ದೂರಿನಲ್ಲಿ ಪ್ರಶ್ನಿಸಿದ್ದಾರೆ.

ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ವಲಿಷಾ ಹಾಗೂ ಸಹಾಯಕ ಎಂಜಿನಿಯರ್ ಸೈಯದ್ ಷಂಷಾಲಂ ಕ್ರಮವಾಗಿ 1986 ಹಾಗೂ 1984ರಿಂದ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ, ಈ ಇಬ್ಬರ ನೇಮಕಾತಿಯೇ ಅಕ್ರಮ ಹಾಗೂ ಸಾಕಷ್ಟು ಭ್ರಷ್ಟಾಚಾರ ನಡೆಸಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತುಂಗಭದ್ರಾ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ದೂರು ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ್ ಈ ಇಬ್ಬರು ಅಧಿಕಾರಿಗಳ ನೇಮಕಾತಿ ಕುರಿತು ಸತ್ಯಾಸತ್ಯತೆ ತಿಳಿಯಲು ಭೂ ಅಭಿವೃದ್ಧಿ ಅಧಿಕಾರಿ ವಿ.ಆರ್.ಮುರಳೀಧರ್ ಅಧ್ಯಕ್ಷತೆಯಲ್ಲಿ 7.3.2011ರಂದು ಸಮಿತಿ ರಚನೆ ಮಾಡಿದ್ದು, ತನಿಖೆ ಸಹ ನಡೆದಿದೆ.

ಆಗ್ರಹ: ಈಚೆಗೆ ಡಿಡಿಪಿಐ, ಕಂದಾಯ ಕಚೇರಿ ಹಾಗೂ ಜಿಲ್ಲೆಯ 4 ಸ್ಥಳೀಯ ಸಂಸ್ಥೆಗಳಲ್ಲಿ 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಹುದ್ದೆಯಲ್ಲಿದ್ದ ನೌಕರರನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸ್ಥಳಾಂತರ ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ.

ಅದೇ ರೀತಿ ತುಂಗಭದ್ರಾ ಕಾಡಾ ಕಚೇರಿ, ಯೋಜನಾ ವೃತ್ತ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿರುವ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಿಬ್ಬಂದಿಯ ಸ್ಥಳಾಂತರಕ್ಕೆ ಶಿಫಾರಸು ಮಾಡಬೇಕು ಎಂದು ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಕವಲೂರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT