ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೆ ಸಿದ್ಧ

ಎಚ್.ಕೆ.ಆರ್.ಡಿ.ಬಿಯ ₹1.97 ಕೋಟಿ ಅನುದಾನದಲ್ಲಿ ಕಾಮಗಾರಿಚ
Last Updated 22 ಮೇ 2018, 8:39 IST
ಅಕ್ಷರ ಗಾತ್ರ

ಚಿತ್ತಾಪುರ: ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ₹1.97 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ಈ ಭಾಗದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಶಾಸಕ ಪ್ರಿಯಾಂಕ್ ಎಂ.ಖರ್ಗೆ  ಅನುದಾನ ಒದಗಿಸಿದ್ದರು. ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ತಾಲ್ಲೂಕು ಮಟ್ಟದಲ್ಲಿಯೇ ಉತ್ತಮ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ.

ಕ್ರೀಡಾಂಗಣದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಜಿಮ್ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಾಗತಕಾರರ ಕೊಠಡಿ, ಕ್ರೀಡಾಂಗಣದ ಕಚೇರಿ, ನಿರ್ವಹಣಾ ಕೊಠಡಿ, ಸಾಮಗ್ರಿ ಕೊಠಡಿ ಹಾಗೂ ಕ್ರೀಡಾ ವೀಕ್ಷಣೆಗೆ  ವೀಕ್ಷಕರ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಕೊನೆ ಹಂತಕ್ಕೆ ತಲುಪಿದ್ದು ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ.

ಷಟಲ್ ಬ್ಯಾಡ್ಮಿಂಟನ್ ಮೈದಾನ, ಟೇಬಲ್ ಟೆನ್ನಿಸ್ ಆಟಕ್ಕಾಗಿ ವಿಶೇಷ ಅಂಕಣದ ವ್ಯವಸ್ಥೆ ಮಾಡಲಾಗಿದೆ. ಚೆಸ್ ಮತ್ತು ಕೇರಂ ಅಂಕಣ. ವಿವಿಧ ಬಗೆಯ ಆಟ ಆಡಲು ಒಂದೇ ಕಡೆ ಯವಸ್ಥೆ ಮಾಡಿದ್ದರಿಂದ ಯುವ ಕ್ರೀಡಾ ಪ್ರತಿಭೆಗಳಿಗೆ ಅನುಕೂಲ ಆಗಲಿದೆ.

ಪಟ್ಟಣದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ, ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳ ಕ್ರೀಡಾಕೂಟ, ದಸರಾ ಕ್ರೀಡಾಕೂಟ ನಡೆಸಲು ಒಳಂಗಾಣ ಕ್ರೀಡಾಂಗಣದ ಕೊರತೆ ಇತ್ತು. ಇದನ್ನು ಅರಿತ ಶಾಸಕ ಪ್ರಿಯಾಂಕ್ ಅವರು ಅನುದಾನ ಕಲ್ಪಿಸಿ ತಾಲ್ಲೂಕು ಮಟ್ಟದ ಹೊರಾಂಗಣ ಕ್ರೀಡಾಂಗಣ ಮತ್ತು ಅಲ್ಲಿಯೇ ಒಳಾಂಗಣ ಕ್ರೀಡಾಂಗಣ ಕಾಮಗಾರಿ ತ್ವರಿತವಾಗಿ ನಡೆಯುವಂತೆ ಮಾಡಿದ್ದಾರೆ.

ಈ ಭಾಗದ ವಿದ್ಯಾರ್ಥಿಗಳಿಗೆ ಒಳಾಂಗಣ ಕ್ರೀಡೆಗಳ ಪರಿಚಯ ಅಷ್ಟಕಷ್ಟೆ. ಈಗ ಕ್ರೀಡಾಂಗಣ ನಿರ್ಮಾಣದಿಂದ ಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಅನುಕೂಲವಾಗಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಆಟದ ಮೈದಾನದ ಕೊರತೆಯಿಂದ ಕ್ರೀಡಾ ಕೂಟ ನಡೆಸಲು ತೀವ್ರ ಸಮಸ್ಯೆ ಆಗುತ್ತಿತ್ತು. ಬೇರೆ ಬೇರೆ ಸ್ಥಳದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದ ಕಾರಣ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಲೆದಾಡುವ ಪರಿಸ್ಥಿತಿ ಇತ್ತು. ಈಗ ಕ್ರೀಡಾಂಗಣ ನಿರ್ಮಾಣದಿಂದ ಎಲ್ಲಾ ಕ್ರೀಡೆಗಳು ಒಂದೇ ಕಡೆ ನಡೆಯಲಿವೆ ಎಂದು ತಾಲ್ಲೂಕು ಪ್ರಭಾರ ದೈಹಿಕ ಶಿಕ್ಷಣ ಅಧಿಕಾರಿ ದೇವಿಂದ್ರರೆಡ್ಡಿ ದುಗನೂರ ಹೇಳಿದ್ದಾರೆ.

ಮಲ್ಲಿಕಾರ್ಜುನ ಎಚ್. ಮುಡಬೂಳಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT