ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಾದೇಶಿಕ ಭಾಷೆಯೇ ಶ್ರೀಮಂತ'

ಅತಿಥಿಯೊಂದಿಗೆ ಮಾತುಕತೆ......
Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಸುಮಾರು ಆರು ದಶಕಗಳಿಂದ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ. ಯು.ಆರ್. ಅನಂತಮೂರ್ತಿ ಅವರು ಮಾತು ಸೋತ ಭಾರತದ ಅರಿವಿನ ಸಂಕೇತವಾಗಿದ್ದಾರೆ. ವಯಸ್ಸು ಹಾಗೂ ಬರಹ ಎರಡರಲ್ಲೂ ಮಾಗಿ ಬೆಳಗಿರುವ ಈ ಮೋಡಿಗಾರ ಇಂದಿಗೂ ತಮ್ಮ ಎಂದಿನ ನಗು, ಆಕರ್ಷಣೆಯನ್ನು ಉಳಿಸಿಕೊಂಡು ಬಂದಿದ್ದಾರೆ.

ಗುಲ್ಬರ್ಗದಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಮೊದಲ ಬಾರಿ ಗುಲ್ಬರ್ಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ `ಪ್ರಜಾವಾಣಿ' ಅವರನ್ನು ಮಾತಿಗೆಳೆಯಿತು. ಅದರ ಸಾರ ಇಲ್ಲಿದೆ.

ಪ್ರ.ವಾ: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಂಡು ಬರುವುದು ಹೇಗೆ?

ಅನಂತಮೂರ್ತಿ: ವಿಶ್ವವಿದ್ಯಾಲಯಗಳಿಗೆ ಶಿಕ್ಷಕರನ್ನು ನೇಮಿಸುವಾಗ ನಿಗಾವಹಿಸಿ ಆಯ್ಕೆ ಮಾಡಬೇಕು. ಶಿಕ್ಷಕರಿಗೆ ಸೆಮಿನಾರ್ ಏರ್ಪಡಿಸಿ ಅವರಿಗೆ ಒಂದು ವಿಷಯ ಕುರಿತು ಪ್ರಬಂಧ ಮಂಡಿಸಲು ಹೇಳಬೇಕು. ಆಯಾ ವಿಭಾಗದ ಮುಖ್ಯಸ್ಥರು ಹಾಗೂ ಇತರೆ ಸಹೋದ್ಯೋಗಿಗಳು ಕೂತು ಯಾರನ್ನು ಆಯ್ಕೆ ಮಾಡಬೇಕು ಎಂದು ಚರ್ಚಿಸಿ ಕೊನೆಯದಾಗಿ ಒಬ್ಬರನ್ನು ನೇಮಿಸಬೇಕು. ಅಂದಾಗ ಮಾತ್ರ ಅಂದುಕೊಂಡ ಗುರಿ ಸಾಧಿಸಬಹುದು. ಅಂದರೆ ಶಿಕ್ಷಕರ ಆಯ್ಕೆ ಕ್ರಮ ಬದಲಾಗಬೇಕು. ಮೀಸಲಾತಿ ವಿಷಯ ಬಂದಾಗ ಅದೇ ಜಾತಿಯ ಅಭ್ಯರ್ಥಿಗಳನ್ನು ಹೆಕ್ಕಿ ತೆಗೆಯಬೇಕು.

ಪ್ರ.ವಾ: ಜಾಗತೀಕರಣದ ಈ ಹಂತದಲ್ಲಿ ಕನ್ನಡದ ಭವಿಷ್ಯ ಹಾಗೂ ಪ್ರಸ್ತುತತೆ ಕುರಿತು?

ಅನಂತಮೂರ್ತಿ: ಕನ್ನಡಕ್ಕೆ ಖಂಡಿತ ಭವಿಷ್ಯ ಇದೆ. ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣ ಮೊದಲು ಜಾರಿಗೆ ತರಬೇಕು. ಕಾಳಿದಾಸ, ಕುಮಾರವ್ಯಾಸರಿಗೆ ಸಂಸ್ಕೃತ ಅಗತ್ಯವಿತ್ತು. ಅಂತಹ ಅಗತ್ಯ ಭಾಷೆಯಾಗಿ ಕನ್ನಡ ಬೆಳೆಯಬೇಕು. ಕರ್ನಾಟಕದಲ್ಲಿರುವ, ಬರುವ ಬಹುರಾಷ್ಟ್ರೀಯ ಕಂಪೆನಿಗಳು ಇತರ ಭಾಷೆಗಳ ಜೊತೆಗೆ ಕನ್ನಡವನ್ನೂ ಬಳಸಬೇಕು.

ಪ್ರ.ವಾ: ಕನ್ನಡ ಕಥಾ ಕ್ಷೇತ್ರದ ಬೆಳವಣಿಗೆ ಬಗ್ಗೆ?

ಅನಂತಮೂರ್ತಿ: ಕನ್ನಡದಲ್ಲಿ ತುಂಬಾ ಜನ ಕಥೆಗಾರರು ಇದ್ದಾರೆ. ಒಳ್ಳೆಯ ಕಥೆಗಳನ್ನೂ ಬರೆಯುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಆದರೆ ಅವರೆಲ್ಲರೂ ದ್ವೀಪಗಳಾಗಿದ್ದಾರೆ. ಆಗಾಗ ಒಂದೆಡೆ ಸೇರಿ ಕಥೆಯ ವಿಸ್ತಾರ, ಕಥಾ ಹಂದರ ಕುರಿತು ಚರ್ಚಿಸುವುದು ಕಡಿಮೆಯಾಗಿದೆ. ಅವರೆಲ್ಲರೂ ತಮ್ಮ ತಮ್ಮ ದ್ವೀಪಗಳಲ್ಲೇ ಬದುಕುವುದಕ್ಕಿಂತ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಬೇಕು. ಕಥೆಗಾರರು ಅಥವಾ ಲೇಖಕರು ಈ ರೀತಿ ದ್ವೀಪ ಆಗಬಾರದು.

ಪ್ರ.ವಾ: ಕನ್ನಡದ ಪ್ರಜ್ಞೆ ವಿಸ್ತರಣೆ ಹೇಗೆ?

ಅನಂತಮೂರ್ತಿ: ಕನ್ನಡಿಗರಿಗೆ ತಮ್ಮ ಪರಿಸರದ ಬಗ್ಗೆ ಗಾಢವಾದ ಪ್ರಜ್ಞೆ ಇರಬೇಕು. ವರಕವಿ ಬೇಂದ್ರೆಯವರು ಸಾಧನಕೇರಿಯಲ್ಲಿ ಇದ್ದುಕೊಂಡೇ ಈ ಸಾಧನೆ ಮಾಡಿದವರು. ಕನ್ನಡದ ಅಸ್ಮಿತೆಯನ್ನು ಉಳಿಸಿದವರು. ಓದುವ, ಬರೆಯುವ ಮೂಲಕ ಕನ್ನಡದ ಪ್ರಜ್ಞೆ ವಿಸ್ತಾರವಾಗಬಲ್ಲುದು.

ಪ್ರ.ವಾ: ಪ್ರಾದೇಶಿಕ -ಇಂಗ್ಲಿಷ್ ಭಾಷೆಗಳಲ್ಲಿನ ಗಟ್ಟಿತನದ ಬಗ್ಗೆ?

ಅನಂತಮೂರ್ತಿ: ಹಾಗೆ ನೋಡಿದರೆ ಪ್ರಾದೇಶಿಕ ಭಾಷೆಗಳಲ್ಲೇ ಶ್ರೀಮಂತಿಕೆ ಇದೆ. ಬಸವಣ್ಣ, ಕಾಳಿದಾಸ, ಕುಮಾರವ್ಯಾಸ ಮುಂತಾದವರು ಭಾರತೀಯ ಭಾಷೆಗಳಲ್ಲೇ ಬರೆಯುವ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದವರು. ಕನ್ನಡ, ಪಾಲಿ, ತೆಲುಗು, ಒರಿಯಾ ಮುಂತಾದ ಪ್ರಾದೇಶಿಕ ಭಾಷೆಗಳಲ್ಲೇ ಗಟ್ಟಿಯಾದ ಸಾಹಿತ್ಯ ಮೂಡಿ ಬಂದಿರುವುದು. ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಸಂವಹನಕ್ಕಾಗಿ ಅಗತ್ಯವಾಗಿ ಬಳಸಲೇಬೇಕು.

ಪ್ರ.ವಾ: ಕರ್ನಾಟಕ ಕೇಂದ್ರೀಯ ವಿವಿ ಹೇಗೆ ಬೆಳೆದು ನಿಲ್ಲಬೇಕು?

ಅನಂತಮೂರ್ತಿ: ಇದು ಕೇವಲ ಸ್ಥಳೀಯ ಆಗಬಾರದು. ಕನ್ನಡ ಹಾಗೂ ಕನ್ನಡೇತರ ಬೌದ್ಧಿಕ ಕ್ಷೇತ್ರದ ವಿಸ್ತಾರದಲ್ಲಿ ತೊಡಗಬೇಕು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕಟ್ಟಿದ ಡಿ.ಸಿ. ಪಾವಟೆ ಅವರು ಪ್ರಪಂಚದ ಎಲ್ಲರನ್ನು ಇಲ್ಲಿಗೆ ಕರೆ ತಂದರು. ಈ ಭಾಗದವರನ್ನೇ ನೇಮಕ ಮಾಡಬೇಕು ಎಂಬ ನಿಯಮ ಇಟ್ಟುಕೊಳ್ಳದೆ, ಈ ಭಾಗದವರಿಗೆ ಒಳ್ಳೆಯ ವಿದ್ಯಾಭ್ಯಾಸ ಒದಗಿಸುವಲ್ಲಿ ಶ್ರಮವಹಿಸಬೇಕು. ಅಂದಾಗ ಮಾತ್ರ ಒಂದು ವಿಶ್ವವಿದ್ಯಾಲಯ ಬೆಳೆಯಲು ಸಾಧ್ಯ.

ಪ್ರ.ವಾ: `ಸುರಗಿ'ಯ ನಂತರದ ತಮ್ಮ ಬರಹ?

ಅನಂತಮೂರ್ತಿ: ಸದ್ಯಕ್ಕಂತೂ ಅದನ್ನು ಬರೆದು ಮುಗಿಸಿದ್ದೇನೆ. ಬರೆಯುವ, ಬರೆಯಬಹುದಾದ ಅನೇಕ ಸಂಗತಿಗಳು ತಲೆಯಲ್ಲಿವೆ. ನಾನು ನಿಧಾನವಾಗಿ ಬರೆಯುವವ. ಅನಾರೋಗ್ಯದ ನಿಮಿತ್ತ ಸದ್ಯಕ್ಕೆ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT