ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ ಅಂಗಣಕ್ಕೆ ಹೊಸಸ್ಪರ್ಶ

ಅಂತರರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿ, ಆ. 16ರಿಂದ ರಾಜ್ಯಮಟ್ಟದ ಟೂರ್ನಿ
Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಹಾಗೂ ರಾಷ್ಟ್ರಮಟ್ಟದ ಟೂರ್ನಿಗಳ ಆತಿಥ್ಯ ವಹಿಸ ಲಿರುವ ನಗರವು ಈ ಸಂಬಂಧವಾಗಿ ಚಂದ್ರಶೇಖರ ಪಾಟೀಲ್‌ ಕ್ರೀಡಾಂಗಣದ ಒಳಾಂಗಣದಲ್ಲಿರುವ ಬ್ಯಾಡ್ಮಿಂಟನ್‌ ಅಂಗಣ ಭರದಿಂದ ಸಿದ್ಧಪಡಿಸುತ್ತಿದೆ.

ಆಗಸ್ಟ್‌ 16ರಿಂದ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ 2015 ಹಾಗೂ ಆಗಸ್ಟ್‌ 31ರಿಂದ ಸೆಪ್ಟಂಬರ್‌ 6ರ ವರೆಗೆ ನ್ಯಾಷನಲ್‌ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ನಡೆಯಲಿವೆ. ಎರಡನೇ ಬಾರಿಗೆ ರಾಜ್ಯಮಟ್ಟದ ಹಾಗೂ ಮೊದಲ ಬಾರಿಗೆ ನಡೆಯುತ್ತಿರುವ ರಾಷ್ಟ್ರ ಮಟ್ಟದ ಟೂರ್ನಿಗೆ ಎಚ್‌ಕೆ ಆರ್‌ಡಿಬಿ  ಹೆಚ್ಚಿನ ಅನುದಾನವನ್ನು ನೀಡಿದೆ.

ಹೊಸದಾಗಿ ಅಂದಾಜು ₹ 41 ಲಕ್ಷ ಮೌಲ್ಯದ ಯೋನೆಕ್ಸ್‌ ಕಂಪೆನಿಯ ಮ್ಯಾಟ್‌ಗಳನ್ನು ಹಾಕಲಾಗಿದೆ. ಇದು ಅಂತರಾಷ್ಟ್ರೀಯ ದರ್ಜೆಯ ಗುಣಮಟ್ಟಕ್ಕೆ ಅನುಗುಣವಾಗಿದೆ. ಸೋರುತ್ತಿದ್ದ ಛಾವಣಿಯ ದುರಸ್ತಿ ಕಾರ್ಯ ಪೂರ್ಣ ಗೊಂಡಿದೆ. ಚೇಂಜಿಂಗ್‌ ರೂಮ್‌ಗಳ ನವೀಕರಣ ಕಾರ್ಯ ನಡೆದಿದೆ. ಹೊಸದಾಗಿ ಉತ್ತಮ ಗುಣಮಟ್ಟದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.

‘ಇಲ್ಲಿ ನಡೆಯುವ ಈ ಟೂರ್ನಿ ಗಳಿಂದ ಕಲಬುರ್ಗಿಯ ಜನರಲ್ಲಿ ಕ್ರೀಡೆ ಬಗ್ಗೆ ಒಲವು ಹೆಚ್ಚಬಹುದು ಎನ್ನುವುದು ನಮ್ಮ ಆಸೆಯಾಗಿದೆ. ಕಲಬುರ್ಗಿಯ ಕ್ರೀಡಾಪಟುಗಳು ಈ ಟೂರ್ನಿಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ. ಎಚ್‌ಕೆಆರ್‌ಡಿಬಿ ನೀಡಿರುವ ಸಹಕಾರ ದಿಂದ ಮುಂದೆ ನಮ್ಮ ನಗರದ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲಿದ್ದಾರೆ’ ಎಂದು ಕಲಬುರ್ಗಿ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆಯ ಉಪಾಧ್ಯಕ್ಷ ಸಿ.ಎನ್‌.ಬಾಬಳಗಾಂವ್‌ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕ್ರೀಡೆಗೆ ‘ಎಚ್‌ಕೆಆರ್‌ಡಿಬಿ ಆನೆಬಲ’: ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಧನಸಹಾಯ ದಿಂದ ಈ ಭಾಗದಲ್ಲಿ ಕ್ರೀಡೆಗೆ ಬೇಕಾಗಿ ರುವ ಮೂಲಸೌಕರ್ಯ ಹೆಚ್ಚಿಸುವ ಕಾರ್ಯಗಳು ಆರಂಭಗೊಂಡಿವೆ.

‘ಕ್ರೀಡಾಂಗಣದಕ್ಕೆ ಸರಿಯಾದ ವೃತ್ತಿಪರ ಸ್ಪರ್ಶ ನೀಡುವ ಕಡೆ ಎಚ್‌ಕೆಆರ್‌ಡಿಬಿ ಹೆಚ್ಚಿನ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಹೈ–ಕ ಭಾಗದ ಜಿಲ್ಲೆಗಳಿಗೆ ಕ್ರೀಡಾಂಗಣಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಕ್ರೀಡಾ ಚಟುವಟಿಕೆ ಗಳ ಬೆಳವಣಿಗೆಗೆ ಬೇಕಾಗಿರುವ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಈ ಅನುದಾನದ ಅಡಿಯಲ್ಲಿ ಬ್ಯಾಡ್ಮಿಂಟನ್‌ ಅಂಗಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಸರಿಯಾಗಿ ಪರಿವರ್ತಿಸಲಾಗುತ್ತಿದೆ’ ಎಂದು  ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಅಮ್ಲನ್‌ ಆದಿತ್ಯ ಬಿಸ್ವಾಸ್‌ ತಿಳಿಸಿದರು.

ಬೊಜ್ಜು ಕರಗಿಸುವುದು ಇನ್ನು ದುಬಾರಿ: ‘ಕ್ರೀಡಾಂಗಣಗಳನ್ನು ಕ್ರೀಡಾ ಪಟುಗಳ ಬೆಳವಣಿಗೆಯ ಉದ್ದೇಶದಿಂದ ನಿರ್ಮಿಸ ಲಾಗಿದೆ. ಇಲ್ಲಿ ಕ್ರೀಡಾಪಟುಗಳು ತಮಗೆ ಬೇಕಾದ ಕ್ರೀಡೆಗಳ ಅಭ್ಯಾಸ ನಡೆಸಲು ಸಕಲ ಅನುಕೂಲಗಳನ್ನು ನೀಡಲಾಗು ವುದು. ಮುಂದಿನ ದಿನಗಳಲ್ಲಿ ಕ್ರೀಡೆಗಾಗಿ ಬರುವವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಮನರಂಜನೆ, ಆರೋಗ್ಯ ಕಾಪಾಡುವವರಿಗೆ ನಂತರ ಆದ್ಯತೆ ನೀಡಲಾಗುವುದು’ ಎಂದರು.

‘ಬ್ಯಾಡ್ಮಿಂಟನ್‌ ಅಭ್ಯಸಿಸುವ ಕ್ರೀಡಾಪ ಟುಗಳಿಗೆ ಎಚ್‌ಕೆಆರ್‌ಡಿ ಹಣದಲ್ಲೇ ಸಾಮಾಗ್ರಿಗಳನ್ನು ನೀಡುವ ಉದ್ದೇಶವಿದೆ. ಇದಕ್ಕಾಗಿ ಕೆಲವೊಂದು ನಿಯಮಗಳ ಬದಲಾವಣೆ ಮಾಡಲಾಗುತ್ತದೆ. ಆರೋಗ್ಯ ಕಾಪಾಡಲು ಹಾಗೂ ಮನರಂಜನೆಗೆ ಆಡಲು ಬರುವವರಿಗೆ ನಂತರದ ಆದ್ಯತೆ ಹಾಗೂ ಶುಲ್ಕ ಹೆಚ್ಚಿಸುವ ಪ್ರಸ್ತಾವವಿದೆ’ ಎಂದು ಅವರು ತಿಳಿಸಿದರು.

ಕ್ರೀಡೆಗೆ ಬೇಕಾಗಿರುವ ಗ್ರೇಡಿಂಗ್‌ ನೀಡುವ ಕಾರ್ಯಕ್ಕೆ ಎಚ್‌ಕೆಆರ್‌ಡಿಬಿ ಮುಂದಾಗಿದೆ. ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬಳಸಿ ಅಭಿವೃದ್ಧಿ ಮಾಡಲಾಗುತ್ತಿದೆ
ಅಮ್ಲನ್‌ ಆದಿತ್ಯ ಬಿಸ್ವಾಸ್‌,
ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT