ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣ

ಕುಶಾಲನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭ
Last Updated 13 ಮಾರ್ಚ್ 2018, 10:48 IST
ಅಕ್ಷರ ಗಾತ್ರ

ಕುಶಾಲನಗರ: ಬೇಸಿಗೆಯ ಅವಧಿ ಆರಂಭದಲ್ಲಿಯೇ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸಂಪೂರ್ಣ ಕ್ಷೀಣಗೊಂಡಿದ್ದು, ನದಿಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗುವ ಆತಂಕ ಎದುರಾಗಿದೆ.

ಕೊಡಗು ಜಿಲ್ಲೆಯ ಪ್ರಮುಖ ನೀರಿನ ಮೂಲವಾದ ಕಾವೇರಿ ನದಿಯಲ್ಲಿ ತ್ವರಿತಗತಿಯಲ್ಲಿ ನೀರಿನಲ್ಲಿ ಇಳಿಮುಖವಾಗುತ್ತಿದೆ. ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಪ್ರಸಕ್ತ ವರ್ಷ ಮಳೆ ಕೊರತೆ ಹಾಗೂ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ನದಿ ದಂಡೆ ಮೇಲಿರುವ ಪ್ರಮುಖ ಪಟ್ಟಣ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ, ಗ್ರಾಮ ಪಂಚಾಯಿತಿ ಮೂಲಕ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದರೂ, ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬೇಸಿಗೆ ಮುನ್ನವೇ ತೀವ್ರಗೊಂಡಿದೆ.

ಕುಶಾಲನಗರದ ಜನರಿಗೆ ಕುಡಿಯವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಜಲಮಂಡಳಿಯು ನದಿಗೆ ಮರಳು ಚೀಲಗಳನ್ನು ಅಡ್ಡಹಾಕಿ ನೀರು ಸಂಗ್ರಹಿಸುವ ಯೋಜನೆ ಕೈಗೆತ್ತಿಕೊಂಡಿದೆ. ಆದರೆ, ಈ ಬಾರಿ ಅವಧಿಗೂ ಮುನ್ನವೇ ನದಿಯಲ್ಲಿ ನೀರು ಕ್ಷೀಣಿಸಿದೆ. ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಕಟ್ಟೆ ನಿರ್ಮಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಜಲಮಂಡಳಿ ಪರ್ಯಾಯವಾಗಿ ನದಿಯಲ್ಲಿನ ಹಳ್ಳಗಳಲ್ಲಿ ನಿಂತಿರುವ ನೀರನ್ನು ಮೋಟಾರ್ ಮೂಲಕ ಕಟ್ಟೆ–ಕಟ್ಟಿರುವ ಜಾಗಕ್ಕೆ ಪಂಪ್ ಮಾಡಿ ನೀರು ಪೂರೈಸುವ ಕಾರ್ಯದಲ್ಲಿ ತೊಡಗಿದೆ.

ಬಿಸಿಲಿನ ತಾಪಮಾನ ಇದೇ ರೀತಿ ಮುಂದುವರಿದರೆ ಎರಡು ಮೂರು ದಿನಗಳ ನಂತರ ಪಟ್ಟಣದ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ನದಿ ತಟದ ನಿವಾಸಿಗಳು ಹೇಳುತ್ತಾರೆ.

ಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಗುಮ್ಮನಕೊಲ್ಲಿ ವ್ಯಾಪ್ತಿಗೆ ಜಲಮಂಡಳಿ ವತಿಯಿಂದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ 30ರಿಂದ 35 ಸಾವಿರ ಜನಸಂಖ್ಯೆ ಇದೆ. ಜನಸಂಖ್ಯೆ ಆಧಾರದ ಮೇಲೆ ಪ್ರತಿನಿತ್ಯ ಸುಮಾರು 40 ಲಕ್ಷ ಲೀಟರ್ ನೀರಿನ ಅಗತ್ಯತೆ ಇದೆ. ಆದರೆ, ಈಗ ಕೇವಲ 28 ಲಕ್ಷ ಲೀಟರ್ ನೀರನ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತಿದ್ದು, 12 ಲಕ್ಷ ಲೀಟರ್ ಕೊರತೆಯಿದೆ ಎಂದು ಜಲಮಂಡಳಿ ಸಹಾಯಕ ಎಂಜಿನಿಯರ್ ಆನಂದ್ ತಿಳಿಸಿದ್ದಾರೆ.

ಜಲ ಮಂಡಳಿ ಆವರಣದಲ್ಲಿರುವ 2.5 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಓವರ್‌ಹೆಡ್ ಟ್ಯಾಂಕ್ ಮೂಲಕ ಪಟ್ಟಣದ ವಿವಿಧ ಬಡಾವಣೆಗಳಿಗೆ ಎರಡು ದಿನಗಳಿಗೊಮ್ಮೆ ಹಾಗೂ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಮೂರು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಕಾವೇರಿ ನದಿಯ ದಂಡೆಮೇಲಿರುವ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಏಕೈಕ ಆಸರೆಯಾಗಿರುವ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಗಣನೀಯವಾಗಿ ಕುಂಠಿತಗೊಳ್ಳುತ್ತಿದೆ.

ಬೇಸಿಗೆ ಅವಧಿಯಲ್ಲಿ ಕೆರೆ– ಕಟ್ಟೆಗಳಿಗೆ ನೀರು ತುಂಬಿಸಿ, ಜಾನುವಾರುಗಳಿಗೆ ನೀರುಣಿಸುತ್ತಿದ್ದ ಹಾರಂಗಿ ಜಲಾಶಯ ಕೂಡ ಈ ವರ್ಷ ಮಳೆ ಕೊರತೆಯಿಂದ ಅವಧಿಗೂ ಮುನ್ನವೇ ಖಾಲಿ ಆಗುತ್ತಿದ್ದು, ಹೊಂಡಗಳಲ್ಲಿ ನೀರು ಕಾಣುವ ಸ್ಥಿತಿಯಿದೆ.

ಇದರಿಂದ ಈ ಬಾರಿ ಬೇಸಿಗೆ ಬೆಳೆಗೂ ನೀರಿಲ್ಲದೇ ರೈತರು ಹನಿ ನೀರಾವರಿಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಅಲ್ಲದೇ ನದಿಪಾತ್ರದಲ್ಲಿನ ರೈತರು ನದಿಗೆ ಅಕ್ರಮವಾಗಿ ಕಟ್ಟೆ ಕಟ್ಟಿಕೊಂಡು ಶುಂಠಿ ಕೃಷಿ ಹಾಗೂ ತೋಟಗಳಿಗೆ ಪಂಪ್‌ಸೆಟ್ ಮೂಲಕ ನೀರನ್ನು ಎತ್ತುವುದು ಕಂಡುಬರುತ್ತಿದೆ. ಇದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ.

ಸದಾ ಹಸಿರಿನಿಂದ ಕೂಡಿರುವ ಮಲೆನಾಡು ಪ್ರದೇಶವಾದ ಕೊಡಗಿನಲ್ಲಿ ಈ ಬಾರಿ ಉತ್ತರ ಕರ್ನಾಟಕ ಪ್ರದೇಶದ ವಾತಾವರಣವಿದೆ. ಬಿಸಿಲಿನ ತೀವ್ರತೆಯಿಂದ ಧಣಿವಾರಿಸಿಕೊಳ್ಳಲು ಜನರು ತಂಪು ಪಾನೀಯ, ಎಳನೀರು ಮೊರೆ ಹೋಗುತ್ತಿದ್ದರೆ, ಮಧ್ಯಾಹ್ನದ ಸಮಯದಲ್ಲಿ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಮತ್ತೆ ಅದೇ ಸಮಸ್ಯೆ...
2012ರಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕ್ಷೀಣಿಸಿತ್ತು. ಆಗ ನದಿಗಳ ಮಧ್ಯೆ ಆಳದ ಜಾಗಗಳಲ್ಲಿ ನಿಂತಿದ್ದ ನೀರನ್ನು ಪಂಪ್‌ಸೆಟ್‌ ಮೂಲಕ ಕಟ್ಟೆಗೆ ಹರಿಸಿ ನಂತರ ನೀರು ಪೂರೈಸಲಾಗಿತ್ತು. ಅದೇ ರೀತಿ ಈ ಬಾರಿಯೂ ಜಲಮಂಡಳಿ ತೆಪ್ಪದಕಂಡಿ ಹಾಗೂ ಇತರೆ ಸ್ಥಳಗಳಲ್ಲಿ ನಿಂತಿರುವ ನೀರನ್ನು ಕಟ್ಟೆಗೆ ಹರಿಸುತ್ತಿದೆ. ಮಾರ್ಚ್‌ ಮಧ್ಯದಲ್ಲೇ ಈ ರೀತಿಯ ಸಮಸ್ಯೆ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಆಗಲಿದೆ ಎನ್ನುತ್ತಾರೆ ಸ್ಥಳೀಯರು.
–ರಘು ಹೆಬ್ಬಾಲೆ

*
ಕಾವೇರಿ ನದಿಯಲ್ಲಿ ಕೆಲವು ರೈತರು ಅಕ್ರಮವಾಗಿ ಕಟ್ಟೆ ನಿರ್ಮಿಸಿ ನೀರನ್ನು ತಮ್ಮ ತೋಟಗಳಿಗೆ ಹಾಯಿಸುತ್ತಿದ್ದಾರೆ. ಕಟ್ಟೆ ನಿರ್ಮಿಸಿ ನೀರು ಎತ್ತುವ ಕೆಲಸ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಆನಂದ್, ಸಹಾಯಕ ಎಂಜಿನಿಯರ್‌, ಜಲಮಂಡಳಿ, ಕುಶಾಲನಗರ

*


ಕಾವೇರಿ ನದಿಯಲ್ಲಿ ಮರಳಿನ ಚೀಲಗಳಿಂದ ಕಟ್ಟೆ ನಿರ್ಮಾಣ ಮಾಡಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT