ಮಂಗಳವಾರ, ಫೆಬ್ರವರಿ 25, 2020
19 °C
ತಾಲ್ಲೂಕು ಮಟ್ಟದಲ್ಲಿ ಪ್ರಥಮ; ಜಿಲ್ಲಾ ಮಟ್ಟದಲ್ಲಿ ಭಾಗಿ

ನಿಡಗುಂದಿ: ವಂದಾಲದ ಮಹಿಳಾ ಕರಾಟೆ ಪಟುಗಳು

ಚಂದ್ರಶೇಖರ ಕೋಳೇಕರ Updated:

ಅಕ್ಷರ ಗಾತ್ರ : | |

Prajavani

ನಿಡಗುಂದಿ: ಹುಡುಗಿಯರು ಕ್ರೀಡೆಯಿಂದ ದೂರ ಇರುವುದೇ ಹೆಚ್ಚು, ಅದರಲ್ಲಿಯೂ ಹಳ್ಳಿ ಹುಡುಗಿಯರು ಇನ್ನೂ ದೂರ. ಆದರೆ, ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ವಂದಾಲದ ಹುಡುಗಿಯರು ಕರಾಟೆ ಸ್ಪರ್ಧೆಯಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.

ವಂದಾಲದ ಶಾಕಂಬರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ತಂಡ ಕರಾಟೆ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ.

ಈ ಶಾಲೆಯ ವಿದ್ಯಾರ್ಥಿನಿಯರಾದ ಶಂಕ್ರಮ್ಮ ಹೂಗಾರ, ಲಕ್ಷ್ಮೀ ಬಡಿಗೇರ, ಸುನಿತಾ ಢವಳಗಿ, ಪ್ರಿಯಾ ಮಾದರ, ರೂಪಾ ತಳಗೇರಿ, ವಿದ್ಯಾ ದೊಡ್ಡಪ್ಪನವರ, ಶಂಕ್ರಮ್ಮ ಮಾದರ, ತನಿಶಾ ಬಿರಾದಾರ, ಲಕ್ಷ್ಮಿ ದಾಶಾಳ, ಅಶ್ವಿನಿ ಬೀರಕಬ್ಬಿ, ಲಕ್ಷ್ಮಿ ಭಜಂತ್ರಿ ಅವರು ವಿವಿಧ ತೂಕದ ವಿಭಾಗದಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಕ್ಷತಾ ಉಣ್ಣಿಭಾವಿ ಕಳೆದ ವರ್ಷ ವಿಜಯಪುರದಲ್ಲಿ ನಡೆದ ಕರಾಟೆ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಪಡೆದು ರಜತ ಪದಕ ವಿಜೇತಳಾಗಿದ್ದಾಳೆ.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಗಲಗಲಿ ಸ್ವತಃ ಬ್ಲಾಕ್‌ಬೆಲ್ಟ್ ಕರಾಟೆ ಪಟುವಾಗಿದ್ದು, ಅವರ ಮಾರ್ಗದರ್ಶನದಲ್ಲಿ 2019-20ನೇ ಶೈಕ್ಷಣಿಕ ವರ್ಷದಿಂದಲೇ ಶಾಲೆಯ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕರಾಟೆ ಕಲಿಯುತ್ತಿದ್ದಾರೆ. ಈ ಪೈಕಿ 12 ಜನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.
ನಿತ್ಯ ಕ್ರೀಡಾ ಅವಧಿಯ ಜೊತೆ ಶಾಲೆ ಮುಗಿದ ಬಳಿಕವೂ ಹಲವು ವಿದ್ಯಾರ್ಥಿನಿಯರು ಕರಾಟೆಯ ಅಭ್ಯಾಸದಲ್ಲಿ ನಿರತರಾಗುತ್ತಾರೆ. ಅದಕ್ಕಾಗಿ ವ್ಯಾಯಾಮ, ಯೋಗ ಮಾಡಿ ಸಾಕಷ್ಟು ಬೆವರು ಸುರಿಸಿದ ಬಳಿಕ ಕರಾಟೆಯ ಹಲವು ಪಟ್ಟುಗಳನ್ನು ನಿತ್ಯ ಕಲಿಯುತ್ತಾರೆ.

ಕರಾಟೆಯ ಭಾಗಗಳಾದ ಕಟಾ ಹಾಗೂ ಕುಮ್ಟೆ ಎರಡು ವಿಭಾಗದಲ್ಲಿಯೂ ಈ ಪಟುಗಳು ಎತ್ತಿದ ಕೈ. ಇವರ ಕರಾಟೆ ಪಟ್ಟುಗಳನ್ನು ನೋಡಿದರೆ ಎಂತಹವರೂ ಅಚ್ಚರಿ ಪಡುತ್ತಾರೆ. ಕರಾಟೆಯಲ್ಲಿಯೂ ವಿವಿಧ ದೈಹಿಕ ಕಸರತ್ತನ್ನು ಈ ಕ್ರೀಡಾಪಟುಗಳು ಪ್ರದರ್ಶಿಸುತ್ತಾರೆ.

‘ಕರಾಟೆಯನ್ನು ಈಗ ಶಾಲಾ ಆಟವನ್ನಾಗಿ ಪರಿಗಣಿಸಿದ್ದರಿಂದ ಹಲವಾರು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿನಿಯರ ಪೋಷಕರ ಅನುಮತಿ ಪಡೆದು ಕರಾಟೆ ಕಲಿಸುವುದು ಸವಾಲಿನ ಕೆಲಸವಾಗಿತ್ತು’ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಗಲಗಲಿ.

‘ಸ್ವತಃ ನಾನು ಕರಾಟೆ ಪಟುವಾಗಿದ್ದು, ಇದೇ ಶೈಕ್ಷಣಿಕ ವರ್ಷದಿಂದ ಕರಾಟೆ ತರಬೇತಿ ಆರಂಭಿಸಿದ್ದೇನೆ. ಪರಿಣಿತರನ್ನು ರಾಜ್ಯ ಮಟ್ಟಕ್ಕೆ ಕರೆದೊಯ್ಯಬೇಕು ಎಂಬ ಕನಸಿದೆ’ ಎನ್ನುತ್ತಾರೆ ಗಲಗಲಿ.

‘ನಾವು ಈಗಷ್ಟೇ ಕರಾಟೆ ಅಭ್ಯಾಸ ಆರಂಭಿಸಿದ್ದೇವೆ. ಇದರಲ್ಲಿ ಇನ್ನಷ್ಟು ಪರಿಣಿತರಾಗುವ ಉದ್ದೇಶದಿಂದ ನಿತ್ಯ ಕನಿಷ್ಠ 3 ಗಂಟೆ ಅಭ್ಯಾಸ ಮಾಡುತ್ತಿದ್ದೇವೆ. ನಮ್ಮ ದೈಹಿಕ ಕ್ಷಮತೆಯೂ ಹೆಚ್ಚಿದೆ. ಇದರಲ್ಲಿಯೇ ಸಾಧನೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇವೆ’ ಎನ್ನುತ್ತಾರೆ ಶಂಕ್ರಮ್ಮ ಹೂಗಾರ, ಲಕ್ಷ್ಮೀ ಬಡಿಗೇರ, ಸುನಿತಾ ಹಡಪದ ಹಾಗೂ ಬಸಮ್ಮ ಢವಳಗಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು