ಬುಧವಾರ, ನವೆಂಬರ್ 20, 2019
21 °C
ರಾಷ್ಟ್ರ ಧ್ವಜಾರೋಹಣ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿಕೆ

ಕನ್ನಡ ಸಮೃದ್ಧಕ್ಕೆ ತಂತ್ರಜ್ಞಾನ ರೂಪಿಸಿ

Published:
Updated:
Prajavani

ವಿಜಯಪುರ: ‘ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದ ಹಲವಾರು ಆವಿಷ್ಕಾರಗಳು ಆಗಿವೆ. ಕನ್ನಡ ಭಾಷೆಯನ್ನು ಇನ್ನಷ್ಟು ಸಮೃದ್ಧಗೊಳಿಸಲು ಅಗತ್ಯ ತಂತ್ರಜ್ಞಾನವನ್ನು ರೂಪಿಸಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನದ ಹೊರತಾಗಿ ನಾವು ಬದುಕಲು ಸಾಧ್ಯವೇ ಇಲ್ಲದಂತಹ ಸನ್ನಿವೇಶ ನಿರ್ಮಾಣವಾಗಿದೆ. ಇವತ್ತಿನ ಕನ್ನಡ ಮುಂದಿನ 25 ವರ್ಷಗಳ ನಂತರ ಹೀಗೆಯೇ ಇರುವುದಿಲ್ಲ. ಮುಂದಿನ ಕಾಲು ಶತಮಾನದ ಅವಧಿಯಲ್ಲಿ ಕನ್ನಡ ಹೇಗಿರಬೇಕು ಎಂಬ ಮುಂದಾಲೋಚನೆಯನ್ನು ಇವತ್ತೇ ಮಾಡಬೇಕಾಗಿದೆ’ ಎಂದರು.

‘ತಂತ್ರಜ್ಞಾನ ಯಾವ ವೇಗದಲ್ಲಿ ಬೆಳೆಯುತ್ತಿದೆಯೋ ಅದೇ ವೇಗದಲ್ಲಿ ಅದನ್ನು ಅರಗಿಸಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳಬೇಕು. ಇಂದು ಇಂಗ್ಲಿಷ್, ಜರ್ಮನ್, ಜಪಾನ್ ಭಾಷೆಗಳು ವ್ಯಾಪಕವಾಗಿ ಬೆಳೆಯಲು ಆ ಭಾಷೆಗಳಲ್ಲಿನ ತಂತ್ರಜ್ಞಾನದ ಬೆಳವಣಿಗೆಯೇ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ತಂತ್ರಜ್ಞಾನ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕಮಾಂಡೆಂಟ್ ಶಂಕರಗೌಡ ಚೌಧರಿ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪಡೆ, ನಾಗರಿಕ ಪೊಲೀಸ್ ಪಡೆ, ಗೃಹ ರಕ್ಷಕ ದಳ, ಎನ್‌ಸಿಸಿ, ಸೇವಾದಳ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ವಿವಿಧ ಶಾಲಾ ಮಕ್ಕಳು ಪಥಸಂಚಲ ನಡೆಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿದ್ಧೇಶ್ವರ ಜಾತ್ರೆಯ ಸ್ತಬ್ಧಚಿತ್ರವು ಪ್ರಥಮ ಸ್ಥಾನ, ಎಕ್ಸಲಂಟ್ ಶಿಕ್ಷಣ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತಬ್ಧ ಚಿತ್ರ ದ್ವಿತೀಯ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಶ್ರೀ ರುಕ್ಮಾಂಗದ ಬಾಲಕಿಯರ ಪ್ರೌಢ ಶಾಲೆಯ ಸ್ತಬ್ಧ ಚಿತ್ರ ತೃತೀಯ ಸ್ಥಾನ ಪಡೆದವು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರುಣ ಶಹಾಪುರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತ್ತದಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್ ಇದ್ದರು.

ಪ್ರತಿಕ್ರಿಯಿಸಿ (+)