‘ಕೆಂಪೇಗೌಡರ ಬಗ್ಗೆ ಸಂಶೋಧನೆ ಅಗತ್ಯ’

7
ಜಿಲ್ಲಾಡಳಿತದಿಂದ ಬೆಂಗಳೂರು ನಿರ್ಮಾತೃವಿನ 509ನೇ ಜಯಂತಿ ಆಚರಣೆ

‘ಕೆಂಪೇಗೌಡರ ಬಗ್ಗೆ ಸಂಶೋಧನೆ ಅಗತ್ಯ’

Published:
Updated:
ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಅನ್ನದಾನೇಶ್ವರನಾಥ ಸ್ವಾಮೀಜಿ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಉದ್ಘಾಟಿಸಿದರು

ರಾಮನಗರ: ಕೆಂಪೇಗೌಡರ ಇತಿಹಾಸದ ಬಗ್ಗೆ ಯುವ ಸಂಶೋಧಕರು ಬೆಳಕು ಚೆಲ್ಲುವ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಡಾ. ಮುನಿರಾಜಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಅಂಬೇಡ್ಕರ್ ಭವನದಲ್ಲಿ ನಡೆದ ಕೆಂಪೇಗೌಡರ 509ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಲಹಂಕ ಸಾಮಂತರ ಇತಿಹಾಸದ ಬಗ್ಗೆ ಈವರೆಗೂ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಆದರೆ 2000ನೇ ಇಸವಿಯಿಂದ ಈಚೆಗೆ ಸಂಶೋಧಕರು ಬೆಂಗಳೂರು ನಿರ್ಮಾತೃ, ಮತ್ತವರ ವಂಶಜರ ಬಗ್ಗೆ ಬೆಳಕು ಚೆಲ್ಲುತ್ತಿರುವುದು ಉತ್ತಮ ಬೆಳವಣಿಗೆ. ಆದಾಗ್ಯೂ ಇತಿಹಾಸವನ್ನು ನಿರೂಪಿಸಲು ಸಾಕ್ಷ್ಯಧಾರಗಳ ಕೊರತೆ ಇದ್ದೇ ಇದೆ ಎಂದು ಹೇಳಿದರು. ಕೇವಲ ಐಎಎಸ್, ಐಪಿಎಸ್ ಪರೀಕ್ಷೆಗಾಗಿ ಚರಿತ್ರೆ ಓದದೇ ಅದರ ಸಾರವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಬೆಂಗಳೂರನ್ನು ಕಟ್ಟಿಸಿದ್ದು ಹಿರಿಯ ಕೆಂಪೇಗೌಡರು. 1537ರಲ್ಲಿ ತಾವು ನಿರ್ಮಿಸಿದ ನವ ಬೆಂಗಳೂರಿಗೆ ನಾಲ್ಕು ದಿಕ್ಕುಗಳಲ್ಲೂ ಗೋಪುರ ನಿರ್ಮಿಸಿ ಕೋಟೆ ಕೊತ್ತಲು ಕೆರೆ ಕಟ್ಟೆ ಕಲ್ಯಾಣಿ ದೇಗುಲಗಳನ್ನು ಕಟ್ಟಿಸಿದ್ದಲ್ಲದೆ, ವಾಣಿಜ್ಯ ವ್ಯಾಪಾರಕ್ಕೆ ಪ್ರೋತ್ಸಾಹ  ನೀಡಿದ್ದರು. ಅವರ ದೂರದೃಷ್ಟಿಯ ಪರಿಕಲ್ಪನೆಯಿಂದಾಗಿ ಬೆಂಗಳೂರು ಮಹಾನಗರಿಯಾಗಿ ಬೆಳೆಯಿತು ಎಂದು ವಿವರಿಸಿದರು.

ಇಮ್ಮಡಿ ಕೆಂಪೇಗೌಡರ ಕಾಲದಲ್ಲಿ ಅವರ ವಂಶದವರು ಮಾಗಡಿಗೆ ಬಂದು ಇಲ್ಲಿಂದ ಆಳ್ವಿಕೆ ನಡೆಸಿದರು. ಹೀಗಾಗಿ ಅವರನ್ನು ಮಾಗಡಿ ಕೆಂಪೇಗೌಡರು ಎಂದು ಗುರುತಿಸಲಾಗುತ್ತಿದೆ. ಸುಮಾರು 350 ವರ್ಷಗಳ ಯಲಹಂಕ ವಂಶಸ್ಥರ ಆಳ್ವಿಕೆಯ ಕಾಲದ ಪ್ರದೇಶ ಒಂದು ಅಂದಾಜಿನಂತೆ ಇಂದಿನ ಕೋಲಾರ, ಬೆಂಗಳೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಹರಡಿತ್ತು ಎಂದು ಹೇಳಿದರು.

ಬೆಂಗಳೂರನ್ನು ನಿರ್ಮಾಣ ಮಾಡಿದ ಕೆಂಪೇಗೌಡರ ವಂಶಜರು ನಗರದಾದ್ಯಂತ 276 ಕೆರೆಗಳನ್ನು ಕಟ್ಟಿಸಿದರು. ಆದರೆ ಇಂದು ಕೆರೆ ಕಟ್ಟುವುದು ಇರಲಿ. ಅವುಗಳನ್ನೂ ಉಳಿಸಿಕೊಳ್ಳಲು ನಮ್ಮ ಕೈಯಲ್ಲಿ ಆಗಿಲ್ಲ. ಎಷ್ಟೋ ಜಲಮೂಲಗಳು ಅವಸನಗೊಂಡಿವೆ. ನೀರು, ಗಾಳಿ ಎಲ್ಲವೂ ವಿಷಮಯವಾಗುತ್ತಾ ಹೋಗುತ್ತಿದೆ ಎಂದು ವಿವರಿಸಿದರು.

ಕೆಂಪೇಗೌಡರ ಕಾಲದ ಗ್ರಾಮ ಸ್ವರಾಜ್ಯ ವ್ಯವಸ್ಥೆಯ ಪರಿಕಲ್ಪನೆ ಕುರಿತು ವಿವರ ನೀಡಿದ ಅವರು ‘ಜನರ ಬೇಕು ಬೇಡಗಳಿಗೆಲ್ಲಾ ಹಳ್ಳಿಯಲ್ಲೇ ಅವಕಾಶವಿತ್ತು. ನಾಲಿಗೆ ಮೇಲಿನ ನಂಬಿಕೆ ಮೌಲ್ಯಾಧಾರಿತ ಬದುಕಿಗೆ ಬೆಲೆ ಇತ್ತು. ಪರಸ್ಪರ ಸಹಕಾರದಿಂದ ಕೂಡಿಬಾಳುವ ಸಾಮರಸ್ಯ ಹಳ್ಳಿಗಳಲ್ಲಿ ನೆಲೆಯೂರಿತ್ತು. ಅಕ್ಷರ ಜ್ಞಾನಕ್ಕಿಂತ ಕುಶಲಕಲೆಗೆ ಬೆಲೆ ಇತ್ತು. ಸೇವಾ ಕಸುಬಾಧಾರಿತ ಜಾತಿ ವ್ಯವಸ್ಥೆಯಲ್ಲಿ ಮೇಲು-ಕೀಳು ಭಾವನೆ ಇತ್ತಾದರೂ ಅವರವರ ಕಸುಬಿಗೆ ಸಮಾಜದಲ್ಲಿ ಗೌರವವಿತ್ತು’ ಎಂದು ಬಣ್ಣಿಸಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ ‘ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ಕಟ್ಟಿದ ಬೆಂಗಳೂರಿನಲ್ಲಿ ಇಂದು ಎಲ್ಲ ಜಾತಿ–ಧರ್ಮದ ಜನರೂ ವಾಸವಿದ್ದಾರೆ. ಧರ್ಮ ಸಹಿಷ್ಣು, ಪರೋಪಕಾರದ ಗುಣಗಳೊಂದಿಗೆ ಅವರು ಉತ್ತಮ ಆಳ್ವಿಕೆ ನಡೆಸಿದರು. ಭಾರತದ ಭೂಪಟದಲ್ಲಿ ಬೆಂಗಳೂರು ಇರುವ ತನಕವೂ ಅವರ ಹೆಸರು ಅಜರಾಮರವಾಗಿರುತ್ತದೆ’ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್‌ ಮಾತನಾಡಿ ‘ಕೆಂಪೇಗೌಡರು ಒಂದು ಜಾತಿಗೆ ಸೀಮತರಾದವರಲ್ಲ. ಬೆಂಗಳೂರಿನ ನಿರ್ಮಾತೃವಾದ ಅವರು ಎಲ್ಲ ಸಮಾಜಗಳ ಕಣ್ಮಣಿ’ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್, ಉಪಾಧ್ಯಕ್ಷೆ ಮಂಗಳಾ ಶಂಭುಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮಹಿಲನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ರಮೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಪ್ರಶಾಂತ್‌ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎಂ. ರಾಜು ಸ್ವಾಗತಿಸಿದರು.

ಪೂಜಾ ಕುಣಿತ, ಪಟ ಕುಣಿತದ ಗಮ್ಮತ್ತು
ಕಾರ್ಯಕ್ರಮದ ವೇದಿಕೆಯಲ್ಲಿ ಕನಕಪುರ ತಾಲ್ಲೂಕಿನ ಐಗೊಲ್ಲಹಳ್ಳಿ ಸ್ವರಾಜ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪೂಜಾ ಕುಣಿತ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಎಂಟು ವರ್ಷ ವಯಸ್ಸಿನ ಪ್ರೀತಂ ಪಟ ಹೊತ್ತು ನರ್ತಿಸುತ್ತಾ ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು.

ಬಲವಂತವಾಗಿ ಭಾಗವಹಿಸಬೇಡಿ

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಭಾಷಣದಲ್ಲಿ ಪ್ರಸ್ತಾಪಿಸಿದ ಸಿ.ಎಂ. ಲಿಂಗಪ್ಪ ‘ನಂಗೊತ್ತು ನೀವ್ಯಾರೂ ಮನಸ್ಸಾರೆ ಒಪ್ಪಿ ಕಾರ್ಯಕ್ರಮಕ್ಕೆ ಬಂದಿಲ್ಲ ಅಂತ’ ಎಂದಾಗ ವಿದ್ಯಾರ್ಥಿಗಳೆಲ್ಲ ಹೋ... ಎಂದರು.

‘ನಿಮ್ಮಂತಹ ನೂರಾರು ವಿದ್ಯಾರ್ಥಿಗಳ ಜೊತೆ ನಿತ್ಯ ಒಡನಾಟ ಹೊಂದಿದ್ದೇನೆ. ಇಂದಿನವರಿಗೆ ಪಠ್ಯದ ಬಗ್ಗೆ ಆಸಕ್ತಿ ಇಲ್ಲ. ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಎಲ್ಲ ಆಗಿದೆ. ಆದರೆ ಅದರ ಜೊತೆಗೆ ಓದೂ ಬಹಳ ಮುಖ್ಯ. ಅದರಲ್ಲೂ ಇತಿಹಾಸ ಓದಿದರಷ್ಟೇ ಉತ್ತಮ ಭವಿಷ್ಯ’ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಂಪೇಗೌಡರು ಬೆಂಗಳೂರಿನಲ್ಲಿ 275 ಕೆರೆಗಳನ್ನು ಕಟ್ಟಿಸಿದ್ದರು. ಇಂದು ಅವುಗಳನ್ನು ಉಳಿಸಿಕೊಳ್ಳಲೂ ನಮ್ಮಿಂದ ಆಗಿಲ್ಲ. ರಾಜಧಾನಿಯ ನೆಲ, ಜಲ ಎಲ್ಲವೂ ಮಲಿನವಾಗಿದೆ
- ಡಾ. ಮುನಿರಾಜಪ್ಪ, ಹಿರಿಯ ಸಂಶೋಧಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !