ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊನ್ನಂಪೇಟೆ: ಸ್ವಯಂಪ್ರೇರಿತ ಬಂದ್‌, ರಸ್ತೆ ತಡೆ

Last Updated 9 ಜನವರಿ 2018, 9:21 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆಗೆ ಆಗ್ರಹಿಸಿ 68 ದಿನಗಳಿಂದ ನಡೆದಿರುವ ಹೋರಾಟ ಸೋಮವಾರ ಇನ್ನಷ್ಟು ತೀವ್ರಗೊಂಡಿತು. ಉದ್ದೇಶಿತ ತಾಲ್ಲೂಕು ಕೇಂದ್ರದ ವ್ಯಾಪ್ತಿಗೆ ಒಳಪಡುವ 21 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವೆರೆಗೆ ಅಂಗಡಿಗಳನ್ನು ಬಂದ್‌ ಮಾಡಿ ಬಂದ್ ನಡೆಸಲಾಯಿತು.

ಆದರೆ ಶಾಲಾ, ಕಾಲೇಜುಗಳು ಎಂದಿನಂತೆ ನಡೆದವು. ವಾಹನ ಸಂಚಾರಕ್ಕೆ ಅಡಚಣೆ ಆಗಲಿಲ್ಲ. ಪೊನ್ನಂಪೇಟೆ ಆಸುಪಾಸಿನ ಗ್ರಾಮಗಳಿಂದ ಬಂದು ಪೊನ್ನಪೇಟೆ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ತಾಲ್ಲೂಕು ರಚನೆಗೆ ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದು, ನೂತನ ತಾಲ್ಲೂಕು ರಚನೆಗೆ ಆಗ್ರಹಪಡಿಸಿ ಗಾಂಧಿ ಮಂಟಪವರೆಗೂ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ತಾಲ್ಲೂಕು ರಚನೆಗೆ ಆಗ್ರಹಪಡಿಸಿ 68 ದಿನಗಳಿಂದ ಧರಣಿ ನಡೆದಿದೆ.

200ಕ್ಕೂ ಹೆಚ್ಚಿನ ಸಂಘಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದಾರೆ. ವಿರಾಜಪೇಟೆ ತಾಲ್ಲೂಕು ಕೇಂದ್ರ ಗಡಿಭಾಗದ ಜನತೆಗೆ ತುಂಬ ಸಮಸ್ಯೆಯಾಗಿದ್ದು, ಹೊಸ ತಾಲ್ಲೂಕು ರಚನೆಗೆ ಒತ್ತಾಯಿಸಲಾಗುತ್ತಿದೆ. ಸರ್ಕಾರ ಸಕಾರಾತ್ಮಕವಾದ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿ.ಎಂ. ಪ್ರಕಟಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಜ.9ರಂದು ಭೇಟಿ ನೀಡುತ್ತಿದ್ದಾರೆ. ‘ಹೋರಾಟ ಸಮಿತಿ ಸದಸ್ಯರು ನಿಯೋಗ ತೆರಳಿ ತಾಲ್ಲೂಕು ರಚನೆಯ ಅಗತ್ಯ ಮನವರಿಕೆ ಮಾಡಿಕೊಡಲಿದೆ.

ಖ್ಯಮಂತ್ರಿಗಳ ಆಶ್ವಾಸನೆ ಆಧರಿಸಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಚಿಂತಿಸಲಾಗುವುದು. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ತಮಗಿದೆ’ ಎಂದು ಆಶಿಸಿದರು.

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರು ‘ಬಿರುನಾಣಿ, ಕುಟ್ಟ, ತಿತಿಮತಿ, ಕಾರ್ಮಾಡು, ಬಾಳೆಲೆ ಇನ್ನಿತರ ಗ್ರಾಮಗಳ ಜನರ ಹಿತದೃಷ್ಟಿಯಿಂದ ನೂತನ ತಾಲ್ಲೂಕು ರಚನೆ ಆಗಲೇಬೇಕು. ಮುಖ್ಯಮಂತ್ರಿ ಈ ಕುರಿತು ಮನಸ್ಸು ಮಾಡಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಅವರು, ‘1956ಕ್ಕಿಂತ ಹಿಂದೆ ಇದ್ದ ಪೊನ್ನಂಪೇಟೆ ಕಿಗ್ಗಟ್ಟುನಾಡು ತಾಲ್ಲೂಕು ಕೇಂದ್ರವನ್ನು ಮರಳಿ ರಚಿಸಬೇಕು ಎಂದರು.

ಪೊನ್ನಂಪೇಟೆಯು ಈಗಡ ಹೋಬಳಿ ಕೇಂದ್ರವಾಗಿದ್ದು, ವಿರಾಜಪೇಟೆ ತಾಲ್ಲೂಕಿನ ಎಲ್ಲ ತಾಲ್ಲೂಕು ಕಚೇರಿಗಳು ಇವೆ. ನ್ಯಾಯಾಲಯದ ಕಟ್ಟಡ ಕೂಡ ತಲೆ ಎತ್ತಿದೆ. ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಸರ್ಕಾರ ಇದನ್ನು ಪರಿಗಣಿಸಬೇಕು’ ಎಂದು ಹೇಳಿದರು.

ಶಾಸಕ.ಕೆ.ಜಿ.ಬೋಪಯ್ಯ, ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಸದಸ್ಯರಾದ ಚೆಪ್ಪುಡೀರ ಸೋಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ, ಹಿರಿಯ ವಕೀಲ ಮತ್ರಂಡ ಅಪ್ಪಚ್ಚು, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ, ಪೊನ್ನಂಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ, ಸದಸ್ಯ ಲಕ್ಷ್ಮಣ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ಮಾಜಿ ಸದಸ್ಯ ಕೋಳೆರ ದಯಾ ಚಂಗಪ್ಪ,ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಯಮುನಾ ಚಂಗಪ್ಪ ಪಾಲ್ಗೊಂಡಿದ್ದರು. ಧರಣಿ ಸ್ಥಳದಲ್ಲಿ ಕಲಾವಿದ ಎಸ್.ಟಿ.ಗಿರೀಶ್ ಅವರ ಹೋರಾಟದ ಗೀತೆಗಳು ಮುಗಿಲು ಮುಟ್ಟಿದವು.

ಬಂದ್‌ಗೆ ವಿವಿಧೆಡೆ ಬೆಂಬಲ

ಪೊನ್ನಂಪೇಟೆ, ಗೋಣಿಕೊಪ್ಪಲು, ತಿತಿಮತಿ, ಬಾಳೆಲೆ, ಶ್ರೀಮಂಗಲ, ಹುದಿಕೇರಿ, ಬಿರುನಾಣಿ, ಕುಟ್ಟ ಸೇರಿದಂತೆ ವಿವಿಧೆಡೆ ವರ್ತಕರು ಅಂಗಡಿ ಬಂದ್ ಮಾಡಿ ಬಂದ್ ಬೆಂಬಲಿಸಿದರು. ದೂರದ ಊರುಗಳಿಂದ ಬ್ಯಾನರ್ ಹಿಡಿದು ಪೊನ್ನಂಪೇಟೆಗೆ ಬಂದಿದ್ದ ಹೋರಾಟಗಾರರು ತಾಲ್ಲೂಕು ರಚನೆಗೆ ಒಕ್ಕೊರಲಿನಿಂದ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT