ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೈ ಬೀಸಿ ಕರೆಯುತ್ತಿದೆ ಅಬ್ಬಿಮಠ ಜಲಪಾತ

ಅಬ್ಬಿಮಠ ಬಾಚಳ್ಳಿ ಗ್ರಾಮದಲ್ಲಿರುವ ಜಲಧಾರೆ, ನೋಡಲು ಎರಡೂ ಕಣ್ಣೂ ಸಾಲದು
Published 6 ಜುಲೈ 2024, 5:36 IST
Last Updated 6 ಜುಲೈ 2024, 5:36 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ಅಬ್ಬಿಮಠ ಬಾಚಳ್ಳಿ ಗ್ರಾಮದಲ್ಲಿರುವ ಅಬ್ಬಿ ಜಲಪಾತ ಮಳೆಗಾಲ ಪ್ರಾರಂಭವಾದೊಡನೆ ಅತ್ಯಾಕರ್ಷಕವಾಗಿ ಮೇಲಿನಿಂದ ಧುಮ್ಮಿಕ್ಕಿ ಹರಿಯುವ ನೀರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಪಟ್ಟಣದಿಂದ ಯಡೂರು ಗ್ರಾಮದ ಮೂಲಕ ಈ ಜಲಪಾತಕ್ಕೆ ತೆರಳಬಹುದು. ಮಡಿಕೇರಿಯಿಂದ 39 ಕಿ.ಮೀ ದೂರದಲ್ಲಿರುವ ಅಬ್ಬಿಮಠ ಜಲಪಾತ, ಮಳೆಗಾಲದ ಒಂದು ಜಲಪಾತವಾಗಿದ್ದು, ಮುಂಗಾರು ಮಳೆ ಆರ್ಭಟಿಸಿದಷ್ಟು ತನ್ನ ಭೋರ್ಗರೆತವನ್ನು ಹೆಚ್ಚಿಸಿಕೊಳ್ಳುತ್ತದೆ.

ಬಾಚಳ್ಳಿ ಗ್ರಾಮದ ಎತ್ತರದ ಇಳಿಜಾರುಗಳಲ್ಲಿ ನೆಲೆಸಿರುವ ಈ ಜಲಪಾತ ಸುಮಾರು 100 ಮೀಟರ್ ಎತ್ತರದಿಂದ ಇಳಿಜಾರು ಕಲ್ಲುಬಂಡೆಯ ಮೇಲೆ ಜಾರುತ್ತಾ ಜಲಪಾತವನ್ನು ಸೃಷ್ಟಿಸಿದೆ. ಸುತ್ತಲೂ ದಟ್ಟವಾದ ಕಾಡು ಮತ್ತು ಭತ್ತದ ಗದ್ದೆ, ಕಾಫಿ ತೋಟಗಳಿಂದಾವೃತ್ತವಾಗಿದ್ದು, ಖಾಸಗಿ ಜಮೀನಿನ ಮೂಲಕ ತೆರಳಿ ಇದರ ಸೊಬಗನ್ನು ಸವಿಯಬೇಕಾಗಿದೆ.

ಜಲಪಾತದ ಮೇಲಿನ ನೋಟವು ಗಂಟೆಗಳ ಕಾಲ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ರಸ್ತೆಯಿಂದ ಸ್ಥಳಕ್ಕೆ ತೆರಳಲು 100 ಮೀಟರ್ ಕಾಲ್ನಡಿಗೆಯಲ್ಲಿ ತೆರಳಬೇಕು. ಮತ್ತೊಂದು ಬದಿಯಿಂದ ಜಲಪಾತದ ತುದಿಯನ್ನು ತಲುಪಲು ರಸ್ತೆಯ ಮಾರ್ಗವಿದೆ. ಜಲಪಾತವನ್ನು ತಲುಪುವ ಮಾರ್ಗದಲ್ಲಿ ಒಂದು ಸಣ್ಣ ದೇವಾಲಯವೂ ಇದೆ. ಈ ಜಲಪಾತವನ್ನು ಕೆಳಭಾಗದಿಂದ ನೋಡಲು ಸರಿಯಾದ ವ್ಯವಸ್ಥೆ ಇಲ್ಲ.

ಇದು ಮಡಿಕೇರಿಯಿಂದ ಶಾಂತಳ್ಳಿಗೆ ತೆರಳುವ ಮಾರ್ಗದಲ್ಲಿದ್ದು, ಸುತ್ತಲೂ ಸುಂದರವಾದ ಪರಿಸರವನ್ನು ಹೊಂದಿದೆ. ಸರಿಯಾದ ಮಾಹಿತಿ ಮತ್ತು ವ್ಯವಸ್ಥೆ ಇಲ್ಲದ ಕಾರಣ ಇಂದಿಗೂ ಹೆಚ್ಚಿನ ಜನರಿಂದ ದೂರವಾಗಿದೆ ಎಂದೇ ಹೇಳಬಹುದು.

ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಪ್ರಾರಂಭವಾದೊಡನೆ ಜಲಪಾತ ವೀಕ್ಷಣೆಗೆ ತೆರಳಬಹುದು. ಅಕ್ಟೋಬರ್ ತಿಂಗಳಿನವರೆಗೂ ಈ ಸ್ಥಳದಲ್ಲಿ ನೀರಿನ ಹರಿವನ್ನು ಕಾಣಬಹುದು. ಇದು ಮಾದಾಪುರ ಹೊಳೆಗೆ ಸೇರುವ ಮೂಲಕ, ಹಾರಂಗಿ ಅಣೆಕಟ್ಟಿನ ಜಲಮೂಲವೂ ಆಗಿದೆ.

ಸೋಮವಾರಪೇಟೆ ಸಮೀಪದ ಅಭಿಮಠ ಬಾಚಳ್ಳಿಯಲ್ಲಿನ ಅಬ್ಬಿ ಜಲಪಾತ
ಸೋಮವಾರಪೇಟೆ ಸಮೀಪದ ಅಭಿಮಠ ಬಾಚಳ್ಳಿಯಲ್ಲಿನ ಅಬ್ಬಿ ಜಲಪಾತ
ಜಲಪಾತದ ನೀರು ಹರಿದು ಮುಂದೆ ಮಾದಾಪುರ  ಹೊಳೆಯನ್ನು ಸೇರುತ್ತದೆ
ಜಲಪಾತದ ನೀರು ಹರಿದು ಮುಂದೆ ಮಾದಾಪುರ  ಹೊಳೆಯನ್ನು ಸೇರುತ್ತದೆ
ಮಡಿಕೇರಿಯಿಂದ ಶಾಂತಳ್ಳಿಗೆ ತೆರಳುವ ಮಾರ್ಗದಲ್ಲಿದೆ ಜಲಪಾತ ರಸ್ತೆಯಿಂದ ತೆರಳಲು ನೂರು ಮೀಟರ್ ಕಾಲ್ನಡಿಗೆ ಹಾದಿ ಮನಸೂರೆಗೊಳ್ಳಲಿದೆ ಜಲಪಾತದ ಸೊಬಗು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT