ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಗೆ ಆಹ್ವಾನ ಪತ್ರಿಕೆ ಹಾಕಿದ್ದವರಿಂದಲೇ ತೆರವು ಮಾಡಿಸಿದ ಸ್ಥಳೀಯರು

Published 12 ಮಾರ್ಚ್ 2024, 2:42 IST
Last Updated 12 ಮಾರ್ಚ್ 2024, 2:42 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಕುಶಾಲನಗರದ ಕೊಪ್ಪ ಸೇತುವೆಯಿಂದ ಕಾವೇರಿ ನದಿಗೆ ಮದುವೆಯ ಆಹ್ವಾನಪತ್ರಿಕೆಗಳನ್ನು ಹಾಕಿದ್ದವರನ್ನು ಸ್ಥಳೀಯರು ವಾಪಸ್ ಕರೆಸಿ, ಅವರಿಂದಲೇ ತೆರವು ಮಾಡಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಚಂದ್ರಮೋಹನ್ ಮತ್ತು ಪತ್ನಿ ವನಿತಾ ಚಂದ್ರಮೋಹನ್ ಅವರು ಸೋಮವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದಾಗ, ವಾಹನವೊಂದರಲ್ಲಿ ಬಂದ ಕೆಲವರು ಸೇತುವೆಯಿಂದ ನದಿಗೆ ಗೋಣಿಚೀಲದಿಂದ 300ಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ಸುರಿದಿದ್ದರು. ಅಲ್ಲಿದ್ದ ಆಹ್ವಾನ ಪತ್ರಿಕೆಯಲ್ಲಿದ್ದ ನಂಬರ್‌ಗೆ ಕರೆ ಮಾಡಿ ವಾಪಸ್ ಅವರನ್ನು ಕರೆಸಿದ ಚಂದ್ರಮೋಹನ್‌, ಅವರಿಂದಲೇ ಸುರಿದಿದ್ದ ಎಲ್ಲವನ್ನೂ ತೆಗೆಸಿದರು.

‘ನೀರಿನ ಪ್ರಮಾಣ ಕಡಿಮೆ ಇದ್ದಿದ್ದರಿಂದ ನದಿಗೆ ಇಳಿದು ಆಹ್ವಾನ ಪತ್ರಿಕೆ ತೆಗೆದುಕೊಂಡೆ. ಎಸೆದಿದ್ದವರಿಂದ ಮೊದಲಿಗೆ ಉಡಾಫೆಯ ಪ್ರತಿಕ್ರಿಯೆ ಬಂತು. ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು ಎಂದು ಹೇಳುತ್ತಿದ್ದಂತೆಯೇ ವಾಪಸ್ ಬಂದ 20 ಮಂದಿ ನದಿಗೆ ಇಳಿದು ಎಲ್ಲ ಆಹ್ವಾನ ಪತ್ರಿಕೆಗಳನ್ನು ತೆಗೆದುಕೊಂಡು ಚೀಲದೊಂದಿಗೆ ವಾಪಸಾದರು. ಬೆಂಗಳೂರಿನವರಾದ ಅವರಿಗೆ, ಮದುವೆ ಮುಗಿದ ಬಳಿಕ ಉಳಿದ ಆಹ್ವಾನ ಪತ್ರಿಕೆಗಳನ್ನು ನದಿಗೆ ಬಿಡುವಂತೆ ಅರ್ಚಕರು ಸಲಹೆ ನೀಡಿದ್ದರಂತೆ. ಹಾಗಾಗಿ, ಅವರು ಧರ್ಮಸ್ಥಳದ ಪ್ರವಾಸ ಮುಗಿಸಿ ಹೋಗುವಾಗ ಇಲ್ಲಿಗೆ ಹಾಕಿದ್ದರು. ಅವರಿಗೆ ನದಿ ಮಾಲಿನ್ಯದ ಕುರಿತು ಅರಿವು ಮೂಡಿಸಲಾಯಿತು’ ಎಂದು ಚಂದ್ರಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಡಗು ಜಿಲ್ಲೆಯ ಕುಶಾಲನಗರದ ಸೇತುವೆಯಿಂದ ಕಾವೇರಿ ನದಿಗೆ ಸೋಮವಾರ ಆಹ್ವಾನ ಪತ್ರಿಕೆಗಳನ್ನು ಸುರಿದಿದ್ದವರೇ ವಾಪಸ್ ಬಂದು ತೆಗೆಯುತ್ತಿರುವುದು
ಕೊಡಗು ಜಿಲ್ಲೆಯ ಕುಶಾಲನಗರದ ಸೇತುವೆಯಿಂದ ಕಾವೇರಿ ನದಿಗೆ ಸೋಮವಾರ ಆಹ್ವಾನ ಪತ್ರಿಕೆಗಳನ್ನು ಸುರಿದಿದ್ದವರೇ ವಾಪಸ್ ಬಂದು ತೆಗೆಯುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT