ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ: ಜೂನ್ 22ರಿಂದ ಸೋಮೇಶ್ವರ ದೇವಾಲಯದಲ್ಲಿ ಅಮೃತ ಮಹೋತ್ಸವ

Published 17 ಜೂನ್ 2024, 13:39 IST
Last Updated 17 ಜೂನ್ 2024, 13:39 IST
ಅಕ್ಷರ ಗಾತ್ರ

ಸೋಮವಾರಪೇಟೆ: ಇಲ್ಲಿನ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವ ಅಂಗವಾಗಿ ಜೂನ್ 22ರಿಂದ 24ರವರೆಗೆ ದೇವಾಲಯದಲ್ಲಿ ನವದುರ್ಗಾ ಚಂಡಿಕಾ ಹೋಮ, ಏಕಾದಶ ರುದ್ರಹೋಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.

‘ದೇವಾಲಯ ಸಮಿತಿ ನೇತೃತ್ವದಲ್ಲಿ ಬ್ರಾಹ್ಮಣ ಸಮಾಜ, ದೇವಿ ಬಳಗ, ಮಾತಾ ಬಳಗದ ಸಹಕಾರದೊಂದಿಗೆ ಅಮೃತ ಮಹೋತ್ಸವ ಅಂಗವಾಗಿ ವೇದಬ್ರಹ್ಮ ಎಂ.ವಿ. ಕೃಷ್ಣಮೂರ್ತಿ ಘನಪಾಠಿಗಳು ಮತ್ತು ಚಿತ್ರಕುಮಾರ್ ಭಟ್ ಸಮ್ಮುಖದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ. ಜೂನ್ 22ರಂದು ಸಂಜೆ 5.30ಕ್ಕೆ ಶುದ್ಧಿ ಪುಣ್ಯಃ, ಗಣಪತಿ ಪೂಜೆ, ಮಹಾ ಸಂಕಲ್ಪ, ಕಲಶಾರಾಧನೆ, ನವದುರ್ಗಾ ಚಂಡಿಕಾ ಪಾರಾಯಣ, ಮಂಡಲ ಆರಾಧನೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘23ರಂದು ಬೆಳಿಗ್ಗೆ 8 ಗಂಟೆಯಿಂದ ನವದುರ್ಗಾ ಚಂಡಿಕಾ ಹೋಮ, ಕನ್ನಿಕಾ ಪೂಜೆ, ನವ ಮುತ್ತೈದೆಯರ ಬಾಗಿನ ಪೂಜೆ, 12.30ಕ್ಕೆ ಪೂರ್ಣಾಹುತಿ, ಸಂಜೆ 6 ಗಂಟೆಯಿಂದ ದೀಪ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.  24ರಂದು ಬೆಳಿಗ್ಗೆ 7 ಗಂಟೆಯಿಂದ ಸೋಮೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ಕಲಶಾರಾಧನೆ, ಶತರುದ್ರಾಭಿಷೇಕ, ಏಕಾದಶ ರುದ್ರಹೋಮ, ಮಧ್ಯಾಹ್ನ ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ’ ಎಂದು ಹೇಳಿದರು

‘ಸಂಜೆ 4 ಗಂಟೆಗೆ ಅಮೃತ ಮಹೋತ್ಸವ ಸಮಾರಂಭ ನಡೆಯಲಿದ್ದು, ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಅತಿಥಿಗಳಾಗಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಡಾ.ಮಂತರ್ ಗೌಡ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ, ಎಂ.ಪಿ. ಅಪ್ಪಚ್ಚುರಂಜನ್ ಭಾಗವಹಿಸಲಿದ್ದಾರೆ. ಸಂಜೆ 6.30ರಿಂದ ಮೈಸೂರಿನ ರಾಘವೇಂದ್ರ ಆಚಾರ್ ಅವರಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಡಿ. ವಿಜೇತ್, ನಿರ್ದೇಶಕರಾದ ಶ್ಯಾಮ್ ಸುಂದರ್, ಎಸ್.ಜೆ. ಜಯಂತ್, ರಾಜೇಶ್ ಪದ್ಮನಾಭ್, ಸಿ.ಎನ್. ಸತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT