ಸೋಮವಾರ, ಆಗಸ್ಟ್ 8, 2022
21 °C
ರಸ್ತೆಗಳಿಗೆ ಬಿದ್ದ ಮರಗಳು; ಶಾಂತಳ್ಳಿ ಹೋಬಳಿಯಲ್ಲಿ ಜನಜೀವನ ಅಸ್ತ್ಯವ್ಯಸ್ತ

ಮಡಿಕೇರಿ: ಜಿಲ್ಲೆಯಲ್ಲಿ ಚುರುಕುಗೊಂಡ ಮುಂಗಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದೆ. ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆ ಅಬ್ಬರಿಸುತ್ತಿದೆ. ಮಡಿಕೇರಿಯಲ್ಲಿ, ಶನಿವಾರ ತಡರಾತ್ರಿಯಿಂದಲೂ ಭಾರಿ ಮಳೆ ಸುರಿಯುತ್ತಿದೆ. ಥಂಡಿ ಗಾಳಿ ಜನರನ್ನು ಹೈರಾಣಾಗಿಸಿದೆ.

ಭಾಗಮಂಡಲ, ತಲಕಾವೇರಿ ಭಾಗದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಳ್ಳ, ತೋಡುಗಳಲ್ಲಿ ನೀರು ಹರಿಯಲು ಆರಂಭಿಸಿದೆ.

ತುಂಬಿದ ಹರಿದ ಹಳ್ಳ– ಕೊಳ್ಳ
ಸೋಮವಾರಪೇಟೆ:
ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಶಾಂತಳ್ಳಿ ಹೋಬಳಿಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತ್ಯವ್ಯಸ್ತವಾಗಿದೆ. ಮಳೆಯೊಂದಿಗೆ ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಮಡಿಕೇರಿ- ಹಾಸನ ರಾಜ್ಯ ಹೆದ್ಧಾರಿಯ ಗುಡುಗಳಲೆ ಜಾತ್ರಾ ಮೈದಾನದ ಬಳಿ ಮರದ ಬೃಹತ್ ಕೊಂಬೆಯೊಂದು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಲಾಕ್‌ಡೌನ್ ಇರುವುದರಿಂದ ವಾಹನ ಸಂಚಾರ ಕಡಿಮೆ ಇದ್ದು, ಯಾವುದೇ ಅನಾಹುತವಾಗಿಲ್ಲ.

ಶನಿವಾರಸಂತೆಯ ಸೆಸ್ಕ್ ಇಲಾಖೆಯ ಸಿಬ್ಬಂದಿ ಗಿರೀಶ್, ಸಂದೀಪ್, ಅಭಿಷೇಕ್ ಹಾಗೂ ಸಿದ್ದು ಸ್ಥಳಕ್ಕೆ ಬಂದು ಮರವನ್ನು ಕತ್ತರಿಸಿ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಮೀಪದ ಬೀಟಿಕಟ್ಟೆ ಬಳಿ ಮರ ರಸ್ತೆಗೆ ಬಿದ್ದಿದೆ. ಮರ ತೆರವುಗೊಳಿಸದಿದ್ದರಿಂದ ವಾಹನಗಳು ರಸ್ತೆಯ ಬದಿಯಿಂದ ಸಾಗಿದವು.

ಮಳೆ ಹೆಚ್ಚಾಗುತ್ತಿರುವಂತೆಯೇ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಹೆಚ್ಚಿನ ರೈತರು ತೋಟಗಳಲ್ಲಿ ಬೆಳಿಗ್ಗೆಯಿಂದಲೇ ಕೆಲಸ ಮಾಡುತ್ತಿರುವುದು ಕಂಡು ಬಂದಿತು.

ವರುಣನ ಆರ್ಭಟ
ಸುಂಟಿಕೊಪ್ಪ:
ಸುಂಟಿಕೊಪ್ಪ ಸುತ್ತಮುತ್ತ ಭಾನುವಾರ ಮಳೆ ಮುಂದುವರಿದಿದೆ.

ಶನಿವಾರ ತಡರಾತ್ರಿಯಿಂದ ಆರಂಭವಾದ ಮಳೆ ಎಡೆಬಿಡದೇ ಬೆಳಿಗ್ಗೆ 9 ಗಂಟೆಯವರೆಗೆ ಸುರಿದಿದೆ. ನಂತರ ಆಗಾಗ್ಗೆ ಬಿಡುವು ನೀಡುತ್ತಾ ಸುರಿಯುತ್ತಲೇ ಇದೆ.

ಮಳೆ ಆರಂಭವಾಗುತ್ತಿದ್ದಂತೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸುಂಟಿಕೊಪ್ಪದಲ್ಲಿ ಚಳಿಯ ವಾತಾವರಣ ಸೃಷ್ಟಿಯಾಗಿದ್ದು, ಜನ ಸ್ವೇಟರ್, ಟೋಪಿ ಧರಿಸಿ ಓಡಾಡುತ್ತಿರುವುದು ಕಂಡುಬಂತು.

ಭಾನುವಾರವೂ ಗಾಳಿಯೂ ತುಸು ಹೆಚ್ಚಾಗಿದ್ದರಿಂದ ವ್ಯಾಪ್ತಿಯ ತೋಟಗಳಲ್ಲಿ ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಯಿತು.

ಕೊಡಗರಹಳ್ಳಿ, ಹರದೂರು, ನಾಕೂರು, ಅಂದಗೋವೆ, ಹೋರೂರು, ಹೆರೂರು, ಮತ್ತಿಕಾಡು, ಭೂತನಕಾಡು ಸೇರಿದಂತೆ ಇತರೆಡೆ ಮಳೆಯಾಗಿದೆ.

ಬಿರುಸಿನ ಮಳೆ
ವಿರಾಜಪೇಟೆ:
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆ ಬಿರುಸುಗೊಂಡಿದೆ.

ಶನಿವಾರ ದಿನವಿಡೀ ತುಂತುರು ಮಳೆಯಾದರೆ, ಕತ್ತಲಾಗುತ್ತಿದ್ದಂತೆ ಧಾರಾಕಾರವಾಗಿ ಸುರಿಯಲು ಆರಂಭಿಸಿತು. ರಾತ್ರಿ ಒಂದೇ ಸಮನೆ ನಿರಂತರವಾಗಿ ಸುರಿದ ಮಳೆಯು ಭಾನುವಾರ ಬೆಳಿಗ್ಗೆ ಕೊಂಚ ಇಳಿಮುಖಗೊಂಡಿದೆ. ಆಗಾಗ ಬಿಡುವು ನೀಡುತ್ತಿದ್ದರೂ ತುಂತುರು ಮಳೆ ಆಗುತ್ತಲೇ ಇದೆ.

ಪಟ್ಟಣ ಪ್ರದೇಶವಲ್ಲದೆ ಸಮೀಪದ ಆರ್ಜಿ, ಬೇಟೋಳಿ, ರಾಮನಗರ, ಹೆಗ್ಗಳ, ಮಾಕುಟ್ಟ, ಬಿಟ್ಟಂಗಾಲ, ಬಾಳುಗೋಡು, ಕಂಡಂಗಾಲ, ಕೆದಮುಳ್ಳೂರು, ಕದನೂರು, ಕಾಕೋಟುಪರಂಬು, ಚೆಂಬೆಬೆಳ್ಳೂರು ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.